- Home
- Viral News
- 1.92 ಲಕ್ಷದಿಂದ 57.8 ಲಕ್ಷ ರೂ. ಸಂಬಳಕ್ಕೆ ಜಂಪ್: ಸಿಎ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದ ಬೆಂಗಳೂರು ಹುಡುಗನ ಯಶೋಗಾಥೆ!
1.92 ಲಕ್ಷದಿಂದ 57.8 ಲಕ್ಷ ರೂ. ಸಂಬಳಕ್ಕೆ ಜಂಪ್: ಸಿಎ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದ ಬೆಂಗಳೂರು ಹುಡುಗನ ಯಶೋಗಾಥೆ!
ಬೆಂಗಳೂರಿನ ಅನಿರುದ್ಧ್ ರಾಪೋಲ್, 10ವರ್ಷಗಳಲ್ಲಿ ತಮ್ಮ ಸಿಎ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸು ಕಂಡಿದ್ದಾರೆ. ಕೆಪಿಎಂಜಿ ಸಂಸ್ಥೆಯಲ್ಲಿ 1.92ಲಕ್ಷ ರೂ. ಸ್ಟೈಫಂಡ್‌ನಿಂದ ಆರಂಭಿಸಿ, ಸ್ವೀಡನ್‌ನಲ್ಲಿ 57.8ಲಕ್ಷ ರೂ. ವಾರ್ಷಿಕ ವೇತನದವರೆಗೆ ಬೆಳೆದ ತಮ್ಮ ಸ್ಪೂರ್ತಿದಾಯಕ ಪಯಣವನ್ನು ಅವರು ಹಂಚಿಕೊಂಡಿದ್ದಾರೆ.

CA ವೃತ್ತಿಜೀವನವು ಒಬ್ಬ ವ್ಯಕ್ತಿಯ ಬದುಕನ್ನು ಹೇಗೆ ಬದಲಾಯಿಸಬಲ್ಲದು
ಬೆಂಗಳೂರು: ಶ್ರಮ ವಹಿಸಿ ಓದಿದರೆ ಚಾರ್ಟರ್ಡ್ ಅಕೌಂಟೆನ್ಸಿ (CA) ವೃತ್ತಿಜೀವನವು ಒಬ್ಬ ವ್ಯಕ್ತಿಯ ಬದುಕನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಬೆಂಗಳೂರಿನ ಅನಿರುದ್ಧ್ ರಾಪೋಲ್ ಅವರ ಯಶೋಗಾಥೆಯೇ ಸಾಕ್ಷಿ. 2013 ರಲ್ಲಿ ಕೇವಲ 1.92 ಲಕ್ಷ ರೂಪಾಯಿಗಳ ವಾರ್ಷಿಕ ಸ್ಟೈಫಂಡ್‌ನೊಂದಿಗೆ ಪ್ರಸಿದ್ಧ ‘KPMG’ ಸಂಸ್ಥೆಯಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಆರಂಭಿಸಿದ ಅನಿರುದ್ಧ್, ಕೇವಲ ಹತ್ತು ವರ್ಷಗಳಲ್ಲಿ ಅಂದರೆ 2022 ರ ವೇಳೆಗೆ ಸ್ವೀಡನ್‌ನ KPMG ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಬರೋಬ್ಬರಿ 57.8 ಲಕ್ಷ ರೂಪಾಯಿಗಳ ವಾರ್ಷಿಕ ವೇತನ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ.
ತಮ್ಮ ಈ ರೋಮಾಂಚಕ ಹಾಗೂ ಸ್ಪೂರ್ತಿದಾಯಕ 10 ವರ್ಷಗಳ ವೃತ್ತಿಜೀವನದ ಏರಿಳಿತದ ಪಯಣವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. "ಕೆಪಿಎಂಜಿಯಲ್ಲಿ ಸಿಎ ಆಗಿ ನನ್ನ ಸಂಬಳ - ವಯಸ್ಸು 18 ರಿಂದ 28" ಎಂಬ ಶೀರ್ಷಿಕೆಯಡಿ ಅನಿರುದ್ಧ್ ತಮ್ಮ ವೃತ್ತಿಜೀವನದ ಸಂಪೂರ್ಣ ಆದಾಯದ ವಿವರಗಳನ್ನು ಪಾರದರ್ಶಕವಾಗಿ ಬಿಚ್ಚಿಟ್ಟಿದ್ದಾರೆ.
