ಅನಗತ್ಯ ಗರ್ಭಧಾರಣೆ ತಡೆಗಟ್ಟಲು ಪದೇ ಪದೇ ಎಮರ್ಜೆನ್ಸಿ ಪಿಲ್ಸ್ ತೆಗೆದುಕೊಳ್ಳೋದು ಡೇಂಜರ್!
ಮಾರುಕಟ್ಟೆಯಲ್ಲಿ ಎಮರ್ಜೆನ್ಸಿ ಗರ್ಭನಿರೋಧಕ ಮಾತ್ರೆಗಳು ಸುಲಭವಾಗಿ ಲಭ್ಯವಿದೆ. ಅನೇಕ ಮಹಿಳೆಯರು ಗರ್ಭಧಾರಣೆಯನ್ನು ತಡೆಗಟ್ಟಲು ಪದೇ ಪದೇ ಈ ಎಮರ್ಜೆನ್ಸಿ ಮಾತ್ರೆಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಆದರೆ ಪದೇ ಪದೇ ಗರ್ಭನಿರೋಧಕ ಮಾತ್ರೆ ಸೇವಿಸೋದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ ಗೊತ್ತ?
ಅನಗತ್ಯ ಗರ್ಭಧಾರಣೆಯನ್ನು (unwanted pregnancy) ತಡೆಗಟ್ಟಲು ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವುದು ಸಾಮಾನ್ಯ. ಹೆಚ್ಚಿನ ಮಹಿಳೆಯರು ಗರ್ಭಧಾರಣೆ ಬೇಡವಾದಾಗ ಇಂತಹ ಮಾತ್ರೆಗಳನ್ನು ಬಳಸುತ್ತಾರೆ. ಆದರೆ ವೈದ್ಯರ ಸಲಹೆಯಿಲ್ಲದೆ ಮಹಿಳೆಯರು ಈ ಮಾತ್ರೆಗಳನ್ನು ಸೇವಿಸುತ್ತಿರುವುದು ಕಳವಳಕಾರಿ ವಿಷಯ.
ವೈದ್ಯರ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಔಷಧಿಗಳು ತುರ್ತು ಗರ್ಭನಿರೋಧಕ ಮಾತ್ರೆಗಳಾಗಿವೆ (emergency contraceptive pills), ಇದನ್ನು ಮಾರ್ನಿಂಗ್ ಆಫ್ಟರ್ ಪಿಲ್ಸ್ ಎಂದೂ ಕರೆಯಲಾಗುತ್ತದೆ. ಈ ಮಾತ್ರೆಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು ಮತ್ತು ಪದೇ ಪದೇ ಸೇವಿಸಬಾರದು.
ಆದರೆ ಮಹಿಳೆಯರು ಏನ್ ಮಾಡ್ತಾರೆ, ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಲು ಪದೇ ಪದೇ ಈ ಎಮರ್ಜೆನ್ಸಿ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಾರೆ, ಆದರೆ ಇದು ಅವರ ಆರೋಗ್ಯಕ್ಕೆ ದೊಡ್ಡ ಅಪಾಯಗಳನ್ನುಂಟು ಮಾಡುತ್ತದೆ. ಹಾಗೆ ಮಾಡುವುದರಿಂದ ಹಾರ್ಮೋನುಗಳ ಸಮತೋಲನವು ಹದಗೆಡುವುದು ಮಾತ್ರವಲ್ಲದೇ, ಋತುಚಕ್ರದ ಸಮಸ್ಯೆಗಳನ್ನು (periods problem) ಉಂಟುಮಾಡುತ್ತದೆ.
