- Home
- Entertainment
- TV Talk
- Karna Serial: ನಿಧಿಯ ಮುಟ್ಟಿನ ಸಮಯದಲ್ಲಿ ಪ್ಯಾಡ್ ತಂದುಕೊಟ್ಟ ಕರ್ಣ: ನೆಟ್ಟಿಗರಿಂದ ಕಮೆಂಟ್ಸ್ ಸುರಿಮಳೆ
Karna Serial: ನಿಧಿಯ ಮುಟ್ಟಿನ ಸಮಯದಲ್ಲಿ ಪ್ಯಾಡ್ ತಂದುಕೊಟ್ಟ ಕರ್ಣ: ನೆಟ್ಟಿಗರಿಂದ ಕಮೆಂಟ್ಸ್ ಸುರಿಮಳೆ
'ಕರ್ಣ' ಸೀರಿಯಲ್‌ನಲ್ಲಿ ಮುಟ್ಟಿನ ಕುರಿತು ಜಾಗೃತಿ ಮೂಡಿಸುವ ದೃಶ್ಯವೊಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಪತ್ನಿ ನಿಧಿ ಮುಟ್ಟಿನ ನೋವಿನಿಂದ ಬಳಲುತ್ತಿರುವಾಗ, ಪತಿ ಕರ್ಣನು ಪ್ಯಾಡ್ ತರಿಸಿಕೊಟ್ಟು, ಆರೈಕೆ ಮಾಡಿ, ಮುಟ್ಟಿನ ಬಗ್ಗೆ ಕೀಳಾಗಿ ಮಾತನಾಡುವವರಿಗೆ ಪಾಠ ಹೇಳುವ ಮೂಲಕ ಮಾದರಿಯಾಗಿದ್ದಾನೆ.

ಮುಟ್ಟೆಂದರೆ ಅಸಹ್ಯ...
ಮುಟ್ಟು, ಋತುಸ್ರಾವ, ಪೀರಿಯಡ್ಸ್ ಏನೇ ಕರೆಯಿರಿ... ಇದನ್ನು ಮಾತನಾಡುವುದೇ ಅಸಹ್ಯ ಎನ್ನುವ ಮನೋಭಾವ ಇಂದಿಗೂ ಸಮಾಜದಲ್ಲಿ ಇದೆ. ಮುಟ್ಟಾದ ಹೆಣ್ಣುಮಕ್ಕಳನ್ನು ಅತ್ಯಂತ ಕೀಳಾಗಿ, ಕನಿಷ್ಠವಾಗಿ ನೋಡುವ ಸಮಾಜವೂ, ಅನಿಷ್ಟ ಪದ್ಧತಿಯೂ ಇಂದಿಗೂ ಜಾರಿಯಲ್ಲಿದೆ. ಮುಟ್ಟು ಎನ್ನುವುದು ಒಬ್ಬ ಮಹಿಳೆ ಪರಿಪೂರ್ಣ ಹೆಣ್ಣಾಗಿ ಮಗುವನ್ನು ಈ ಭೂಮಿಯ ಮೇಲೆ ನೀಡಲು ಶಕ್ತಿಯುಳ್ಳವಳಾಗುತ್ತಾಳೆ ಎನ್ನುವ ಸತ್ಯ ಗೊತ್ತಿದ್ದರೂ ಇದನ್ನು ಓಪನ್ ಆಗಿ ಮಾತನಾಡುವವರು ತುಂಬಾ ಕಡಿಮೆಯೇ.
ಪ್ರಭಾವ ಬೀರುವ ಸೀರಿಯಲ್
ಆದರೆ, ಸೀರಿಯಲ್ಗಳಲ್ಲಿ ಈ ಬಗ್ಗೆ ಸ್ವಲ್ಪನಾದರೂ ತಿಳಿವಳಿಕೆ ಕೊಟ್ಟರೆ ಅದು ಜನಸಾಮಾನ್ಯರ ಮನಸ್ಸಿಗೆ ನಾಟುವುದು ಇದೆ. ಏಕೆಂದರೆ ಇಂದು ಸೀರಿಯಲ್ಗಳು ಅಷ್ಟು ಪ್ರಭಾವ ಬೀರುವುದು ಇದೆ. ಈ ನಿಟ್ಟಿನಲ್ಲಿ ಕರ್ಣ ಸೀರಿಯಲ್ (Karna Serial) ಕೊಟ್ಟ ಒಂದೊಳ್ಳೆ ಮೆಸೇಜ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಅವಧಿಗಿಂತ ಮುನ್ನ...
