ಗಂಡಸರು ಯಾಕೆ ಮನೆಗೆಲಸದಲ್ಲಿ ಹೆಂಡ್ತಿಗೆ ಹೆಲ್ಪ್ ಮಾಡುವುದಿಲ್ಲ?
ಹೆಚ್ಚಿನ ಭಾರತೀಯ ಮನೆಗಳಲ್ಲಿ, ಪುರುಷರು ಮನೆಕೆಲಸಗಳಲ್ಲಿ ಸಹಾಯ ಮಾಡದಿರುವುದು ಸಾಮಾನ್ಯ ಅಭ್ಯಾಸವಾಗಿದೆ. ಇವತ್ತಿನ ದಿನಗಳಲ್ಲಿ ಮಹಿಳೆಯೂ ಪುರುಷರಂತೆ ಹೊರಗೆ ದುಡಿಯುತ್ತಿದ್ದರೂ ಮನೆಗೆಲಸ ಮಾತ್ರ ಆಕೆಯೇ ಮಾಡಬೇಕು. ಯಾಕೆ ಹೀಗೆ? ಗಂಡಸರು ಯಾಕೆ ಮನೆಗೆಲಸ ಮಾಡುವುದಿಲ್ಲ.
ಭಾರತೀಯ ಪದ್ಧತಿಯಲ್ಲಿ ಹೆಂಗಸರೇ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂಬ ಅಲಿಖಿತ ನಿಯಮವಿದೆ. ಗಂಡನಂತೆಯೇ ಹೆಂಡತಿಯೂ ಹೊರಗೆ ದುಡಿದರೂ ಮನೆಯ ಎಲ್ಲ ಕೆಲಸಗಳನ್ನೂ ಒಬ್ಬಳೇ ಮಾಡಬೇಕಾದ ಪರಿಸ್ಥಿತಿ ಹಲವು ಮನೆಗಳಲ್ಲಿದೆ. ಪತಿ ಮನೆಗೆಲಸದಲ್ಲಿ ಸಹಾಯ ಮಾಡದಿರುವುದು ಅನೇಕ ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಒಬ್ಬರೇ ಎಲ್ಲಾ ಕೆಲಸಗಳನ್ನು ಮಾಡಿ ರೋಸಿ ಹೋಗುತ್ತಾರೆ. ಅನೇಕ ಬಾರಿ ಈ ಕಾರಣವು ಸಂಬಂಧವನ್ನು ಡಿವೋರ್ಸ್ ವರೆಗೆ ತಂದು ನಿಲ್ಲಿಸುತ್ತದೆ.
ಅದಕ್ಕಾಗಿಯೇ ಪತಿ-ಪತ್ನಿಯರ ನಡುವಿನ ಈ ಸಮಸ್ಯೆಯನ್ನು ಬಹಳ ಎಚ್ಚರಿಕೆಯಿಂದ ಪರಿಹರಿಸುವ ಅವಶ್ಯಕತೆಯಿದೆ. ಏಕಾಏಕಿ ಗಂಡಸರಲ್ಲಿ ಕೆಲಸ ಮಾಡಲು ಹೇಳುವುದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಬಹುದು. ಮೊದಲಿಗೆ ಗಂಡಸರು ಯಾಕೆ ಮನೆಗೆಲಸವನ್ನು ಮಾಡಲು ಇಷ್ಟಪಡುವುದಿಲ್ಲ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.
ಗಂಡಸರು ಮನೆಗೆಲಸ ಮಾಡುವುದಿಲ್ಲ
ಗಂಡಸರು ಮನೆಗೆಲಸ ಮಾಡುವುದಿಲ್ಲ ಎಂಬುದು ನಮ್ಮ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಇರುವ ಪರಿಕಲ್ಪನೆ. ಕೆಲವು ಕೆಲಸಗಳು ಮಹಿಳೆಯರಿಗೆ ಮಾತ್ರ ಎಂಬ ಅಲಿಖಿತ ನಿಯಮವಿದೆ. ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ಮೊದಲಾದವು. ಹೀಗಿರುವಾಗ ಬಹುತೇಕ ಗಂಡಸರು ಹೀಗೇ ಮಾಡಬೇಕು ಎಂದುಕೊಳ್ಳುತ್ತಾರೆ. ಹೀಗಾಗಿ ಹೆಂಡತಿಗೆ ಮನೆಗೆಲಸದಲ್ಲಿ ನೆರವಾಗುವುದಿಲ್ಲ.
