ವಿದೇಶ ಪ್ರವಾಸ ಮಾಡುವುದು ಸಂತೋಷದ ವಿಷಯ, ಆದರೆ ನಾವು ಹೋಗುವ ಪ್ರತಿ ಜಾಗದಲ್ಲೂ ನಾವು ನಮ್ಮ ದೇಶದ ರಾಯಭಾರಿಗಳಾಗಿರುತ್ತೇವೆ ಎಂಬುದು ನೆನಪಿರಲಿ. ಅತಿಯಾದ ಪ್ರಚಾರಕ್ಕಾಗಿ ಅಥವಾ ರೀಲ್ಸ್ ಮಾಡುವ ಹುಚ್ಚಿಗಾಗಿ ದೇಶದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವುದು ಎಷ್ಟು ಸರಿ?
ಬೀಜಿಂಗ್/ಟೋಕಿಯೋ: ಭಾರತೀಯರೆಂದರೆ ಇಡೀ ಜಗತ್ತಿನಲ್ಲಿ ಒಂದು ವಿಶಿಷ್ಟ ಗೌರವವಿದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಜಗತ್ತು ಮೆಚ್ಚುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಹೋಗುವ ಕೆಲವು ಭಾರತೀಯರು ತೋರುತ್ತಿರುವ 'ನಾಗರಿಕ ಪ್ರಜ್ಞೆ' ಇಲ್ಲದ ವರ್ತನೆಗಳು ಈಗ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಚೀನಾದ ಮಹಾಗೋಡೆಯಿಂದ ಹಿಡಿದು ಜಪಾನ್‌ನ ಶಿಸ್ತಿನ ಬೀದಿಗಳವರೆಗೆ ಭಾರತೀಯ ಪ್ರವಾಸಿಗರ ಹುಚ್ಚಾಟದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿವೆ!
1. ಚೀನಾದ ಮಹಾಗೋಡೆಯ ಮೇಲೆ ಗರ್ಬಾ ಸ್ಟೆಪ್ಸ್!
ಹೌದು, ನೀವು ಓದುತ್ತಿರುವುದು ನಿಜ. ಚೀನಾದ ಐತಿಹಾಸಿಕ 'ಗ್ರೇಟ್ ವಾಲ್' ಮೇಲೆ ನಿಂತು ಭಾರತೀಯರ ಗುಂಪೊಂದು ಮೈಮರೆತು ನೃತ್ಯ ಮಾಡಿದೆ. ಬಾಲಿವುಡ್‌ನ ಪ್ರಸಿದ್ಧ 'ಚೋಗಾಡಾ' ಹಾಡಿಗೆ ಈ ಗುಂಪು ಹಬ್ಬದ ಉಡುಪುಗಳನ್ನು ಧರಿಸಿ ಗರ್ಬಾ ನೃತ್ಯ ಮಾಡಿದೆ. ಒಂದು ಐತಿಹಾಸಿಕ ಸ್ಮಾರಕದ ಮೇಲೆ ಅದರ ಗಾಂಭೀರ್ಯವನ್ನು ಅರಿಯದೆ ನೃತ್ಯ ಮಾಡಿದ್ದನ್ನು ಕಂಡ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. "ಇದು ಹೆಮ್ಮೆಯ ವಿಷಯವಲ್ಲ, ಬದಲಿಗೆ ಅತ್ಯಂತ ಮುಜುಗುರದ ಸಂಗತಿ. ವಿದೇಶಕ್ಕೆ ಹೋಗಿ ದೇಶದ ಮರ್ಯಾದೆ ಕಳೆಯುವ ಬದಲು ಮನೆಯಲ್ಲೇ ಇರಿ" ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
2. ಶಿಸ್ತಿನ ಜಪಾನ್‌ನಲ್ಲಿ ಭಾರತೀಯರ ಅಶಿಸ್ತು!
