Healthy Periods ಆಗ್ತಾ ಇದೆಯೋ ಇಲ್ಲವೋ, ಕಂಡು ಹಿಡಿಯೋದು ಹೇಗೆ?
ಋತುಚಕ್ರವು ಯಾವುದೇ ಮಹಿಳೆಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ನೀಡುತ್ತದೆ. ಋತುಚಕ್ರವು ಆರೋಗ್ಯಕರವಾಗಿರಲು ಇದು ಬಹಳ ಮುಖ್ಯ. ಇಲ್ಲಿ ಆರೋಗ್ಯಕರ ಪಿರಿಯಡ್ಸ್ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಾಗಿದೆ. ತಜ್ಞರ ಈ ಸಲಹೆಗಳನ್ನು ನೀವು ತಿಳಿದುಕೊಂಡರೆ ಉತ್ತಮ.

ಯಾವುದೇ ಮಹಿಳೆಯ ಆರೋಗ್ಯಕ್ಕೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಋತುಚಕ್ರವಾಗುವುದು ಬಹಳ ಮುಖ್ಯ. ಸಹಜವಾಗಿ, ಪ್ರತಿ ಮಹಿಳೆಗೆ ತಿಂಗಳಿಗೆ ಒಂದು ಬಾರಿ ಪಿರಿಯಡ್ಸ್ (periods) ಆಗುತ್ತದೆ. ಒಂದು ವೇಳೆ ಆಗದೇ ಇದ್ದರೆ ಅದು ಸಮಸ್ಯೆ. ಪಿರಿಯಡ್ಸ್ ಗೆ ಸಂಬಂಧಿಸಿದ ಅನೇಕ ರೀತಿಯ ಮಿಥ್ಯೆಗಳು ನಮ್ಮ ಸಮಾಜದಲ್ಲಿ ಇನ್ನೂ ಹರಡಿವೆ. ಋತುಚಕ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲು ಇದು ಕಾರಣವಾಗಿದೆ.
ನಿಮ್ಮ ಋತುಚಕ್ರ ಎಷ್ಟು ದೀರ್ಘವಾಗಿದೆ, ಮುಟ್ಟಿನ ರಕ್ತದ ಬಣ್ಣವೇನು?, ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುತ್ತಿದೆಯೇ, ಮುಟ್ಟಿನ ಸಮಯದಲ್ಲಿ ನಿಮಗೆ ನೋವು ಇದೆಯೋ ಇಲ್ಲವೋ, ಇವೆಲ್ಲವೂ ಆರೋಗ್ಯಕ್ಕೆ (healthy periods) ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ನೀವು ಆರೋಗ್ಯಕರ ಪಿರಿಯಡ್ಸ್ ಹೊಂದಿದ್ದೀರಾ ಎಂದು ಯಾರಾದ್ರೂ ಕೇಳಿದ್ರೆ, ಹೌದು ಅಥವಾ ಇಲ್ಲ ಎಂದು ಉತ್ತರಿಸಲು ನಿಮಗೆ ಸಾಧ್ಯವಾಗುವುದಿಲ್ಲ ಅಲ್ವಾ?. ಇದರ ಹಿಂದಿನ ಕಾರಣವೆಂದರೆ ಬಹುಶಃ ನೀವು ಈ ವಿಷಯಕ್ಕೆ ಉತ್ತರದ ಬಗ್ಗೆ ಕನ್ ಫ್ಯೂಶನ್ ಗೆ ಒಳಗಾಗಿರಬಹುದು. ನೀವು ಆರೋಗ್ಯಕರ ಪಿರಿಯಡ್ಸ್ ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಯಾವ ಚಿಹ್ನೆಗಳಿಂದ ನೀವು ಗುರುತಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಪಿರಿಯಡ್ಸ್ 26-35 ದಿನಗಳ ನಡುವೆ ಬರಬೇಕು. ನಿಮ್ಮ ಋತುಚಕ್ರವು 4-5 ದಿನಗಳಿಗಿಂತ ಹೆಚ್ಚು ವಿಳಂಬವಾದರೆ ಅಥವಾ 26 ದಿನಗಳ ಅಂತರದ ಮೊದಲು ನೀವು ಮತ್ತೆ ಋತುಚಕ್ರವನ್ನು ಪಡೆದರೆ, ಅದು ನಿಮ್ಮ ಹಾರ್ಮೋನುಗಳಲ್ಲಿನ ತೊಂದರೆಗಳ (hormone imbalance) ಸಂಕೇತ. ಈ ಅವಧಿಯಲ್ಲಿ ಹರಿವು ಸುಮಾರು 6 ದಿನಗಳವರೆಗೆ ಇರಬೇಕು. ಋತುಚಕ್ರವು ಇದಕ್ಕಿಂತ ಹೆಚ್ಚು ಕಾಲ ಇದ್ದರೆ, ಅದು ಒಳ್ಳೆಯದಲ್ಲ.