ಮನೆಯಲ್ಲಿ ಕೆಲಸ ಮಾಡಿದ್ದಕ್ಕಾಗಿ ಜನರಿಂದ ಅಪಹಾಸ್ಯ
ಕಾಲ ಅದೆಷ್ಟೆ ಬದಲಾದರೂ ಗಂಡಸರು ಮನೆಯಲ್ಲಿ ಕೆಲಸ ಮಾಡುತ್ತಾರೆಂದರೆ ಜನರು ಅವರನ್ನು ಅಪಹಾಸ್ಯ ಮಾಡುವುದನ್ನು ಬಿಡುವುದಿಲ್ಲ. ಪತಿ ತನ್ನ ತಾಯಿ ಅಥವಾ ಸಂಬಂಧಿಕರ ಮುಂದೆ ತನ್ನ ಹೆಂಡತಿಗೆ ಸಹಾಯ ಮಾಡಿದಾಗ ಎಲ್ಲರೂ ಅವಹೇಳನ ಮಾಡುತ್ತಾರೆ. ಸಹೋದ್ಯೋಗಿಗಳು ಆಡಿಕೊಳ್ಳುತ್ತಾರೆ. ಹೀಗಾಗಿ ಸಹಾಯ ಮಾಡುವ ಮನಸ್ಸಿದ್ದರೂ ಸಹ ಗಂಡಸರು ಹೆಲ್ಪ್ ಮಾಡಲು ಹಿಂಜರಿಯುತ್ತಾರೆ.
ಹೊರಗಿನ ಕೆಲಸದಲ್ಲಿ ನಿರತ
ಗಂಡಸರು ಮನೆಯ ಹೊರಗೆ ಕೆಲಸದಲ್ಲಿ ನಿರತರಾಗಿದ್ದರೆ, ಮನೆಕೆಲಸಗಳಲ್ಲಿ ಅವರು ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಬಹುಶಃ ಅವರು ಬಾಹ್ಯ ಜವಾಬ್ದಾರಿಗಳೊಂದಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಕಾರ್ಯನಿರತರಾಗಿರುತ್ತಾರೆ. ಮನೆಯ ರಿಪೇರಿ, ಮಕ್ಕಳ ಫೀಸ್, ಲೋನ್ ಮೊದಲಾದ ವಿಷಯಗಳತ್ತ ಹೆಚ್ಚು ಗಮನಹರಿಸುತ್ತಾರೆ.
ಜವಾಬ್ದಾರಿ ನಿರ್ವಹಿಸಲು ಇಷ್ಟಪಡುವುದಿಲ್ಲ
ಪತಿ ಕೆಲಸದಲ್ಲಿ ಪಾಲ್ಗೊಳ್ಳದಿದ್ದರೆ, ಅವರು ಬೇಜವಾಬ್ದಾರಿ ವ್ಯಕ್ತಿಯಾಗಿರಬಹುದು. ಅಂತಹ ಜನರು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ವಾಸ್ತವವಾಗಿ, ಹೆಂಡತಿ ಅಸ್ವಸ್ಥರಾಗಿದ್ದಾಗ ಸಹ ಅವರು ಮನೆಕೆಲಸ ಮಾಡಲು ಸಹ ಸಿದ್ಧರಿರುವುದಿಲ್ಲ. ಹೊಟೇಲ್‌ನಿಂದ ಪಾರ್ಸೆಲ್, ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುತ್ತಾರೆ.
ಹಾಗೆಂದು ಎಲ್ಲಾ ಗಂಡಸರು ಹೀಗೆ ಮಾಡುವುದಿಲ್ಲ. ಕೆಲವೊಬ್ಬರು ಮನೆಗೆಲಸದಲ್ಲಿ ಹೆಂಡತಿಗೆ ನೆರವಾಗುತ್ತಾರೆ ಎಂಬುದು ಸಹ ನಿಜ. ಒಟ್ನಲ್ಲಿ ಕಾಲ ಬದಲಾದಂತೆ ಜನರ ಚಿಂತನೆಯೂ ಬದಲಾಬೇಕು ಅಷ್ಟೆ. ಹೆಂಗಸರು ಮಾತ್ರ ಕೆಲಸ ಮಾಡಬೇಕು, ಗಂಡಸರು ಕೆಲಸ ಮಾಡುವುದು ಎಂಬ ಚಿಂತನೆಯನ್ನು ಬಿಟ್ಟು ಬಿಡಬೇಕು.