ಒಂದೇ ಶಿಫ್ಟ್‌ಗೆ ಹೈರಾಗಿಹೋಗುವ ಜನರ ಮಧ್ಯೆ ಇಲ್ಲೊಬ್ಬ ಬೆಳಗ್ಗೆಯಿಂದ ಸಂಜೆವರೆಗೆ ಆಫೀಸ್ ಕೆಲಸ, ರಾತ್ರಿ ಬೈಕ್ ಟ್ಯಾಕ್ಸಿ ಡ್ರೈವರ್, ಇದರ ಜೊತೆಗೆ ಪಿಎಚ್‌ಡಿ, ಅಡುಗೆ, ವಿಡಿಯೋ ಎಡಿಟಿಂಗ್! ಹೀಗೆ ಒಂದೇ ಸಮನೆ ಹಲವು ಕೆಲಸ ಮಾಡುತ್ತಾ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾನೆ ಈ ಯುವಕ! ಫುಲ್ ಸ್ಟೋರಿ ಓದಿ.

ನಿಮ್ಮ ಸುತ್ತಮುತ್ತಲಿನ ಜನರು, ಸಹೋದ್ಯೋಗಿಗಳನ್ನ ನೋಡಿರಬಹುದು. ಅವರು ಮಾಡುತ್ತಿರೋದು ಒಂದೇ ಶಿಫ್ಟ್ ಕೆಲಸ ಆದ್ರೂ 'ಯಾವುದಕ್ಕೂ ಟೈಮೇ ಇಲ್ಲ' ಅಂತಾ ದೂರುತ್ತಲೇ ಇರುತ್ತಾರೆ. ಮನಸು ಮಾಡಿದರೆ ಎಲ್ಲದಕ್ಕೂ ಸಮಯ ಸಿಗುತ್ತೆ ಅನ್ನೋದನ್ನು ಸಾಬೀತುಪಡಿಸುವ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದೇ ಒಂದೇ ಶಿಫ್ಟ್‌ ಸುಸ್ತಾಗುವ, ಟೈಮೇ ಸಿಗ್ತಿಲ್ಲ ಅಂತಾ ಬಿಲ್ಡಪ್ ಕೊಡುವವರು ನೀವಾಗಿದ್ರೆ ಈ ವಿಡಿಯೋ ನೋಡಲೇಬೇಕು. ಈ ಹುಡುಗ ಬೆಳಗ್ಗೆ 9ರಿಂದ 5ರವರೆಗೆ ಆಫೀಸ್ ಕೆಲಸ ಮಾಡ್ತಾನೆ. ಆಫೀಸ್‌ನಿಂದ ಬಂದು ಮನೆಯಲ್ಲೇನೂ ಮಲಗೋಲ್ಲ. ಬಂದವನೇ ಬೈಕ್ ಏರಿ ರಾತ್ರಿ ಹೊತ್ತು ಬೈಕ್ ಟ್ಯಾಕ್ಸಿ ಡ್ರೈವರ್ ಆಗ್ತಾನೆ. ಇದರ ಮಧ್ಯೆಯೇ ಸಮಯ ಹೊಂದಿಸಿಕೊಂಡು ಪಿಎಚ್‌ಡಿನೂ ಮಾಡ್ತಿದ್ದಾನೆ, ಹಸಿವಾದಾಗ ಹೊರಗಡೆ ತಿನ್ನದೇ ಮೂರು ಹೊತ್ತು ಅಡುಗೆನೂ ಮಾಡ್ಕೊಳ್ತಾನೆ, ಇಷ್ಟು ಸಾಲದಂತೆ ವಿಡಿಯೋ ಎಡಿಟಿಂಗ್...! ಒಂದಲ್ಲ ಎರಡಲ್ಲ ಹೀಗೆ ಒಂಭತ್ತಕ್ಕೂ ಹೆಚ್ಚು ಕೆಲಸಗಳನ್ನು ಒಟ್ಟಿಗೆ ನಿಭಾಯಿಸುತ್ತಿರುವ ಯುವಕನೊಬ್ಬ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾನೆ. ದೀಪಕ್ ಪಾಂಡೆ(Deepak pandey) ಎಂಬ ಯುವಕ ತನ್ನ ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಳಗ್ಗೆ 9ರಿಂದ 5ರ ಕೆಲಸದ ನಂತರ ಬೇರೆ ಯಾವುದಕ್ಕೂ ಎನರ್ಜಿಯೇ ಇರಲ್ಲ' ಇರೋದು ಒಂದು ಶಿಫ್ಟ್ ಕೆಲಸ ಮಾಡಿದ್ರೆ ಸಾಕಪ್ಪ ಅಂದುಕೊಂಡು, ಜೀವನದಲ್ಲಿ ಖುಷಿಯೇ ಇಲ್ಲದೆ ಬದುಕುತ್ತಿದ್ದವನು ಇಂದು ಅದೇ ವ್ಯಕ್ತಿ 9-5 ಕೆಲಸದ ನಂತರ ಸಂಜೆ 5ರಿಂದ ರಾತ್ರಿ 11ರವರೆಗೆ ಬೈಕ್ ಟ್ಯಾಕ್ಸಿ ಓಡಿಸುತ್ತಾನೆ, ತನಗಾಗಿ ಅಡುಗೆ ಮಾಡಿಕೊಳ್ಳುತ್ತಾನೆ, ವಿಡಿಯೋ ಎಡಿಟಿಂಗ್ ಮಾಡುತ್ತಾನೆ, ಜೊತೆಗೆ ಪಿಎಚ್‌ಡಿ ಕೂಡ ಮಾಡುತ್ತಿದ್ದಾನೆ. ಇಷ್ಟೆಲ್ಲಾ ಮಾಡಿದರೂ ಅವನು ಇಂದು ತುಂಬಾ ಖುಷಿಯಾಗಿದ್ದಾನೆ. ಆ ಖುಷಿಯಾಗಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಅದು ನಾನೇ ಎಂದು ಅವನೇ ಹೇಳಿಕೊಂಡು ನಗುತ್ತಾನೆ!

ನಾನೀಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ:

ನಾನೀಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವೂ ಕೊಟ್ಟಿದ್ದಾನೆ. 'ನಾನೀಗ ಯಾಕೆ ಖುಷಿಯಾಗಿದ್ದೇನೆ ಗೊತ್ತಾ? ನನ್ನ ಜೀವನದಲ್ಲಿ ಮೊದಲ ಬಾರಿಗೆ, ನನ್ನಲ್ಲಿ ಎಷ್ಟೊಂದು ಸಾಮರ್ಥ್ಯವಿದೆ ಎಂಬುದು ಅರಿವಾಯಿತು.'ನಾಲ್ಕು ಜನ ಏನು ಅಂತಾರೋ' 'ನನ್ನಿಂದ ಈ ಕೆಲಸ ಸಾಧ್ಯವಿಲ್ಲ', ಅಥವಾ 'ಹೊಸದಾಗಿ ಏನಾದರೂ ಮಾಡಬೇಕೆಂದರೆ ಈಗಿನ ಕೆಲಸ ಬಿಡಬೇಕು' ಎಂಬ ಭಯದಿಂದ ನನ್ನ ಸಾಮರ್ಥ್ಯವನ್ನು ನಾನು ಗುರುತಿಸಿರಲಿಲ್ಲ. ಆದರೆ, ನಾನು ನಿಧಾನವಾಗಿ ಬದಲಾಗಲು ಶುರುಮಾಡಿದೆ. ಮೊದಲು ಪಿಎಚ್‌ಡಿಗೆ ಸೇರಿಕೊಂಡೆ, ನಂತರ ಬೈಕ್ ಟ್ಯಾಕ್ಸಿ ಓಡಿಸಲು ಶುರುಮಾಡಿದೆ, ಆಮೇಲೆ ಕಂಟೆಂಟ್ ಕ್ರಿಯೇಷನ್‌ಗೂ ಕಾಲಿಟ್ಟೆ. ಇಂದು ನಾನು ಎಲ್ಲವನ್ನೂ ಒಟ್ಟಿಗೆ ನಿಭಾಯಿಸಬಲ್ಲೆ' ಎಂಬ ಆತ್ಮವಿಶ್ವಾಸ ಬಂದಿದೆ ಎಂದು ಪಾಂಡೆ ಬರೆದುಕೊಂಡಿದ್ದಾರೆ.

View post on Instagram

ಇಷ್ಟು ಓದಿದ ಮೇಲೆ ನಿಮಗೂ 'ನನಗೇಕೆ ಇದು ಸಾಧ್ಯವಿಲ್ಲ? ನಾನು ಯಾಕೆ ಮಾಡಬಾರದು ಎಂದು ಅನಿಸಿರುತ್ತದಲ್ಲವೇ? ಖಂಡಿತ, ನಿಮ್ಮಲ್ಲೂ ಸಾಮರ್ಥ್ಯವಿದೆ. ನಿಮಗೂ ಏನಾದರೂ ಪ್ಯಾಷನ್ ಇದ್ದರೆ, ಅದಕ್ಕಾಗಿ ಈಗಲೇ ಕೆಲಸ ಶುರು ಮಾಡಿ. ಹೊಸ ಕೆಲಸಕ್ಕಾಗಿ ಈಗ ಮಾಡುತ್ತಿರುವ ಕೆಲಸ, ಓದು ನಿಲ್ಲಿಸಬೇಕಾಗಿಲ್ಲ. ಕಷ್ಟಗಳು, ಸವಾಲುಗಳು ಬರುತ್ತವೆ, ಆದರೆ ನಿಮ್ಮ ಸಾಮರ್ಥ್ಯವನ್ನು ನೀವು ಅರಿತುಕೊಳ್ಳಲು ಶುರು ಮಾಡಿದಾಗ, ಆ ಕಠಿಣ ಪರಿಶ್ರಮದಲ್ಲೇ ನಿಮಗೆ ಸಂತೋಷ ಸಿಗುತ್ತದೆ. ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದು, 'You are truly inspirational' ಎಂದು ಹೇಳಿದ್ದಾರೆ.