ಜಪಾನ್ ಎಂದರೆ ಅದು ಶಿಸ್ತಿಗೆ ಇನ್ನೊಂದು ಹೆಸರು. ಆದರೆ ಅಲ್ಲಿಗೂ ಹೋದ ನಮ್ಮವರು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಜಪಾನ್‌ನ ಪ್ರಸಿದ್ಧ 'ಹಾಚಿಕೊ' ಶ್ವಾನದ ಪ್ರತಿಮೆಯ ಮುಂದೆ ಫೋಟೋ ತೆಗೆದುಕೊಳ್ಳಲು ಪ್ರವಾಸಿಗರು ಸಾಲಿನಲ್ಲಿ ನಿಂತಿದ್ದರು. ಆದರೆ ಭಾರತೀಯ ಮೂಲದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ, ಇಡೀ ಸಾಲನ್ನು ಧಿಕ್ಕರಿಸಿ ನೇರವಾಗಿ ಪ್ರತಿಮೆಯ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಇದನ್ನು ಕಂಡ ಅಲ್ಲಿನ ಸ್ಥಳೀಯರು ಮತ್ತು ಇತರ ಪ್ರವಾಸಿಗರು ಭಾರತೀಯರ ಅಸಭ್ಯ ವರ್ತನೆಯನ್ನು ಕಂಡು ವಾಕರಿಸಿದ್ದಾರೆ.
3. ವಿಮಾನ ನಿಲ್ದಾಣದ ರನ್-ವೇ ಮೇಲೆ ಡಾನ್ಸ್!
ಹುಚ್ಚಾಟ ಇಲ್ಲಿಗೆ ನಿಂತಿಲ್ಲ, ವಿಯೆಟ್ನಾಂನಲ್ಲಿ ವಿಮಾನ ನಿಲ್ದಾಣದ ರನ್-ವೇ ಮೇಲೆಯೇ ಪ್ರವಾಸಿಗರು ನೃತ್ಯ ಮಾಡಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ವಿಮಾನ ನಿಲ್ದಾಣದಂತಹ ಅತೀ ಭದ್ರತೆಯ ಜಾಗದಲ್ಲಿ ಈ ರೀತಿ ವರ್ತಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಎದ್ದಿದೆ.
ನೆಟ್ಟಿಗರ ಆಕ್ರೋಶದ ಅಲೆ:
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ಒಬ್ಬ ನೆಟ್ಟಿಗ, "ನಮ್ಮ ಮಕ್ಕಳಿಗೆ ಪುಸ್ತಕದ ಪಾಠಕ್ಕಿಂತ ಮೊದಲು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬ ನಾಗರಿಕ ಪ್ರಜ್ಞೆಯನ್ನು ಕಲಿಸಿಕೊಡಬೇಕಿದೆ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, "ಇಂತಹ ಜನರ ವರ್ತನೆಯಿಂದಾಗಿ ಒಳ್ಳೆಯ ಪ್ರವಾಸಿಗರಿಗೂ ವಿದೇಶಗಳಲ್ಲಿ ಕೆಟ್ಟ ಹೆಸರು ಬರುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊನೆಯ ಮಾತು:
ವಿದೇಶ ಪ್ರವಾಸ ಮಾಡುವುದು ಸಂತೋಷದ ವಿಷಯ, ಆದರೆ ನಾವು ಹೋಗುವ ಪ್ರತಿ ಜಾಗದಲ್ಲೂ ನಾವು ನಮ್ಮ ದೇಶದ ರಾಯಭಾರಿಗಳಾಗಿರುತ್ತೇವೆ ಎಂಬುದು ನೆನಪಿರಲಿ. ಅತಿಯಾದ ಪ್ರಚಾರಕ್ಕಾಗಿ ಅಥವಾ ರೀಲ್ಸ್ ಮಾಡುವ ಹುಚ್ಚಿಗಾಗಿ ದೇಶದ ಮರ್ಯಾದೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವುದು ಎಷ್ಟು ಸರಿ?


