ಕರ್ಣದಲ್ಲಿ ಕಿರಣ್ ರಾಜ್‌ಗೆ ಜೋಡಿಯಾಗ್ತಾರಾ ಲಕ್ಷ್ಮಿ ಬಾರಮ್ಮ ಲಕ್ಷ್ಮಿ ಅಥ್ವಾ ಕೀರ್ತಿ ?
ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಕಿರಣ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕರ್ಣ ಸೀರಿಯಲ್ ಗೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಲಕ್ಷ್ಮೀ ಅಂದ್ರೆ ಭೂಮಿಕಾ ರಮೇಶ್ ನಾಯಕಿಯಾಗ್ತಿದ್ದಾರ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈ ವಾರಾಂತ್ಯದಲ್ಲಿ ಸೀರಿಯಲ್ ಕೊನೆಯ ಸಂಚಿಕೆ ಪ್ರಸಾರವಾಗಲಿದೆ. ಈ ನಡುವೆ ಹೊಸ ಸುದ್ದಿ ಲಕ್ಷ್ಮೀ ಬಾರಮ್ಮ ನಟಿಯ ಕುರಿತು ಕೇಳಿ ಬರುತ್ತಿದೆ.
ಇತ್ತೀಚೆಗಷ್ಟೇ ಝೀ ಕನ್ನಡದಲ್ಲಿ ಕನ್ನಡತಿ ಖ್ಯಾತಿಯ ನಟ ಕಿರಣ್ ರಾಜ್ (Kiran Raj) ಅಭಿನಯಿಸಲಿರುವ ಕರ್ಣ ಸೀರಿಯಲ್ ಪ್ರೊಮೋ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಕಿರಣ್ ರಾಜ್ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ದು ನೋಡಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು.
ನಾಯಕ ಕರ್ಣನ ಪ್ರೊಮೋವನ್ನು(Karna Serial Promo) ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿದ ಧಾರಾವಾಹಿ ತಂಡ ನಾಯಕಿಯನ್ನು ಪರಿಚಯಿಸಲೇ ಇಲ್ಲ. ಕರ್ಣ ಕುಟುಂಬದ ಕುರಿತು ಮಾತ್ರ ಇದ್ದ ವಿಡೀಯೋ ಅದಾಗಿತ್ತು. ಹಾಗಾಗಿ ಜನರಿಗೆ ಯಾರಿರಬಹುದು ನಾಯಕಿ ಎನ್ನುವ ಕುತೂಹಲ ಹೆಚ್ಚಾಗಿತ್ತು.
ಕೆಲವರು ಇದರಲ್ಲೂ ರಂಜನಿ ರಾಘವನ್ (Ranjani Raghavan) ಅವರೇ ನಾಯಕಿಯಾಗ್ತಾರೆ ಎಂದು ಹೇಳಿದ್ದರು. ಇನ್ನೂ ಕೆಲವರು, ಮೋಕ್ಷಿತಾ ಪೈ ಕಿರಣ್ ರಾಜ್ ಗೆ ನಾಯಕಿ ಎಂದರೆ, ಮತ್ತೆ ಕೆಲವರು, ಈ ಧಾರಾವಾಹಿಯಲ್ಲಿ ಇಬ್ಬರು ನಾಯಕಿಯರಂತೆ, ಹಾಗಾಗಿ ಒಂದು ಮೋಕ್ಷಿತಾ ಪೈ (Mokshitha Pai), ಮತ್ತೊಬ್ಬರು ಭವ್ಯಾ ಗೌಡ (Bhavya Gowda) ಎಂದು ಹೇಳಿದ್ದರು.
ಇದೀಗ ಮತ್ತೊಂದು ಹೆಸರು ಕೇಳಿ ಬರುತ್ತಿದೆ. ಅದು ಬೇರಾರು ಅಲ್ಲ, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಾಯಕಿ ಲಕ್ಷ್ಮೀ ಅಂದರೆ ಭೂಮಿಕಾ ರಮೇಶ್ (Bhoomika Ramesh). ನಟಿ ಭೂಮಿಕಾ, ಲಕ್ಷ್ಮೀ ಪಾತ್ರದ ಮೂಲಕ ಅದ್ಭುತವಾಗಿ ನಟಿಸಿದ್ದರು, ಅವರೇ ಕರ್ಣನಿಗೆ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.
ಭೂಮಿಕಾ ರಮೇಶ್ ಈಗಾಗಲೇ ಝೀ ತೆಲುಗಿನ ಸೂಪರ್ ಹಿಟ್ ಸೀರಿಯಲ್ ಮೇಘ ಸಂದೇಶಂನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಶೂಟಿಂಗ್ ಈಗಾಗಲೇ ಮುಗಿದಿದ್ದು, ಈ ವಾರಾಂತ್ಯದಲ್ಲಿ ಅಂತಿಮ ಸಂಚಿಕೆ (climax episode) ಪ್ರಸಾರವಾಗಲಿದೆ. ಈ ಸೀರಿಯಲ್ ಮುಗಿದ ಬಳಿಕ ಲಕ್ಷ್ಮೀ ಅಂದ್ರೆ ಭೂಮಿಕಾ ಕರ್ಣ ಸೀರಿಯಲ್ ನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಈ ಸುದ್ದಿ ವೈರಲ್ ಆಗುತ್ತಿರುವುದನ್ನು ನೋಡಿ, ಭೂಮಿಕಾ ರಮೇಶ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಕಿರಣ್ ರಾಜ್ ಗೆ ಭೂಮಿಕಾ ಒಳ್ಳೆಯ ಜೋಡಿ ಆಗ್ತಾರೆ ಎಂದಿದ್ದಾರೆ. ಆದರೆ ಇನ್ನೂ ಕೆಲವರು ಭೂಮಿಕಾ ಕಿರಣ್ ರಾಜ್ ಗೆ ಮ್ಯಾಚ್ ಆಗಲ್ಲ, ಕೀರ್ತಿ ಅಂದ್ರೆ ತನ್ವಿ ರಾವ್ (Tanvi Rao) ಪರ್ಫೆಕ್ಟ್ ಮ್ಯಾಚ್ ಎಂದಿದ್ದಾರೆ.
ಅಷ್ಟಕ್ಕೂ ತನ್ನ ಪ್ರೊಮೋ ಮೂಲಕವೇ ಸದ್ದು ಮಾಡಿದ ಕರ್ಣ ಧಾರಾವಾಹಿಯಲ್ಲಿ ನಾಯಕಿಯಾಗಿ ಯಾರು ನಟಿಸಲಿದ್ದಾರೆ? ಯಾವಾಗ ಸೀರಿಯಲ್ ಆರಂಭವಾಗಲಿದೆ? ಕಥೆ ಹೇಗೆ ಸಾಗಲಿದೆ ಅನ್ನೋದನ್ನೆಲ್ಲಾ ಸೀರಿಯಲ್ ತಂಡ ಹೇಳಬೇಕಷ್ಟೆ. ಅಷ್ಟರವರೆಗೆ ನಾವು ಕಾಯಬೇಕು ಅಷ್ಟೇ.