ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಅವರ ಚಾರ್ಟರ್ಡ್ ಅಕೌಂಟೆಂಟ್ ₹1.81 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿ ಹೆಸರಿನಲ್ಲಿ ನಕಲಿ ಚಲನ್‌ಗಳನ್ನು ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ನಗರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ ₹1.81 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದ ಮೇಲೆ ಲೆಕ್ಕಪರಿಶೋಧಕ (ಚಾರ್ಟರ್ಡ್ ಅಕೌಂಟೆಂಟ್) ವಿರುದ್ಧ ಪ್ರಕರಣ ದಾಖಲಾಗಿದೆ. HSR Layout Police Stationನಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಗೋಪಾಲ್ ಕೆ.ಆರ್. ಸಲುಜಾ ಅವರು ನೀಡಿದ ದೂರಿನನ್ವಯ, ಶೇಷಾದ್ರಿಪುರಂ ನಿವಾಸಿಯಾದ ಚಾರ್ಟರ್ಡ್ ಅಕೌಂಟೆಂಟ್ ರಿಷಿ ಆರ್. ಜೈನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ವಿವರ

ದೂರುದಾರ ಗೋಪಾಲ್ ಸಲುಜಾ ಅವರು ಮಾನವಶಕ್ತಿ ಸಲಹಾ ಸಂಸ್ಥೆ ನಡೆಸುತ್ತಿದ್ದು, 2008ರಿಂದ ತಮ್ಮ ಸಂಸ್ಥೆಯ ಎಲ್ಲಾ ಹಣಕಾಸು ಮತ್ತು ತೆರಿಗೆ ಸಂಬಂಧಿತ ವ್ಯವಹಾರಗಳನ್ನು ನಿರ್ವಹಿಸಲು ರಿಷಿ ಜೈನ್ ಅವರನ್ನು ನೇಮಿಸಿಕೊಂಡಿದ್ದರು. ವೃತ್ತಿಪರ ತೆರಿಗೆ ಲೆಕ್ಕಾಚಾರ, ಫೈಲಿಂಗ್‌ಗಳು ಹಾಗೂ ರಿಟರ್ನ್ಸ್ ಸಲ್ಲಿಕೆ ಸೇರಿದಂತೆ ಎಲ್ಲ ಕಾರ್ಯಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ನಿಯಮಿತವಾಗಿ ಶುಲ್ಕವನ್ನು ಸಹ ಪಾವತಿಸಲಾಗುತ್ತಿತ್ತು.

ತೆರಿಗೆ ವಿಷಯಗಳಲ್ಲಿ ಹೆಚ್ಚಿನ ಅರಿವು ಇಲ್ಲದ ಕಾರಣ, ದೂರುದಾರರು ಸಂಪೂರ್ಣವಾಗಿ ಸಿಎ ಮೇಲೆ ಅವಲಂಬಿತರಾಗಿದ್ದರು. ಫೈಲಿಂಗ್ ಮತ್ತು ಪಾವತಿಗಳ ವಿಚಾರದಲ್ಲಿಯೂ ಅವರ ಮೇಲೆಯೇ ನಂಬಿಕೆ ಇಟ್ಟಿದ್ದರು. ವಾಟ್ಸಪ್ ಮತ್ತು ಇ-ಮೇಲ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಿಎ ಸೂಚಿಸಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಲಾಗುತ್ತಿತ್ತು.

ಆದರೆ 2025ರ ಜುಲೈನಲ್ಲಿ ನಡೆದ ಲೆಕ್ಕಪರಿಶೋಧನೆ (ಆಡಿಟ್) ವೇಳೆ ಹಲವಾರು ವ್ಯತ್ಯಾಸಗಳು ಬೆಳಕಿಗೆ ಬಂದವು. ಆದಾಯ ತೆರಿಗೆ, ಜಿಎಸ್‌ಟಿ ಹಾಗೂ ಬ್ಯಾಂಕ್ ಪಾವತಿಗಳ ಹೆಸರಿನಲ್ಲಿ ನಕಲಿ ಚಲನ್‌ಗಳನ್ನು ಸೃಷ್ಟಿಸಿ, ಹಂತ ಹಂತವಾಗಿ ಒಟ್ಟು ₹1.81 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿರುವುದು ಪತ್ತೆಯಾಯಿತು.

ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಗೋಪಾಲ್ ಸಲುಜಾ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. “ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನನಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದು, ತನಿಖೆ ಮುಂದುವರಿದಿದೆ.