'ಅವನು ಮತ್ತು ಶ್ರಾವಣಿ' ಖ್ಯಾತಿಯ ನಟಿ ಚೈತ್ರಾ ರೆಡ್ಡಿ ಮತ್ತು ಅವರ ಪತಿ, ಛಾಯಾಗ್ರಾಹಕ ರಾಕೇಶ್ ಸಮಲ ವಿಚ್ಛೇದನದ ಹಾದಿಯಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ. ಚೈತ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪತಿಯೊಂದಿಗಿನ ಎಲ್ಲಾ ಫೋಟೋಗಳನ್ನು ಅಳಿಸಿಹಾಕಿದ್ದಾರೆ.
ಬೆಂಗಳೂರು (ಆ.3): ಕೆಲ ವರ್ಷಗಳ ಹಿಂದೆ ಸುವರ್ಣ (ಈಗಿನ ಸ್ಟಾರ್ ಸುವರ್ಣ) ವಾಹಿನಿಯಲ್ಲಿ ಪ್ರಸಾರವಾಗಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದ ಅವನು ಮತ್ತು ಶ್ರಾವಣಿ ಸೀರಿಯಲ್‌ನ ಹೀರೋಯಿನ್ ಚೈತ್ರಾ ರೆಡ್ಡಿ ಬಾಳಿನಲ್ಲಿ ಬಿರುಗಾಳಿ ಎದ್ದಿದೆ. ಕನ್ನಡ ಮಾತ್ರವಲ್ಲದೆ ಈಗ ಹೆಚ್ಚಾಗಿ ತೆಲುಗು ಸೀರಿಯಲ್‌ಗಳಲ್ಲಿಯೇ ಬ್ಯೂಸಿಯಾಗಿರುವ ನಟಿ ಚೈತ್ರಾ ಲತಾ ರೆಡ್ಡಿ ಹಾಗೂ ನಿರ್ಮಾಪಕ ಕಮ್ ಛಾಯಾಗ್ರಾಹಕ (ಸಿನಿಮಾಟೋಗ್ರಾಫರ್) ರಾಕೇಶ್ ಸಮಲಗೆ ವಿಚ್ಛೇದನ ನೀಡುವ ಹಾದಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿಯ ಸಂಸಾರ ಈಗ ಡಿವೋರ್ಸ್ ಹಂತ ತಲುಪಿದೆ ಎನ್ನುವ ವಿಚಾರ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಬ್ಯೂಸಿಯಾಗಿರುವ ನಟಿಯ ವೈಯಕ್ತಿಕ ಜೀವನದಲ್ಲಿ ಏನಾಗುತ್ತಿದೆ? ಸಂಸಾರದಲ್ಲಿ ಬಿರುಕು ಮೂಡಿದೆಯೇ? ಪತಿಯಿಂದ ದೂರವಾಗುತ್ತಿದ್ದಾರೆಯೇ? ವಿಚ್ಛೇದನ ಪಡೆಯುತ್ತಿರುವುದು ನಿಜವೇ? ಎಂಬ ಪ್ರಶ್ನೆಗಳಿಗೆ ಹೆಚ್ಚಿನ ಮೂಲಗಳಿಂದ "ಹೌದು" ಎಂಬ ಉತ್ತರ ಕೇಳಿಬರುತ್ತಿದೆ.
ತಮಿಳು ಮತ್ತು ಕನ್ನಡ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ನಟಿ ಚೈತ್ರಾ ರೆಡ್ಡಿ ಹಾಗೂ ಛಾಯಾಗ್ರಾಹಕ ರಾಕೇಶ್ ಸಮಲ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಚೈತ್ರಾ ರೆಡ್ಡಿ ಮತ್ತು ರಾಕೇಶ್ ಸಮಲ ಅವರ ನಿಶ್ಚಿತಾರ್ಥ 2020ರ ಅಕ್ಟೋಬರ್ 23ರಂದು ನೆರವೇರಿತ್ತು. ತದನಂತರ, ನವೆಂಬರ್ 11, 2020 ರಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾಗಿದ್ದರು. ಕಿರುತೆರೆಯಲ್ಲಿ ಅತ್ಯಂತ ಅನ್ಯೋನ್ಯ ದಂಪತಿ ಎಂದು ಹೆಸರು ಪಡೆದಿದ್ದ ಈ ಜೋಡಿ, ದಿಢೀರನೆ ವಿಚ್ಛೇದನದ ಹಾದಿ ತುಳಿಯಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಇನ್‌ಸ್ಟಾಗ್ರಾಮ್ ಖಾತೆಯಿಂದ ಪತಿಯೊಂದಿಗಿನ ಎಲ್ಲ ಫೋಟೋಗಳನ್ನು ಚೈತ್ರಾ ರೆಡ್ಡಿ ಡಿಲೀಟ್ ಮಾಡಿದ್ದು, ಇದು ವಿಚ್ಛೇದನದ ವದಂತಿಗೆ ಇನ್ನಷ್ಟು ಬಲ ತಂದಿದೆ. ಇತ್ತೀಚಿನ ಎಲ್ಲಾ ಫೋಟೋಗಳಲ್ಲಿ ಚೈತ್ರಾರೆಡ್ಡಿ ತನ್ನ ತಂದೆಯೊಂದಿಗೆ ಇರುವ ಚಿತ್ರಗಳನ್ನು ಮಾತ್ರವೇ ಪೋಸ್ಟ್ ಮಾಡಿದ್ದು, ಎಲ್ಲಿಯೂ ಆಕೆಯ ಪತಿ ರಾಕೇಶ್ ಅವರ ಸುಳಿವಿಲ್ಲ.

ಚೈತ್ರಾ ರೆಡ್ಡಿ ಅವರ ನಟನಾ ಪಯಣ
ಮೂಲತಃ ಬೆಂಗಳೂರಿನವರಾದ ಚೈತ್ರಾ ರೆಡ್ಡಿ, ಕನ್ನಡದಲ್ಲಿ 'ಅವನು ಮತ್ತೆ ಶ್ರಾವಣಿ' ಸೀರಿಯಲ್ ಮೂಲಕ ನಟನಾ ವೃತ್ತಿ ಆರಂಭಿಸಿದ್ದರು. ಇದು ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತು. ತಮಿಳಿನಲ್ಲಿ 'ಕಲ್ಯಾಣಂ ಮುದಲ್ ಕಾದಲ್ ವರೈ' ಮತ್ತು 'ಯಾರಡಿ ನೀ ಮೋಹಿನಿ' ಧಾರಾವಾಹಿಗಳಲ್ಲಿ ನಟಿಸಿ ಇನ್ನೂ ದೊಡ್ಡ ಯಶಸ್ಸು ಕಂಡಿದ್ದರು.
ಸುಮಾರು ಆರು ವರ್ಷಗಳ ಹಿಂದೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಿದ್ದ 'ಸುಭದ್ರಾ ಪರಿಣಯಂ' ಸೀರಿಯಲ್‌ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚೈತ್ರಾ, ನಟ ಬಾಲಾದಿತ್ಯ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಜಾಹೀರಾತೊಂದರಲ್ಲೂ (Commercial Ad) ಬಣ್ಣ ಹಚ್ಚಿದ್ದರು. ಅಕ್ಟೋಬರ್ 2021 ರಿಂದ ಪ್ರಸಾರವಾಗುತ್ತಿರುವ ತಮಿಳಿನ ಸೂಪರ್ ಹಿಟ್ 'ಕಾಯಲ್' (Kayal) ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಸ್ತುತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.