ಋತುಚಕ್ರದಲ್ಲಿ ನೋವು
ಪಿರಿಯಡ್ಸ್ ಸಮಯದಲ್ಲಿ ನೋವು (periods cramp) ಸಾಮಾನ್ಯ ಮತ್ತು ಅದನ್ನು ಸಹಿಸಿಕೊಳ್ಳಬೇಕು ಎಂದು ಹುಡುಗಿಯರಿಗೆ ಯಾವಾಗಲೂ ಹೇಳಲಾಗುತ್ತೆ. ಆದರೆ ವಾಸ್ತವವಾಗಿ, ಋತುಚಕ್ರದ ಮೊದಲು ಅಥವಾ ಆ ಸಮಯದಲ್ಲಿ ನಿಮಗೆ ಕಾಲುಗಳು, ಸೊಂಟ ಅಥವಾ ಹೊಟ್ಟೆಯಲ್ಲಿ ನೋವು ಇದ್ದರೆ, ಅದು ಸಾಮಾನ್ಯವಲ್ಲ. ಸೌಮ್ಯ ನೋವನ್ನು ಒಮ್ಮೆ ನಿರ್ಲಕ್ಷಿಸಬಹುದು, ಆದರೆ ಅತಿಯಾದ ನೋವು ಇದ್ದರೆ ಅದನ್ನು ಸಹಿಸಿಕೊಳ್ಳುವ ಬದಲು, ವೈದ್ಯಕೀಯ ಸಲಹೆ ಪಡೆಯಿರಿ.
ಋತುಚಕ್ರದಲ್ಲಿ ಹೆಪ್ಪುಗಟ್ಟಿದ ರಕ್ತಸ್ರಾವ
ಋತುಚಕ್ರದ ಹರಿವಿನಲ್ಲಿ ನೀವು ಭಾರಿ ಹೆಪ್ಪುಗಟ್ಟಿದ ರಕ್ತ (blood clot) ಸ್ರಾವವಾಗುತ್ತಿದ್ದರೆ ಅದರ ಬಣ್ಣವು ಗಾಢ ಕೆಂಪು ಬಣ್ಣದಲ್ಲಿದ್ದರೆ, ಅದು ಅನಾರೋಗ್ಯಕರ ಋತುಚಕ್ರದ ಸಂಕೇತವಾಗಿದೆ. ಅದನ್ನು ನಿರ್ಲಕ್ಷಿಸಬಾರದು ಎಂಬುದನ್ನು ನೆನಪಿನಲ್ಲಿಡಿ.
PMS ಆಗದೇ ಇರೋದು ಕೂಡ ಸಾಮಾನ್ಯ
ಋತುಚಕ್ರದ ಮೊದಲು ನೀವು ಪಿಎಂಎಸ್‌ನ ರೋಗಲಕ್ಷಣಗಳನ್ನು ಅಂದರೆ ಪ್ರಿ ಮೆನ್ಸ್‌ಟ್ರುಯಲ್ ಸಿಂಡ್ರೋಮ್ (premenstrual syndrome) ಅನ್ನು ಅನುಭವಿಸದಿದ್ದರೆ, ಇದು ಉತ್ತಮ ಸಂಕೇತ. ಅನೇಕ ಮಹಿಳೆಯರು ಋತುಚಕ್ರದ 1-2 ವಾರಗಳ ಮೊದಲು ಮೂಡ್ ಸ್ವಿಂಗ್, ಕಿರಿಕಿರಿ, ಕಡುಬಯಕೆಗಳು, ತಲೆನೋವುಗಳಂತಹ ಸಮಸ್ಯೆಗಳನ್ನು ಹೊಂದಲು ಪ್ರಾರಂಭಿಸುತ್ತಾರೆ. ಹಾರ್ಮೋನುಗಳಲ್ಲಿನ ಬದಲಾವಣೆಗಳು ಇದಕ್ಕೆ ಕಾರಣ. ನೀವು ಈ ರೋಗಲಕ್ಷಣಗಳನ್ನು ಅನುಭವಿಸದಿದ್ದರೆ ಅದು ಆರೋಗ್ಯಕರ ಋತುಚಕ್ರದ ಸಂಕೇತವಾಗಿದೆ.