ಹಂತ ಹಂತವಾಗಿ ಮುನ್ನಡೆದ ಆರ್ಥಿಕ ಪ್ರಗತಿಯ ಹಾದಿ
- 2013 (ಆರ್ಟಿಕಲ್‌ಶಿಪ್ ಮೊದಲ ವರ್ಷ): KPMG ಇಂಡಿಯಾದಲ್ಲಿ ತರಬೇತಿ ನಿರತ ವಿದ್ಯಾರ್ಥಿಯಾಗಿ ವೃತ್ತಿಜೀವನ ಆರಂಭಿಸಿದಾಗ ಅವರ ವಾರ್ಷಿಕ ಗಳಿಕೆ ಕೇವಲ 1.92 ಲಕ್ಷ ರೂ. ಆಗಿತ್ತು.
- 2014 & 2015 (ತರಬೇತಿಯ ಮುಂದಿನ ವರ್ಷಗಳು): ಎರಡನೇ ವರ್ಷದಲ್ಲಿ ಇವರ ವೇತನ 2.52 ಲಕ್ಷ ರೂ. ಹಾಗೂ ಮೂರನೇ ವರ್ಷದಲ್ಲಿ 3.36 ಲಕ್ಷ ರೂ. ಗೆ ಏರಿಕೆಯಾಯಿತು.
- 2016 (ಅರ್ಹ ಸಿಎ ಆಗಿ ನೇಮಕಾತಿ): ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸ್ ಆದ ನಂತರ, ಅದೇ KPMG ಸಂಸ್ಥೆಯಲ್ಲಿ 'ಸೀನಿಯರ್' ಹುದ್ದೆಗೆ ಬಡ್ತಿ ಪಡೆದರು. ಈ ವೇಳೆ ಬೋನಸ್ ಒಳಗೊಂಡಂತೆ ಅವರ ವಾರ್ಷಿಕ ಸಂಬಳ 8.5 ಲಕ್ಷ ರೂ. ತಲುಪಿತು.
- 2018 (ಅಸಿಸ್ಟೆಂಟ್ ಮ್ಯಾನೇಜರ್): ಸಂಸ್ಥೆಯಲ್ಲಿ ನಿರಂತರ ಪ್ರದರ್ಶನ ತೋರಿದ ಇವರಿಗೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು. ಆಗ ಬೋನಸ್ ಸಮೇತ ವಾರ್ಷಿಕ ವೇತನ 13.5 ಲಕ್ಷ ರೂ. ಆಯಿತು.
- 2021 (ಸ್ವೀಡನ್‌ಗೆ ಪಯಣ): ಸೆಪ್ಟೆಂಬರ್ 2013 ರಿಂದ ಡಿಸೆಂಬರ್ 2020 ರವರೆಗೆ KPMG ಭಾರತದಲ್ಲಿ ಸೇವೆ ಸಲ್ಲಿಸಿದ ಅನಿರುದ್ಧ್, ಜನವರಿ 2021 ರಲ್ಲಿ 'KPMG ಸ್ವೀಡನ್' ಸಂಸ್ಥೆಗೆ 'ಅಸಿಸ್ಟೆಂಟ್ ಮ್ಯಾನೇಜರ್ 2' ಆಗಿ ಆಯ್ಕೆಯಾದರು. ಆಗ ಅವರ ವಾರ್ಷಿಕ ಗಳಿಕೆ ಬರೋಬ್ಬರಿ 46.3 ಲಕ್ಷ ರೂ. ಗೆ ಜಿಗಿಯಿತು.
