1000 ಎಪಿಸೋಡ್ ಪೂರೈಸಿದ Puttakkana Makkalu Serial: ಸಂಭ್ರಮಿಸಿದ ತಂಡದ ಫೋಟೋಗಳಿವು!
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯು ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದೆ. ಗಂಡನಿಂದ ವಂಚಿಳಾದ ಹೆಣ್ಣು ಕುಗ್ಗದೇ ತನ್ನ ಜೊತೆಗೆ ಮೂವರು ಹೆಣ್ಣು ಮಕ್ಕಳ ಜೀವನವನ್ನು ಕಟ್ಟಿಕೊಂಡ ಕಥೆ ಇಲ್ಲಿದೆ. ಛಲ ಇದ್ದರೆ ಸಾಕು, ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬುದನ್ನು ಇಲ್ಲಿ ತೋರಿಸಲಾಗಿದೆ.

ಜೆ.ಎಸ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ, ಜೀ ಕನ್ನಡದಲ್ಲಿ 2021ರಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರವಾಗಿತ್ತು. ಹೆಣ್ಣು ಮಕ್ಕಳನ್ನು ಹೆತ್ತೋಳೂ ಎಲ್ಲ ದೇವರಿಗೂ ದೊಡ್ಡೋಳು ಎಂಬ ಶೀರ್ಷಿಕೆ ಗೀತೆಯಿಂದಲೇ ಎಲ್ಲರ ಮನಸೆಳೆದು, ಮೊದಲ ವಾರದ ರೇಟಿಂಗ್‌ನಲ್ಲಿ 13.5 TVR ಗಳಿಸಿ ಇಡೀ ಭಾರತದಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಧಾರಾವಾಹಿ ಎಂಬ ದಾಖಲೆಯನ್ನು ಸೃಷ್ಟಿಸಿತ್ತು. ಆರೂರು ಜಗದೀಶ್ ಅವರ ಸಾರಥ್ಯದಲ್ಲಿ ಈ ಧಾರಾವಾಹಿ ಅದ್ಭುತವಾಗಿ ಮೂಡಿ ಬಂದಿದೆ.
ನಿರ್ಮಾಪಕಿ ಸ್ಮಿತಾ ಜೆ ಶೆಟ್ಟಿಯವರ, ಜೆ ಎಸ್ ಪ್ರೊಡಕ್ಷನ್ಸ್ ಸಂಸ್ಥೆಯು ‘ಶುಭ ವಿವಾಹ, ಜೋಡಿ ಹಕ್ಕಿ, ಜೊತೆ ಜೊತೆಯಲಿ’ ಯಂತಹ ಯಶಸ್ವಿ ಧಾರಾವಾಹಿಗಳನ್ನು ನೀಡಿದೆ. ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಾರಿಕಾ, ಗುರು ಹೆಗಡೆ, ಧನುಷ್, ಅಕ್ಷರಾ ಗೌಡ, ವಿದ್ಯಾ, ಶಿಲ್ಪ ವರಸೆ, ಅನಿರೀಶ್ ಮುಂತಾದವರು ನಟಿಸಿದ್ದಾರೆ.
ಸತ್ಯಕಿಯವರ ಚಿತ್ರಕಥೆ, ಸಂಭಾಷಣೆ ಈ ಧಾರಾವಾಹಿಯ ಜೀವಾಳವಾಗಿದೆ. ಪ್ರಧಾನ ನಿರ್ದೇಶಕ ಆರೂರು ಜಗದೀಶ್, ಸಂಚಿಕೆ ನಿರ್ದೇಶಕ ಮಹೇಶ್ ಸಾರಂಗ್, ಸಹ ನಿರ್ದೇಶಕ ಮುರಳಿ, ಸಂಕಲನರಾದ ಜಯಚಂದ್ರ, ಪ್ರೊಡಕ್ಷನ್ ಮ್ಯಾನೇಜರಿಂದ ಹಿಡಿದು, ಸೆಟ್ ಹುಡುಗರು, ಕ್ಯಾಮೆರಾ, ಲೈಟ್ ವಿಭಾಗ, ಮೇಕಪ್, ಊಟೋಪಚಾರ, ಆಫೀಸಿನ ಅಕೌಂಟ್ ಸೆಕ್ಷನ್ ಹೀಗೆ ಎಲ್ಲರ ಶ್ರಮವೂ ಈ ಧಾರಾವಾಹಿಯ ಯಶಸ್ಸಿಗೆ ಕಾರಣವಾಗಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ಸಾಕಷ್ಟು ಸಾಮಾಜಿಕ ವಿಷಯಗಳನ್ನು ಚರ್ಚಿಸುವ ಕಥೆಯಾಗಿದೆ. ಕೌಟುಂಬಿಕ ಮೌಲ್ಯಗಳು, ಹೊಂದಾಣಿಕೆ, ತ್ಯಾಗ, ಪ್ರಾಮಾಣಿಕತೆ, ಸಮಸ್ಯೆಗಳನ್ನು ಎದುರಿಸುವ ಛಲ ಇನ್ನಿತರೆ ಜೀವನ ಪಾಠಗಳನ್ನು ಆಗಾಗ ಬೋಧಿಸುವಲ್ಲಿ ಪುಟ್ಟಕ್ಕ ಟೀಚರ್ ಆಗಿದ್ದಾಳೆ.
ಇತ್ತೀಚೆಗೆ ಮಹಿಳೆಯೊಬ್ಬರು ತಾವು ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಿ, ಸ್ಫೂರ್ತಿಗೊಂಡು ತಾವೂ ಸಹ ಹೊಟೇಲ್ ಶುರು ಮಾಡಿದೆವು ಎಂದು ಸಂದರ್ಶನದಲ್ಲಿ ಹೇಳಿದ್ದರು. ರಾಜ್ಯದ ಹಲವೆಡೆ ‘ಪುಟ್ಟಕ್ಕನ ಮೆಸ್’ ಎಂಬ ಒಂದಿಷ್ಟು ಹೋಟೆಲ್‍ಗಳೂ ಸಹ ಕಾಣ ಸಿಗುತ್ತಿವೆ.