ಹಾರ್ಮೋನ್ ವ್ಯತ್ಯಾಸವಾದಾಗ ಅಥವಾ ಇನ್ನಾವುದೋ ಕಾರಣಕ್ಕೆ ಕೆಲವೊಮ್ಮೆ ಮುಟ್ಟು ಕೆಲವು ತಿಂಗಳು ಅವಧಿಗಿಂತಲೂ ತೀರಾ ಮೊದಲೇ ಅಥವಾ ತುಂಬಾ ಲೇಟಾಗಿ ಆಗುವುದು ಉಂಟು. ಪ್ರತಿ ತಿಂಗಳು ಮುಟ್ಟಾಗುವಾಗ ಮೊದಲೇ ಪ್ಯಾಡ್ಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಲು ಆಗಲ್ವಾ ಎಂದು ಕೇಳುವವರು ಹಲವರು. ಆದರೆ, ಕೆಲವು ಸಂದರ್ಭಗಳಲ್ಲಿ ನಾನಾ ಕಾರಣಗಳಿಂದ ಅದು ಸಾಧ್ಯವಾಗಿರುವುದಿಲ್ಲ.
ಮುಟ್ಟಿನ ಸಮಯದ ಸಮಸ್ಯೆ
ಇದನ್ನೇ ಸೀರಿಯಲ್‌ನಲ್ಲಿ ತೋರಿಸಲಾಗಿದೆ. ಎಷ್ಟೋ ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಅನುಭವಿಸುವ ಹೊಟ್ಟೆ ನೋವು, ತಲೆ ನೋವು, ಕಾಲಿನ ಸೆಳೆತ... ಆ ದೇವರಿಗೇ ಪ್ರೀತಿ ಎನ್ನಿಸುವುದು ಉಂಟು. ಆದರೆ ಇದನ್ನು ವಿಪರ್ಯಾಸ ಎಂದರೆ ಗಂಡನ ಮನೆಯ ಹೆಂಗಸರೇ ಅರ್ಥ ಮಾಡಿಕೊಳ್ಳದ ಸ್ಥಿತಿಯೂ ಇದೆ. ಇನ್ನು ಗಂಡಸರ ಮಾತು ಬಿಡಿ. ಆದರೆ ಕರ್ಣ ಸೀರಿಯಲ್‌ನಲ್ಲಿ ಇದನ್ನು ಮನದಟ್ಟಾಗಿ ತೋರಿಸಲಾಗಿದೆ. ಒಬ್ಬ ಗಂಡ ಹೆಣ್ಣಿನ ಮುಟ್ಟಿನ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ವಿವರಿಸಲಾಗಿದೆ.
ಪ್ಯಾಡ್ ಆರ್ಡರ್
ನಿಧಿ ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ, ಈ ತಿಂಗಳು ತುಂಬಾ ಬೇಗ ಪೀರಿಯಡ್ಸ್ ಆಯ್ತು ಆದರೆ ಪ್ಯಾಡ್ ಇಲ್ಲ ಎಂದಾಗ, ಅದಕ್ಯಾಕೆ ಇಷ್ಟೊಂದು ಮುಜುಗರ ಪಟ್ಟುಕೊಳ್ತೀರಾ ಎನ್ನುವ ಕರ್ಣ, ಪ್ಯಾಡ್ಸ್ ಆರ್ಡರ್ ಮಾಡಿ ತರಿಸಿಕೊಡುತ್ತಾನೆ.
ಶ್ಲಾಘನೆಗಳ ಮಹಾಪೂರ
ಇದಕ್ಕೆ ಅವನ ಚಿಕ್ಕಮ್ಮ ಮೂದಲಿಸುತ್ತಾಳೆ. ಹೆಂಡ್ತಿಗೆ ಈ ರೀತಿ ಸೇವೆ ಮಾಡೋದು ಅಸಹ್ಯ ಎನ್ನುತ್ತಾಳೆ. ನಿಧಿಯದ್ದು ಅತಿಯಾಯ್ತು ಎಂದಾಗ, ಕರ್ಣ ಹೆಣ್ಣಿನ ಮುಟ್ಟಿನ ಬಗ್ಗೆ ಇನ್ನೊಬ್ಬ ಹೆಣ್ಣಿಗೇ ಪಾಠ ಮಾಡಿ, ಅವಳ ಬಾಯಿ ಮುಚ್ಚಿಸುತ್ತಾನೆ. ಕೊನೆಗೆ ನಿಧಿಗೆ ಪ್ಯಾಡ್ ಕೊಟ್ಟು, ದಾಳಿಂಬೆ ಜ್ಯೂಸ್ ಅನ್ನೂ ಕೊಟ್ಟು ರೆಸ್ಟ್ ಮಾಡಲು ಹೇಳುತ್ತಾನೆ. ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಕರ್ಣನಂಥ ಗಂಡ ಪ್ರತಿ ಹೆಣ್ಣಿಗೂ ಸಿಗಬೇಕಿದೆ. ಹೆಣ್ಣಿನ ನೋವನ್ನು ಅರ್ಥ ಮಾಡಿಕೊಳ್ಳುವ ಇಂಥ ಗಂಡಸರು ಬಲು ಅಪರೂಪ ಎಂದೆಲ್ಲಾ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