- 2022 (ಮ್ಯಾನೇಜರ್ ಹುದ್ದೆ): ಸ್ವೀಡನ್‌ನಲ್ಲೇ ಮ್ಯಾನೇಜರ್ ಆಗಿ ಬಡ್ತಿ ಪಡೆದ ಇವರ ವಾರ್ಷಿಕ ವೇತನ ಬೋನಸ್ ಒಳಗೊಂಡಂತೆ 57.8 ಲಕ್ಷ ರೂ. ಗಳ ಗಡಿಯನ್ನು ತಲುಪಿತು.
ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮತ್ತು ಕಾರ್ಪೊರೇಟ್ ನಾಯಕತ್ವ
ಕೇವಲ ಸಿಎ ಪದವಿಗೆ ತೃಪ್ತರಾಗದ ಅನಿರುದ್ಧ್, ತಮ್ಮ ನಾಯಕತ್ವದ ಗುಣಗಳನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅಹಮದಾಬಾದ್ ಸೇರಿದರು. ಏಪ್ರಿಲ್ 2023 ರಿಂದ ಮಾರ್ಚ್ 2024 ರ ಅವಧಿಯಲ್ಲಿ ಅವರು ಸ್ಟ್ರಾಟಜಿ ಮತ್ತು ಮಾರ್ಕೆಟಿಂಗ್ ವಿಷಯದಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪ್ರಸ್ತುತ ಅವರು ಏಪ್ರಿಲ್ 2026 ರಿಂದ ಜನಪ್ರಿಯ ಫಿನ್‌ಟೆಕ್ ಸಂಸ್ಥೆಯಾದ 'ಝಾಗಲ್' (Zaggle) ನಲ್ಲಿ ಪ್ರಮುಖ ಲೀಡರ್‌ಶಿಪ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಎ ಒಂದು ನಿಜವಾದ ಸಮಾನತೆಯ ವೃತ್ತಿ
ತಮ್ಮ ವೀಡಿಯೊದ ವಿವರಣೆಯಲ್ಲಿ ಅನಿರುದ್ಧ್ ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯ ಬಗ್ಗೆ ಅತ್ಯಂತ ಗೌರವದ ಮಾತುಗಳನ್ನಾಡಿದ್ದಾರೆ. "ಸಿಎ ಎಂಬುದು ನಿಜವಾದ ಸಮಾನತೆಯ ವೃತ್ತಿ. ಇದು ಜಗತ್ತಿನ ಎಲ್ಲರಿಗೂ ಮುಕ್ತವಾಗಿದೆ. ಇಲ್ಲಿ ಯಾವುದೇ ರೀತಿಯ ಮೀಸಲಾತಿಗಳಿಲ್ಲ, ಎಲ್ಲರೂ ಸಮಾನರು. ಕಠಿಣ ಪರಿಶ್ರಮ ಮತ್ತು ಸ್ಥಿರತೆ ಇದ್ದರೆ ಮಾತ್ರ ಚಾರ್ಟರ್ಡ್ ಅಕೌಂಟೆಂಟ್ ಆಗಿ ಜೀವನದಲ್ಲಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಅದ್ಭುತವಾಗಿ ಬೆಳೆಯಲು ಸಾಧ್ಯವಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಕುಟುಂಬದಲ್ಲೇ ತಾವೇ ಮೊದಲ ಚಾರ್ಟರ್ಡ್ ಅಕೌಂಟೆಂಟ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅನಿರುದ್ಧ್, ತಾವು ಕಲಿಯುವಾಗ ಯಾವುದೇ ವೃತ್ತಿಪರ ಮಾರ್ಗದರ್ಶನ ನೀಡುವವರು ಇರಲಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾರೆ. "ನನಗೆ ಯಾವುದೇ ಹಿನ್ನೆಲೆ ಅಥವಾ ಗೈಡೆನ್ಸ್ ಇರಲಿಲ್ಲ. ಆದರೆ ದಾರಿಯುದ್ದಕ್ಕೂ ಸರಿಯಾದ ಹಾದಿಯನ್ನು ಕಂಡುಕೊಳ್ಳುವಲ್ಲಿ ನಾನು ಅದೃಷ್ಟಶಾಲಿಯಾಗಿದ್ದೆ. ಪ್ರಮುಖವಾಗಿ KPMG ಸಂಸ್ಥೆಯಲ್ಲಿ ನಾನು ಪಡೆದ ಆರ್ಟಿಕಲ್‌ಶಿಪ್ ತರಬೇತಿಯೇ ನನ್ನ ವೃತ್ತಿಜೀವನದ ಪಥವನ್ನು ಸಂಪೂರ್ಣವಾಗಿ ಬದಲಾಯಿಸಿತು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇದು ದುರಹಂಕಾರದ ಪೋಸ್ಟ್ ಅಲ್ಲ, ಬದಲಿಗೆ ಜಾಗೃತಿಯ ನಡೆ!
