ಒಂದೇ ದಿನದಲ್ಲಿ ಕಣ್ಮರೆಯಾದ್ರು ಸಂಪೂರ್ಣ ಗ್ರಾಮದ ಜನ್ರು, ಕುಲ್ದಾರ ಈಗ ದೆವ್ವಗಳ ಊರು!
ದೇವರಿದ್ದಾನೆ ಅನ್ನೋದು ಎಷ್ಟು ನಿಜವೋ, ದೆವ್ವ ಇದೆ ಅನ್ನೋದು ಅಷ್ಟೇ ನಿಜ ಎಂದು ಹಲವರು ಹೇಳುತ್ತಾರೆ. ಪ್ರಪಂಚದ ಹಲವೆಡೆ ದೆವ್ವ ಇರೋದನ್ನು ಸಾಬೀತುಪಡಿಸಿದ ಹಲವು ಸ್ಥಳಗಳಿವೆ. ಕೆಟ್ಟ ಘಟನೆಗಳಿಗೆ, ಸಾವಿಗೆ ಕಾರಣವಾಗಿವೆ. ಆದರೆ ವಿಶ್ವದ ಅತ್ಯಂತ ಭಯಾನಕ ಸ್ಥಳ ಭಾರತದಲ್ಲೇ ಇದೆ ಅನ್ನೋದು ನಿಮಗೆ ಗೊತ್ತಿದ್ಯಾ?
ರಾಜಸ್ಥಾನದ ಕುಲಧಾರ ಗ್ರಾಮವು ಭಾರತದ ಮೋಸ್ಟ್ ಹಾಂಟೆಡ್ ಪ್ಲೇಸ್ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ಸಂಜೆಯಾದರೆ ಸಾಕು ಜನರು ಓಡಾಡುವಂತಿಲ್ಲ. ರಾತ್ರಿಯಾದ ಮೇಲೆ ಯಾರಾದರೂ ಈ ಗ್ರಾಮಕ್ಕೆ ಕಾಲಿಟ್ಟರೆ ಮತ್ತೆ ವಾಪಾಸ್ ಬರುವುದೇ ಇಲ್ಲ. ಈ ಜಾಗವು ಅಷ್ಟು ಭಯಾನಕವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ.
ಈ ಗ್ರಾಮಸ್ಥರು ಮಾಂತ್ರಿಕನಿಂದ ಶಾಪಗ್ರಸ್ತರಾಗಿದ್ದರು ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಸ್ಥಳೀಯ ಜಮೀನುದಾರರು ಪಲಿವಾಲ್ ಬ್ರಾಹ್ಮಣರನ್ನು ಓಡಿಸಿದರು ಎನ್ನುತ್ತಾರೆ. ಹೀಗಾಗಿ ಈ ಊರು ಭಯಾನಕ ದೆವ್ವದ ಊರಾಗಿ ಮಾರ್ಪಟ್ಟಿತು ಎಂದು ತಿಳಿಸುತ್ತಾರೆ. ಆದರೆ ನಿಖರವಾದ ಕಾರಣ ಇವತ್ತಿಗೂ ಯಾರಿಗೂ ತಿಳಿದಿಲ್ಲ.
ರಾಜಸ್ಥಾನದ ಜೈಸಲ್ಮೇರ್‌ನ ಪಶ್ಚಿಮಕ್ಕೆ 17 ಕಿಮೀ ದೂರದಲ್ಲಿರುವ ಕುಲಧಾರಾ, ಸುಮಾರು 300 ವರ್ಷಗಳ ಹಿಂದೆ ಪಲಿವಾಲ್ ಬ್ರಾಹ್ಮಣ ಗ್ರಾಮವಾಗಿತ್ತು.
ಈ ಗ್ರಾಮವನ್ನು 1291ರಲ್ಲಿ ಪಲಿವಾಲ್ ಬ್ರಾಹ್ಮಣರು ಸ್ಥಾಪಿಸಿದರು. ಆದರೆ ಒಂದು ರಾತ್ರಿ, 1825ರಲ್ಲಿ, ಕುಲಧಾರದಲ್ಲಿದ್ದ ಜನರೆಲ್ಲರೂ ಕತ್ತಲೆಯಲ್ಲಿ ಕಣ್ಮರೆಯಾದರು ಎಂದು ತಿಳಿದುಬಂದಿದೆ.
