ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ ಮಾಡಿ ವಿಶ್ವ ದಾಖಲೆ ಬರೆದ 71ರ ಮಹಿಳೆ
ಸಾಧಿಸುವ ಛಲ ಇದ್ದಾಗ, ವಯಸ್ಸು ಮುಖ್ಯವಾಗೋದಿಲ್ಲ. ಇದನ್ನು 71 ವರ್ಷದ ಮಹಿಳಾ ಸೈಕ್ಲಿಸ್ಟ್ ವಿಶವ್ ಧಿಮನ್ ಸಾಬೀತುಪಡಿಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕ್ಲಿಂಗ್ ಮಾಡುವ ಮೂಲಕ ವಿಶವ್ ಧಿಮನ್ ಇತಿಹಾಸ ನಿರ್ಮಿಸಿದ್ದಾರೆ.

ವಿಪತ್ತಿನ ಸಮಯದಲ್ಲೂ ಸಹ ಅವಕಾಶಗಳನ್ನು ಹೇಗೆ ಕಂಡುಕೊಳ್ಳುವುದು ಎಂಬುದಕ್ಕೆ 71 ವರ್ಷದ ಮಹಿಳಾ ಸೈಕ್ಲಿಸ್ಟ್ ವಿಶವ್ ಧಿಮನ್ (Vishav Dhiman) ಬೆಸ್ಟ್ ಉದಾಹರಣೆ. ಯಾಕಂದ್ರೆ ಮೊಣಕಾಲು ನೋವನ್ನು ನಿವಾರಿಸಲು ಸೈಕ್ಲಿಂಗ್ ಪ್ರಾರಂಭಿಸಿದ ಅವರು, ಇದೀಗ ಸೈಕ್ಲಿಂಗ್ ಮೂಲಕವೇ ವಿಶ್ವಪ್ರಸಿದ್ಧಿ ಪಡೆದಿದ್ದಾರೆ. ಇತ್ತೀಚೆಗೆ ವಿಶವ್ ಧಿಮನ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಅವರ ಸೈಕ್ಲಿಂಗ್ ಪ್ರಯಾಣ ಹೇಗೆ ಪ್ರಾರಂಭವಾಯಿತು ಎಂಬುದರ ಬಗ್ಗೆ ವಿಶವ್ ಧಿಮನ್ ಅವರು ಏನು ಹೇಳಿದ್ದಾರೆ ನೋಡೋಣ ಬನ್ನಿ
ಮೊಣಕಾಲು ನೋವು ನನ್ನನ್ನು ಸೈಕ್ಲಿಸ್ಟ್ ಆಗಿ ಮಾಡಿತು
ಆ ದಿನಗಳಲ್ಲಿ ವಿಶವ್ ಮೊಣಕಾಲು ನೋವಿನಿಂದ ತೊಂದರೆಗೀಡಾಗಿದ್ದರಂತೆ, ಎಷ್ಟು ಸಮಸ್ಯೆಯಾಗಿತ್ತು ಅಂದ್ರೆ, ವೈದ್ಯರು ನೀ ರೀಪ್ಲೇಸ್ ಮೆಂಟ್ (Knee Replacement) ಮಾಡುವಂತೆ ತಿಳಿಸಿದ್ದರು. ಆದರೆ ಅದಕ್ಕೆ ವಿಶ್ವ ಸಿದ್ಧರಿರಲಿಲ್ಲ. ಅದಕ್ಕಾಗಿ ಬೇರೆ ಚಿಕಿತ್ಸೆಗಾಗಿ ಹುಡುಕಾಟ ನಡೆಸಿದ್ದರಂತೆ. ಆ ಸಮಯದಲ್ಲಿ ಅವರು ಮಗನೊಂದಿಗೆ ಇರಲು ಅಮೆರಿಕಾಕ್ಕೆ ತೆರಳಿದ್ದರಂತೆ. ಆ ಸಮಯದಲ್ಲಿ ಮಗ ಇವರಿಗೆ ಬೈಸಿಕಲ್ ಓಡಿಸೋದಕ್ಕೆ ಸೂಚಿಸಿದರು. ಸೈಕಲ್ ಓಡಿಸಿದ್ರೆ ಮೊಣಕಾಲು ನೋವು ನಿವಾರಣೆಯಾಗುತ್ತ ಅನ್ನೋದೆ ಅಚ್ಚರಿಯಾಯಿತು. ಆದರೆ ನೋವನ್ನು ನಿವಾರಿಸಲು ಸೈಕ್ಲಿಂಗ್ ಆರಂಭಿಸಿದ್ರಂತೆ ವಿಶವ್ .
ಸ್ವಲ್ಪ ಸಮಯದವರೆಗೆ, ಹೆಚ್ಚಿನ ವ್ಯತ್ಯಾಸ ಕಾಣಿಸಿರಲಿಲ್ಲ. ಆದರೆ ಕ್ರಮೇಣ, ಮೊಣಕಾಲು ನೋವಿನಿಂದ ಪರಿಹಾರವನ್ನು ಅನುಭವಿಸಲು ಪ್ರಾರಂಭಿಸಿದರಂತೆ ವಿಶವ್. ಸೈಕ್ಲಿಂಗ್ ನಲ್ಲಿ ನಾನು ಜೀವ ಉಳಿಸುವ ಮದ್ದನ್ನು ಕಂಡುಕೊಂಡಂತೆ ಭಾಸವಾಯಿತು. ಅಂದಿನಿಂದ, ನಾನು ಪ್ರತಿದಿನ ಸೈಕ್ಲಿಂಗ್ ಮಾಡಲು ಪ್ರಾರಂಭಿಸಿದೆ ಮತ್ತು ನನ್ನ ಜೀವನವು ಬದಲಾಯಿತು ಎನ್ನುತ್ತಾರೆ ವಿಶವ್.
ಸೀಕ್ರೆಟ್ ಆಗಿ ಸೈಕ್ಲಿಂಗ್ ಮಾಡುತ್ತಿದ್ದ ವಿಶವ್
ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದಾಗ, 60 ವರ್ಷದ ನಂತರ ಬೈಸಿಕಲ್ ಸವಾರಿ ಮಾಡುವುದು ಇಲ್ಲಿ ಅಷ್ಟು ಸುಲಭವಲ್ಲ. ಈ ವಯಸ್ಸಲ್ಲಿ ಬೈಸಿಕಲ್ ಸವಾರಿ ಮಾಡುವುದನ್ನು ನೋಡಿದರೆ ಜನರು ಏನು ಹೇಳುತ್ತಾರೆ ಎನ್ನುವ ಬಗ್ಗೆ ಚಿಂತಿತರಾಗಿದ್ದರಂತೆ ವಿಶವ್. ಬಳಿಕ ಈ ವಿಷಯದಲ್ಲಿ ಅವರ ಪತಿ ಬೆಂಬಲ ನೀಡಿದರು. ಪತಿ ಬೆಳಿಗ್ಗೆ ಬೇಗನೆ ಎದ್ದು ವಿಶವ್ ಜೊತೆ ಸೈಕ್ಲಿಂಗ್ ಗೆ ಹೋಗುತ್ತಿದ್ದರು. ಜನ ನೋಡಿ ಏನಾದ್ರೂ ಹೇಳಿದ್ರೆ, ಎಂದು ಬೆಳಗ್ಗೆನೆ ಎದ್ದು ಸೈಕ್ಲಿಂಗ್ ಮಾಡುತ್ತಿದ್ದರಂತೆ. ಊರು ಎಚ್ಚರವಾಗುವಷ್ಟರಲ್ಲಿ ಮನೆ ತಲುಪುತ್ತಿದ್ದರಂತೆ ಇವರು.
ವಿಶವ್ ಹೇಳಿದ್ದೇನು?
ನನ್ನ ಆರೋಗ್ಯ ಸುಧಾರಿಸಲು ಪ್ರಾರಂಭಿಸುತ್ತಿದ್ದಂತೆ, ನನ್ನ ಆತ್ಮವಿಶ್ವಾಸ ಬೆಳೆಯಿತು. ನಂತರ ನಾನು ಜನರ ಮುಂದೆ ಬೈಸಿಕಲ್ ಸವಾರಿ ಮಾಡಲು ಪ್ರಾರಂಭಿಸಿದೆ. ಈ ಪ್ರಯಾಣದುದ್ದಕ್ಕೂ, ನನ್ನ ಪತಿ ಕಮಲ್ಜೀತ್ ಧಿಮನ್ (Kamaljith Dhiman) ಯಾವಾಗಲೂ ನನ್ನನ್ನು ಬೆಂಬಲಿಸಿದರು ಎಂದು ಹೇಳುತ್ತಾರೆ ಈ ಧಿಟ್ಟ ಮಹಿಳೆ.
ಸೈಕ್ಲಿಂಗ್ ವಿಶವ್ ಆರೋಗ್ಯವನ್ನು ಸುಧಾರಿಸಿತು
ಕ್ರಮೇಣ, ವಿಶವ್ ಹಾಗೂ ಅವರ ಪತಿ ಕಮಲ್ಜೀತ್ ಸೈಕ್ಲೋಥಾನ್ ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರಂತೆ. ಆರಂಭದಲ್ಲಿ, ವಿಶವ್ ಅವರಿಗೆ ಕೇವಲ ಹತ್ತು ಕಿಲೋಮೀಟರ್ ಸೈಕಲ್ ತುಳಿಯಲು ಸಾಧ್ಯವಾಗಿರಲಿಲ್ಲ. ಆದರೆ ದೈನಂದಿನ ಅಭ್ಯಾಸದೊಂದಿಗೆ, ಅವರ ವೇಗ ಮತ್ತು ಆರೋಗ್ಯ ಎರಡೂ ಸುಧಾರಿಸಲು ಪ್ರಾರಂಭಿಸಿತು. ಅದರ ನಂತರ, ವಿಶವ್ ದೇಶಾದ್ಯಂತ ಹಲವಾರು ಸೈಕ್ಲೋಥಾನ್ ಗಳಲ್ಲಿ ಭಾಗವಹಿಸಿದರು , ಜೊತೆಗೆ ಅನೇಕ ಪ್ರಶಸ್ತಿಗಳನ್ನು ಸಹ ಗೆದ್ದರು. ನಂತರ ಸೈಕ್ಲಿಂಗ್ ನನ್ನ ಪ್ಯಾಶನ್ ಆಗಿ, ಈಗ ಸ್ಲೈಕ್ಲಿಂಗ್ ನನ್ನ ಗುರುತಾಗಿದೆ ಎನ್ನುತ್ತಾರೆ ವಿಷವ್.
71ನೇ ವಯಸ್ಸಿನಲ್ಲಿ ವಿಶ್ವ ದಾಖಲೆ ನಿರ್ಮಿಸಿದರು
ವಿಶವ್ ಮತ್ತು ಅವರ ಪತಿ ಕಮಲ್ಜೀತ್ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ತುಳಿಯಲು ಬಹಳ ಸಮಯದಿಂದ ಬಯಸಿದ್ದರು. ಅಂತಿಮವಾಗಿ, ಜನವರಿ 1, 2024 ರಂದು, ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. 71 ನೇ ವಯಸ್ಸಿನಲ್ಲಿ 36 ದಿನಗಳ ಕಾಲ ಸುಮಾರು 3870 ಕಿಲೋಮೀಟರ್ ಸೈಕಲ್ ತುಳಿಯುವುದು ಮಹಿಳೆಗೆ ಸುಲಭದ ಕೆಲಸವಲ್ಲ. ಆದರೆ ವಿಶವ್ ಮತ್ತು ಕಮಲ್ಜೀತ್ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ತುಳಿದ ಅತ್ಯಂತ ಹಿರಿಯ ಜೋಡಿಗಳಾಗಿ ದಾಖಲೆ ನಿರ್ಮಿಸಿದ್ದಾರೆ.
ನಾನು ಮಹಿಳೆಯರನ್ನು ಪ್ರೋತ್ಸಾಹಿಸುತ್ತೇನೆ ಎಂದ ವಿಶನ್
ವಿಶವ್ ಡೆಹ್ರಾಡೂನ್ ನಿವಾಸಿ. ಸಣ್ಣ ಪಟ್ಟಣಗಳಲ್ಲಿನ ಮಹಿಳೆಯರು ಇನ್ನೂ ಬೈಸಿಕಲ್ ಸವಾರಿ ಮಾಡಲು ಹಿಂಜರಿಯುತ್ತಾರೆ. ನಾನು ಮಹಿಳೆಯರನ್ನು ಪ್ರೋತ್ಸಾಹಿಸುತ್ತೇನೆ. ಬೈಸಿಕಲ್ ಸವಾರಿ ಮಾಡಲು ನಾನು ಮಹಿಳೆಯರಿಗೆ ಪ್ರೇರಣೆ ನೀಡುತ್ತೇನೆ. ಸೈಕ್ಲಿಂಗ್ ನಿಂದ ಅನೇಕ ಪ್ರಯೋಜನಗಳಿವೆ. ಇದು ಮಹಿಳೆಯರ ಆರೋಗ್ಯ, ಫಿಟ್ನೆಸ್ ಮತ್ತು ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ ಎನ್ನುತ್ತಾರೆ ವಿಶ್ವ ದಾಖಲೆ ಬರೆದ ಈ ದಿಟ್ಟ ಮಹಿಳೆ.