- Home
- Entertainment
- TV Talk
- ಚೈತ್ರಾ ಕುಂದಾಪುರ 'ನಾನು ನಿರ್ದೋಷಿ' ಭಾವುಕ ಪೋಸ್ಟ್! ಬಿಗ್ ಬಾಸ್ ಸ್ಪರ್ಧಿಗೆ ಕಾನೂನು ಹೋರಾಟದಲ್ಲಿ ಜಯ!
ಚೈತ್ರಾ ಕುಂದಾಪುರ 'ನಾನು ನಿರ್ದೋಷಿ' ಭಾವುಕ ಪೋಸ್ಟ್! ಬಿಗ್ ಬಾಸ್ ಸ್ಪರ್ಧಿಗೆ ಕಾನೂನು ಹೋರಾಟದಲ್ಲಿ ಜಯ!
ಬಿಗ್ ಬಾಸ್ ಖ್ಯಾತಿಯ ಹಾಗೂ ಹಿಂದುತ್ವ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಕಳೆದ 9 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ತಮ್ಮ ಮೇಲಿದ್ದ 5 ಪ್ರಕರಣಗಳಿಂದ ನಿರ್ದೋಷಿಯಾಗಿ ಬಿಡುಗಡೆಯಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರು (ಜೂ.18): ಕಳೆದ ಎರಡು ವರ್ಷಗಳಿಂದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಭಾರಿ ಗಮನ ಸೆಳೆದಿದ್ದ ಹಿಂದುತ್ವ ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaitra Kundapura) ಸುದೀರ್ಘ 9 ವರ್ಷಗಳ ಕಾನೂನು ಹೋರಾಟದ ಬಳಿಕ ತಮಗೆ ಜಯ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 9 ವರ್ಷಗಳಲ್ಲಿ ತಮ್ಮ ಮೇಲಿದ್ದ ಬರೋಬ್ಬರಿ 5 ಪ್ರಕರಣಗಳಿಂದ ಅವರು ಈಗ ನಿರ್ದೋಷಿಯಾಗಿ ಹೊರಬಂದಿದ್ದಾರೆ.
ಭಾವುಕ ಪೋಸ್ಟ್‌ನಲ್ಲಿ ಚೈತ್ರಾ ಹೇಳಿದ್ದೇನು?
'ಏ ಆ ಹೆಣ್ಣುಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲಾ ಬಿಡ್ ಲೇ' ಅಂತಾ ಪ್ರಾರಂಭವಾದ ಹೋರಾಟವೊಂದು ಸುದೀರ್ಘ 9 ವರ್ಷಗಳ ಕಾನೂನು ಹೋರಾಟದೊಂದಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗೆ ನನಗಿದ್ದ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ. ಎಂದು ಚೈತ್ರಾ ಬರೆದುಕೊಂಡಿದ್ದಾರೆ.
ಮುಂದುವರೆದು'9 ವರ್ಷಗಳು ಬರೋಬ್ಬರಿ 5 ಕೇಸುಗಳು.. ಹೌದು, ಇವೆಲ್ಲವೂ ಒಂದು ಚಿಂತನೆಗಾಗಿ, ಒಂದು ಪಕ್ಷಕ್ಕಾಗಿ ಹಾಕಿಸಿಕೊಂಡದ್ದು. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟ... ರಾಜಕೀಯ ಪಿತೂರಿಗಳ ನಡುವೆ ಬದುಕು ಕಲಿಸಿದ ಸಂಗತಿಗಳು ಇವು. ನಂಬಿದ್ದವರೇ ನಮ್ಮನ್ನು ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಲಿಸಿದ ಹೋರಾಟವಿದು. ಈ ಸಂಚಿನಲ್ಲಿ ಭಾಗವಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆ ಗುಂಪಾಗಿದ್ದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನವಷ್ಟೇ' ಎಂದು ಪೋಸ್ಟ್ ಮಾಡುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ಗಂಗಾವತಿ ಕ್ಷೇತ್ರದಲ್ಲಿ ಹಿಂದುತ್ವ ಮತ್ತು ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಈ ವೇಳೆ ಸ್ಥಳೀಯ ರಾಜಕಾರಣಿಗಳೊಂದಿಗೆ ತೀವ್ರ ವಿವಾದ ಉಂಟಾಗಿತ್ತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಚೈತ್ರಾ ವಿರುದ್ಧ ತೇಜೋವಧೆ ಹಾಗೂ ಚಾರಿತ್ರ್ಯ ಹತ್ಯೆ ಮಾಡಲಾಗಿತ್ತು. ಇಲ್ಲಿ ಅಂದಿನ ಶಾಸಕ ಅನ್ಸಾರಿ ಹಾಗೂ ಪರಣ್ಣ ಮುನವಳ್ಳಿ ನಡುವಿನ ರಾಜಕೀಯ ಸಮರದಲ್ಲಿ ಚೈತ್ರಾ ಕುಂದಾಪುರ ಅವರೇ ಅನ್ಸಾರಿ ಅವರ ಟಾರ್ಗೆಟ್ ಆಗಿದ್ದರು. ಪರ ವಿರೋಧ ಹಾಗೂ ಧರ್ಮದ ಕುರಿತ ಅವಹೇಳನ ಇತ್ಯಾದಿ ದೂರುಗಳು ದಾಖಲಾಗಿದ್ದವು.
ಈ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಮುಕ್ತಿ ಸಿಕ್ಕಿದ್ದು, ಚೈತ್ರಾ ಕುಂದಾಪುರ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. 'ಇಂದು ಲಕ್ಷಾಂತರ ಜನರಿಂದ ವಯಸ್ಸಿನ ಹಂಗಿಲ್ಲದೆ ನಾನು 'ಅಕ್ಕಾ' ಎಂದು ಕರೆಸಿಕೊಳ್ಳುತ್ತಿದ್ದೇನೆ. ಇದುವೇ ನನಗೆ ಸಿಕ್ಕ ಬಹುದೊಡ್ಡ ಪ್ರೀತಿ' ಎಂದು ಚೈತ್ರಾ ತಮ್ಮ ಪೋಸ್ಟ್ ಕೊನೆಗೊಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

