ಗುಂಡಮ್ಮನ ಮಾವ ಮಾದಪ್ಪಂಗೆ ಉಘೇ ಉಘೇ ಎಂದ ಮಹಿಳೆಯರು; ಈ ಸಲ ಅವಾರ್ಡ್ ಫಿಕ್ಸ್!
ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯಲ್ಲಿ ಮಾದಪ್ಪ ತನ್ನ ಸೊಸೆ ಗುಂಡಮ್ಮಳಿಗೆ ಕೈತುತ್ತು ನೀಡುವ ಭಾವನಾತ್ಮಕ ದೃಶ್ಯ ವೈರಲ್ ಆಗಿದೆ. ಅತ್ತೆ ಲೀಲಾಳ ಕಿರುಕುಳಕ್ಕೆ ಒಳಗಾಗಿದ್ದ ಗುಂಡಮ್ಮಳಿಗೆ ಮಾದಪ್ಪನ ಈ ನಡೆ ಸಾಂತ್ವನ ತಂದಿದೆ. ಮಾದಪ್ಪನ ಕಾರ್ಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ಮೂರ್ನಾಲ್ಕು ಕುಟುಂಬಗಳ ಕಥೆಯಾಗಿದೆ. ಎಲ್ಲಾ ಕುಟುಂಬಗಳು ಒಂದಕ್ಕೊಂದು ಲಿಂಕ್ ಆಗಿದ್ದು, ಧಾರಾವಾಹಿ ಉತ್ತಮ ಟಿಆರ್‌ಪಿಯೊಂದಿಗೆ ಪ್ರದರ್ಶನವಾಗುತ್ತಿದೆ.
ಇದರಲ್ಲಿ ಜಿಮ್ ಸೀನ ಮತ್ತು ಗುಂಡಮ್ಮ ಜೋಡಿಯ ಟಾಮ್ ಆಂಡ್ ಜರ್ರಿ ಜಗಳ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಪ್ರತಿ ಸಂಚಿಕೆಯಲ್ಲಿಯೂ ಗುಂಡಮ್ಮ ಮತ್ತು ಸೀನ ನಡುವಿನ ಕೋಳಿ ಜಗಳ ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ಬಲವಂತದ ಮದುವೆಯಾಗಿರುವ ಕಾರಣ ಗುಂಡಮ್ಮಳನ್ನು ಕಂಡ್ರೆ ಅತ್ತೆ ಲೀಲಾಗೆ ಸಿಕ್ಕಾಪಟ್ಟೆ ಕೋಪ. ಆದ್ರೆ ಮಾವ ಮಾದಪ್ಪ ಸೊಸೆಯನ್ನು ಮನೆ ಬೆಳಗುವ ನಂದಾದೀಪ ಎಂದು ಕರೆಯುತ್ತಾನೆ.
ಇಷ್ಟು ದಿನ ಸೊಸೆ ಗುಂಡಮ್ಮಗೆ ಪತ್ನಿ ಊಟ ಹಾಕದಿರುವ ವಿಷಯ ಮಾದಪ್ಪನಿಗೆ ಗೊತ್ತಿರಲಿಲ್ಲ. ಒಮ್ಮೆ ಅತ್ತೆ-ಸೊಸೆ ಮಾತುಗಳನ್ನು ಕೇಳಿದ ಬಳಿಕ ಪತ್ನಿಯ ಇನ್ನೊಂದು ಮುಖ ಮಾದಪ್ಪನಿಗೆ ಗೊತ್ತಾಗಿತ್ತು. ಇದರಿಂದ ಕೋಪಗೊಂಡ ಮಾದಪ್ಪ, ಗನ್ ಹಿಡಿದು ಪತ್ನಿಯನ್ನು ಸುಡಲು ಹೋಗಿದ್ದನು. ಈ ವೇಳೆ ಮನೆಗೆ ಆಗಮಿಸಿದ ಸ್ವಾಮೀಜಿಗಳು, ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು.
ಸ್ವಾಮೀಜಿಗಳ ಸಲಹೆಯಂತೆ ಬದಲಾದ ಮಾದಪ್ಪ, ಊಟಕ್ಕೆ ಕುಳಿತುಕೊಳ್ಳುವಾಗ ಸೊಸೆಯನ್ನು ಕರೆಯುತ್ತಾನೆ. ಅವಳು ಆಗಲೇ ಊಟ ಮಾಡಿದಳು. ನೀವು ತನ್ನಿ ಎಂದು ಗಂಡನಿಗೆ ಲೀಲಾ ಹೇಳುತ್ತಾಳೆ. ಇವತ್ತು ನನ್ನ ಮಕ್ಕಳಿಗೆ ಕೈ ತುತ್ತು ನೀಡುವೆ ಎಂದು ಮಗ, ಮಗಳು ಮತ್ತು ಸೊಸೆಯನ್ನು ಕರೆಯುತ್ತಾನೆ. ನಂತರ ಎಲ್ಲರಿಗೂ ಕೈ ತುತ್ತು ನೀಡುತ್ತಾನೆ. ಮಾವನ ಕೈ ತುತ್ತು ತಿನ್ನುವಾಗ ಗುಂಡಮ್ಮ ಭಾವುಕಳಾಗುತ್ತಾಳೆ.
ಈ ಭಾವನಾತ್ಮಕ ದೃಶ್ಯ ನೋಡಿದ ಮಹಿಳೆಯರು, ಮಾವ ಮಾದಪ್ಪನಿಗೆ ಜೈಕಾರ ಹಾಕುತ್ತಿದ್ದಾರೆ. ಈ ವರ್ಷದ ಜೀ ಕನ್ನಡದ ಉತ್ತಮ ಮಾವ ಪ್ರಶಸ್ತಿ ನಿಮಗೆ ಸಿಗುತ್ತದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸೊಸೆಗೆ ಮಾದಪ್ಪ ಕೈ ತುತ್ತು ನೀಡುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇನ್ನು ಇಷ್ಟಕ್ಕೆ ಸುಮ್ಮನಾಗದ ಮಾವ ಮಾದಪ್ಪ ಅಡುಗೆ ಮಾಡಲು ಮುಂದಾದ ದೃಶ್ಯವೂ ಮಹಿಳೆಯರಿಗೆ ಇಷ್ಟವಾಗಿದೆ. ಸೊಸೆಗೆ ಇಷ್ಟವಾದ ಶಾವಿಗೆ ಪಾಯಸ ಮತ್ತು ಟೊಮೆಟೋ ಬಾತ್ ಮಾಡಿ ಸೊಸೆಗೆ ಹೊಟ್ಟೆ ತುಂಬಾ ತಿನ್ನಿಸಿದ್ದಾನೆ. ಮಗ, ಸೊಸೆ ಮತ್ತು ಗಂಡ ಜೊತೆಯಾಗಿ ಅಡುಗೆ ಮಾಡೋದನ್ನು ನೋಡಿ ಲೀಲಾ ಹೊಟ್ಟೆ ಉರಿದುಕೊಂಡಿದ್ದಾಳೆ