ತಮ್ಮ ಗಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡಿರುವ ಅನಿರುದ್ಧ್, "ಇದು ನನ್ನ ಸಂಬಳದ ಬಗ್ಗೆ ಹೆಮ್ಮೆ ಪಡುವ ಅಥವಾ ಅಹಂಕಾರ ಪ್ರದರ್ಶಿಸುವ ಪೋಸ್ಟ್ ಖಂಡಿತ ಅಲ್ಲ. ಜಗತ್ತಿನ ಟಾಪ್ ಬಿಗ್ 4 (Big 4) ಕಂಪನಿಗಳಲ್ಲಿ ಕೆಲಸ ಮಾಡುವ ಒಬ್ಬ ಸಿಎ ವೃತ್ತಿಜೀವನವು ವರ್ಷಗಳ ಅವಧಿಯಲ್ಲಿ ಹೇಗೆ ಬದಲಾಗುತ್ತಾ ಹೋಗುತ್ತದೆ ಎಂಬ ನೈಜ ಚಿತ್ರಣವನ್ನು ಮಹತ್ವಾಕಾಂಕ್ಷಿ ಸಿಎ ವಿದ್ಯಾರ್ಥಿಗಳಿಗೆ ತೋರಿಸುವುದು ಮಾತ್ರ ನನ್ನ ಉದ್ದೇಶ ಎಂದಿದ್ದಾರೆ.
ಅಲ್ಲದೆ, ವೀಕ್ಷಕರು ಭಾರತ ಮತ್ತು ಸ್ವೀಡನ್ ದೇಶಗಳ ನಡುವಿನ ಖರೀದಿ ಸಾಮರ್ಥ್ಯದ ಸಮಾನತೆ (Purchasing Power Parity - PPP) ಮತ್ತು ಜೀವನ ವೆಚ್ಚದ (Cost of Living) ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ. ಈ ವಿಡಿಯೋ ಕೇವಲ ವೃತ್ತಿಜೀವನದ ಪ್ರಗತಿಯನ್ನು ತೋರಿಸಲು ಮಾತ್ರವೇ ಹೊರತು ಎರಡು ದೇಶಗಳ ವೇತನವನ್ನು ಹೋಲಿಕೆ ಮಾಡಲು ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುವ ವೃತ್ತಿಪರರಿಂದ ವ್ಯಾಪಕ ಪ್ರಶಂಸೆ
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಅನಿರುದ್ಧ್ ಅವರ ಈ ಪಾರದರ್ಶಕ ನಡೆಗೆ ಮತ್ತು ಪ್ರಾಮಾಣಿಕತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿಎ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಯುವ ವೃತ್ತಿಪರರಿಗೆ ಈ ವಿಡಿಯೋ ಒಂದು ದಿಕ್ಸೂಚಿಯಂತೆ ಕಾಣಿಸುತ್ತಿದ್ದು, ದೀರ್ಘಾವಧಿಯ ವೃತ್ತಿಜೀವನದ ಬೆಳವಣಿಗೆಗೆ ಶ್ರಮ ಮತ್ತು ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಈ ಯಶೋಗಾಥೆ ಸಾಬೀತುಪಡಿಸಿದೆ.