ಹಿರಿಯ ಸ್ತ್ರೀ ರೋಗ ತಜ್ಞರು ಹೇಳುವಂತೆ, ಎಮರ್ಜೆನ್ಸಿ ಗರ್ಭನಿರೋಧಕ ಮಾತ್ರೆಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಗರ್ಭಧಾರಣೆಯನ್ನು ತಡೆಗಟ್ಟಲು ಪದೇ ಪದೇ ಎಮರ್ಜೆನ್ಸಿ ಪಿಲ್ಸ್ ತೆಗೆದುಕೊಳ್ಳುವುದು ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಗರ್ಭಧಾರಣೆಯನ್ನು (pregnancy) ತಡೆಗಟ್ಟಲು ಮಹಿಳೆಯರು ನಿಯಮಿತವಾಗಿ ಗರ್ಭನಿರೋಧಕ ಮಾತ್ರೆಗಳನ್ನು ಬಳಸಿದರೆ ಉತ್ತಮ.
ಎಮರ್ಜೆನ್ಸಿ ಪಿಲ್ಸ್ (emergency pill) ಹೆಚ್ಚಿನ ಪ್ರಮಾಣದ ಹಾರ್ಮೋನುಗಳನ್ನು ಹೊಂದಿರುತ್ತವೆ ಮತ್ತು ಅದರ ಅತಿಯಾದ ಬಳಕೆಯು ಹಾರ್ಮೋನುಗಳ ಸಮತೋಲನವನ್ನು ತೊಂದರೆಗೊಳಿಸುತ್ತದೆ. ಈ ಮಾತ್ರೆಯನ್ನು ಬಳಸಿದ ತಿಂಗಳಲ್ಲಿ ಮಹಿಳೆಯರಿಗೆ ಅನಿಯಮಿತ ರಕ್ತಸ್ರಾವವಾಗುವ ಸಾಧ್ಯತೆ ಇದೆ. ಆದರೆ, ಈ ಮಾತ್ರೆಗಳು ಫರ್ಟಿಲಿಟಿ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬುದು ಸಮಾಧಾನದ ವಿಷಯವಾಗಿದೆ.
ಮತ್ತೊಬ್ಬ ತಜ್ಞರು ಹೇಳುವಂತೆ ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್ (Condom) ಮುರಿದರೆ ಅಥವಾ ಅಸುರಕ್ಷಿತ ಲೈಂಗಿಕ ಕ್ರಿಯೆ (sex) ನಡೆಸಿದರೆ 24 ಗಂಟೆಗಳ ಒಳಗೆ ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಪಿಲ್ಸ್ ಗಳನ್ನು ಮಿತವಾಗಿ ಬಳಸಬೇಕು.
ಹಲವಾರು ತಿಂಗಳಲ್ಲಿ ಒಂದು ಅಥವಾ ಎರಡು ಬಾರಿಗಿಂತ ಹೆಚ್ಚು ತುರ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಅನಿಯಮಿತ ಋತುಚಕ್ರಕ್ಕೆ (irregular periods) ಕಾರಣವಾಗುತ್ತದೆ ಮತ್ತು ಆರೋಗ್ಯವನ್ನು ಹದಗೆಡಿಸುತ್ತದೆ. ಸಾಮಾನ್ಯವಾಗಿ, ಗರ್ಭಧಾರಣೆಯನ್ನು ತಡೆಗಟ್ಟಲು, ಮಹಿಳೆಯರು ವೈದ್ಯರನ್ನು ಸಂಪರ್ಕಿಸಿದ ನಂತರವೇ ನಿಯಮಿತವಾಗಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.
ನಿಯಮಿತ ಮಾತ್ರೆಗಳು 21 ದಿನಗಳ ಲೀಫ್ ಹೊಂದಿರುತ್ತವೆ ಮತ್ತು ಪ್ರತಿ ರಾತ್ರಿ ಒಂದು ಮಾತ್ರೆಯನ್ನು ತೆಗೆದುಕೊಳ್ಳಬೇಕು. ಇದರ ನಂತರ, 7 ದಿನಗಳ ಅಂತರವನ್ನು ನೀಡುವ ಮೂಲಕ ನೀವು ಈ ಮಾತ್ರೆಗಳನ್ನು ಮತ್ತೆ ತೆಗೆದುಕೊಳ್ಳಬಹುದು. ವೈದ್ಯರ ಸಲಹೆಯ ಮೇರೆಗೆ ನೀವು ಈ ಮಾತ್ರೆಗಳನ್ನು ಕೆಲವು ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ ಇದು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ.