ಮದ್ವೆ ಅಂತ ಎಕ್ಸಾಂ ಮಿಸ್ ಮಾಡೋಕಾಗುತ್ತಾ..ಚಿಕ್ಕಂದಿನಲ್ಲೇ ವೈದ್ಯೆಯಾಗುವ ಕನಸು ಕಂಡಿದ್ದ ಕೇರಳದ ವಧು
ಕೇರಳದಲ್ಲೊಬ್ಬ ವಧು ತನ್ನ ಮದ್ವೆ ದಿನವೇ ಲ್ಯಾಬ್‌ಕೋಟ್ ಹಾಗೂ ಸ್ಟೆತಾಸ್ಕೋಪ್ ಧರಿಸಿ ಪರೀಕ್ಷಾ ಹಾಲ್‌ಗೆ ಬಂದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಎಲ್ಲರ ಜೀವನದಲ್ಲಿ ಅತೀ ಮುಖ್ಯವಾಗಿರುವ ಮದ್ವೆ ದಿನವೂ ಎಕ್ಸಾಂ ಬರೆಯಲು ಬಂದಿದ್ಯಾಕೆ ಎಂಬುದರ ಬಗ್ಗೆ ಯುವತಿ ಹೇಳಿದ್ದಾಳೆ. ಆ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
ಮದುವೆಯ ದಿನ ಎಲ್ಲರ ಪಾಲಿಗೆ ಸ್ಪೆಷಲ್ ಆಗಿರುತ್ತದೆ. ಅದರಲ್ಲೂ ಹುಡುಗಿಯರು ಸುಂದರವಾಗಿ ರೆಡಿಯಾಗುತ್ತಾರೆ. ಜರತಾರಿ ಸೀರೆಯನ್ನುಟ್ಟು, ಮೈ ತುಂಬಾ ಆಭರಣಗಳನ್ನು ಧರಿಸಿ, ಮೇಕಪ್ ಮಾಡಿಕೊಂಡು ಕಂಗೊಳಿಸುತ್ತಾರೆ. ಹೀಗೆ ಬ್ರೈಡಲ್ ಲುಕ್‌ನಲ್ಲಿ ವಧು ವೆಡ್ಡಿಂಗ್ ಹಾಲ್‌ನಲ್ಲಿರೋದು ಸರಿ. ಆದ್ರೆ ಇಲ್ಲೊಂದೆಡೆ ಮದುಮಗಳು ಸುಂದರವಾಗಿ ರೆಡಿಯಾಗಿ ವಧುವಿನ ಲುಕ್‌ನಲ್ಲಿ ಎಕ್ಸಾಂ ಹಾಲ್‌ಗೆ ಬಂದಿದ್ದಳು.
ವಧು (Bride) ತನ್ನ ಮದುವೆಯ ಸೀರೆಯಲ್ಲಿ ಲ್ಯಾಬ್‌ಕೋಟ್ ಮತ್ತು ಕುತ್ತಿಗೆ ಸ್ಟೆತಾಸ್ಕೋಪ್ ಹಾಕಿಕೊಂಡು ಪ್ರಾಕ್ಟಿಕಲ್ ಎಕ್ಸಾಂಗೆ ಹಾಜರಾಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿತ್ತು. ವಧುವನ್ನು ಶ್ರೀ ಲಕ್ಷ್ಮಿ ಅನಿಲ್ ಎಂದು ಗುರುತಿಸಲಾಗಿತ್ತು. ಆಕೆಯ ಇನ್‌ಸ್ಟಾಗ್ರಾಂ ಬಯೋ ಪ್ರಕಾರ ಆಕೆ ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ವಿದ್ಯಾರ್ಥಿನಿ (Student)ಯಾಗಿದ್ದಾಳೆ.
ಸದ್ಯ ಹ್ಯೂಮನ್ಸ್ ಆಫ್ ಬಾಂಬೆ ಎಂಬ ಹೆಸರಿನ Instagram ನಲ್ಲಿ ಶ್ರೀ ಲಕ್ಷ್ಮಿ ಅನಿಲ್ ಅವರ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಳ್ಳಲಾಗಿದೆ. ಮದುವೆಯ ದಿನವೂ ಶ್ರೀ ಲಕ್ಷ್ಮಿ ತನ್ನ ವೈದ್ಯಕೀಯ ಪರೀಕ್ಷೆಯನ್ನು ಬರೆಯುವುದು ಅಗತ್ಯವೆಂದು ಪರಿಗಣಿಸಿದ್ದು ಯಾಕೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
ಸ್ವತಃ ಶ್ರೀ ಲಕ್ಷ್ಮಿ ಹೇಳುವಂತೆ ಅವರು, 8ನೇ ವಯಸ್ಸಿನಿಂದ ವೈದ್ಯನಾಗಬೇಕೆಂದು ಕನಸು ಕಂಡಿದ್ದರು. ಒಂದು ದಿನ ಅಮ್ಮ ಅನಾರೋಗ್ಯಕ್ಕೆ ಒಳಗಾದರು, ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ನಾನು ಅಲ್ಲಿ ದಿನಗಳನ್ನು ಕಳೆದೆ. ಕಾರಿಡಾರ್‌ಗಳಲ್ಲಿ ಆ ಬೆಂಚುಗಳ ಮೇಲೆ ಕುಳಿತಾಗ, ಈ ಜನರು ಬಿಳಿ ಕೋಟ್‌ಗಳನ್ನು ಧರಿಸಿದ್ದರು. ಆಗ ನಾನು ವೈದ್ಯೆಯಾಗುವ ಕನಸು ಕಂಡೆ ಎಂದು ಶ್ರೀಲಕ್ಷ್ಮಿ ಹೇಳುತ್ತಾರೆ.
'ನಾನು ಅಂದೇ ಅಮ್ಮನಿಗೆ ನಾನು ವೈದ್ಯೆಯಾಗಿ ಎಲ್ಲರನ್ನೂ ಗುಣಪಡಿಸುತ್ತೇನೆ ಎಂದು ಹೇಳಿಎ. 10 ವರ್ಷಗಳ ಕಾಲ ನಾನು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದೇನೆ. ನನ್ನ ವೈಯಕ್ತಿಕ ಜೀವನವೂ ಚೆನ್ನಾಗಿತ್ತು. ಕಳೆದ ವರ್ಷ ನಾನು ಅಮ್ಮನ ಮೂಲಕ ಒಬ್ಬ ವ್ಯಕ್ತಿಯನ್ನು ಭೇಟಿಯಾದೆ. ನಮ್ಮ ಮೌಲ್ಯಗಳು ಹೊಂದಿಕೆಯಾಗುತ್ತವೆ ಎಂದು ನಾವು ಅರಿತುಕೊಂಡಾಗ, ನಾವು ಮದುವೆಗೆ ಹೌದು ಎಂದು ಹೇಳಿದೆವು. ಅವರು ನನ್ನ ವೃತ್ತಿಯನ್ನು ಬೆಂಬಲಿಸಿದರು' ಎಂದು ಶ್ರೀಲಕ್ಷ್ಮಿ ಹೇಳುತ್ತಾರೆ.
'ನನ್ನ ಮದುವೆಯ ದಿನ ಮತ್ತು ಪರೀಕ್ಷೆಯ ದಿನ ಒಂದೇ ದಿನ ಬರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಆದರೆ ಇದನ್ನು ತಿಳಿದ ಬಳಿಕ ಪರೀಕ್ಷೆಯಿಂದ ಹಿಂದೆ ಸರಿಯಲು ನನ್ನ ಮನಸ್ಸು ಒಪ್ಪಲ್ಲಿಲ್ಲ' ಎಂದು ಶ್ರೀ ಲಕ್ಷ್ಮಿ ಹೇಳಿದರು.
ಶ್ರೀ ಲಕ್ಷ್ಮಿ ಅನಿಲ್ ಅವರ ಕಥೆ ತುಂಬಾ ಸ್ಪೂರ್ತಿದಾಯಕವಾಗಿದೆ. ಪೋಸ್ಟ್ 144 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಅಲ್ಲಿ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಭವಿಷ್ಯದ ಪ್ರಯತ್ನಗಳಿಗಾಗಿ ಜನರು ಅವರನ್ನು ಅಭಿನಂದಿಸಿದ್ದಾರೆ.