ನಂತರದ ದಿನಗಳಲ್ಲಿ ಕುಲಧಾರ ಭೂತದ ಪಟ್ಟಣವಾಗಿ ಮಾರ್ಪಟ್ಟಿದ್ದು, ಹಳ್ಳಿಗರ ದೆವ್ವ ಈಗಲೂ ಗ್ರಾಮದಲ್ಲಿ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.
ದಂತಕಥೆಯ ಪ್ರಕಾರ, ಗ್ರಾಮದ ಪ್ರಧಾನ ಮಂತ್ರಿಯಾದ ಸಲೀಂ ಸಿಂಗ್, ಹಳ್ಳಿಯ ಮುಖ್ಯಸ್ಥನ ಮಗಳ ಮೇಲೆ ಕೆಟ್ಟ ದೃಷ್ಟಿ ಹಾಕಿದ್ದನು. ಆಕೆಯನ್ನು ಮದುವೆಯಾಗಬೇಕೆಂದು ಬಯಸಿದ್ದನು.
ಆದ್ರೆ ಹಳ್ಳಿಯ ಮುಖ್ಯಸ್ಥ ಮಗಳನ್ನು ಇಂಥಾ ಕ್ರೂರಿಗೆ ನೀಡಲು ಇಷ್ಟಪಡಲ್ಲಿಲ್ಲ. ಹೀಗಾಗಿ ರಾತ್ರೋರಾತ್ರಿ ಎಲ್ಲರೂ ಮನೆ ಬಿಟ್ಟು ತೆರಳುತ್ತಾರೆ. ಗ್ರಾಮದಿಂದ ಹೊರಡುವ ಮೊದಲು ಕುಲಧಾರವನ್ನು ಶಪಿಸುತ್ತಾರೆ. ಹೀಗಾಗಿ ಇವತ್ತಿಗೂ ಅಲ್ಲಿ ಎಲ್ಲವೂ ಭಯಾನಕವಾಗಿದೆ ಎನ್ನುತ್ತಾರೆ.
ಇನ್ನೊಂದು ಕಥೆಯ ಪ್ರಕಾರ, ಸಲೀಂ ಸಿಂಗ್, ಊರಿನ ಮುಖ್ಯಸ್ಥ ಮಗಳನ್ನು ಮದುವೆ ಮಾಡಿ ಕೊಡಲು ಒಪ್ಪದ್ದಕ್ಕಾಗಿ ಎಲ್ಲಾ ಬ್ರಾಹ್ಮಣರನ್ನೆಲ್ಲಾ ಕ್ರೂರವಾಗಿ ಸಾಯಿಸಿದನು. ಅವರೆಲ್ಲರೂ ದೆವ್ವಗಳಾಗಿ ಇಲ್ಲೇ ಓಡಾಡುತ್ತಿದ್ದಾರೆ ಎನ್ನುತ್ತಾರೆ.
ಇವತ್ತಿಗೂ ಕತ್ತಲೆಯಾದರೆ ಇಲ್ಲಿ ವಿಚಿತ್ರ ಶಬ್ದ, ಕೂಗು ಕೇಳಿ ಬರುತ್ತದೆ. ಭಯಾನಕ ಘಟನೆಗಳು ನಡೆಯುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ.
ನಂತರದ ವರ್ಷಗಳಲ್ಲಿ ಜನರು ಇಲ್ಲಿಗೆ ಬರಲು ಭಯಪಟ್ಟ ಕಾರಣ ಕುಲಧಾರ ಹಾಂಟೆಡ್ ಸ್ಥಳವಾಗಿ ಗುರುತಿಸಿಕೊಂಡಿದೆ. ರಾಜಸ್ಥಾನಿ ಸರ್ಕಾರವು 2015 ರಲ್ಲಿ ಈ ಪ್ರದೇಶವನ್ನು ಪ್ರವಾಸೋದ್ಯಮ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿತು.
ಸಂಜೆ 6 ಗಂಟೆಯ ನಂತರ ಪ್ರವಾಸಿಗರಿಗೆ ಗ್ರಾಮಕ್ಕೆ ಪ್ರವೇಶಿಸಲು ಅನುಮತಿ ಇಲ್ಲ. ಏಕೆಂದರೆ ಇಲ್ಲಿ ಆತ್ಮಗಳು ಈಗಲೂ ಕಾಡುತ್ತವೆ ಎಂದು ಸ್ಥಳೀಯರು ನಂಬುತ್ತಾರೆ.