ಲಕ್ಷದ್ವೀಪ ಪ್ರವಾಸದಲ್ಲಿ ಸ್ನೋರ್ಕೆಲಿಂಗ್ ಜೊತೆಗೆ ಈ ಅನುಭವಗಳನ್ನೂ ಪಡೆಯಿರಿ..
ಪ್ರಧಾನಿ ಮೋದಿ ಲಕ್ಷದ್ವೀಪ ಪ್ರವಾಸದಲ್ಲಿ ಸ್ನೋರ್ಕೆಲಿಂಗ್ ಮಾಡಿದ ವಿಡಿಯೋ ನೋಡಿ ನೀವು ಈಗಾಗಲೇ ಲಕ್ಷದ್ವೀಪ ಪ್ರವಾಸಕ್ಕೆ ಯೋಜನೆ ಆರಂಭಿಸಿರಬಹುದು. ಈ ಪ್ರವಾಸದಲ್ಲಿ ನೀವು ಇನ್ನೂ ಏನೇನು ಮಾಡಬಹುದೆಂಬ ವಿವರ ಇಲ್ಲಿದೆ..
ಪ್ರಧಾನಿ ಮೋದಿ ತಮ್ಮ ಲಕ್ಷದ್ವೀಪ ಪ್ರವಾಸವನ್ನು ಖುಷಿಕರ ಎಂದು ಹೇಳಿ ಅಲ್ಲಿನ ತಮ್ಮ ಸ್ನೋರ್ಕೆಲಿಂಗ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ಬಹಳಷ್ಟು ಜನರು ಲಕ್ಷದ್ವೀಪ ಪ್ರವಾಸದತ್ತ ಯೋಜನೆ ರೂಪಿಸುತ್ತಿದ್ದಾರೆ. ಲಕ್ಷದ್ವೀಪಕ್ಕೆ ಹೋಗೋಕೆ ಮಾಲ್ಡೀವ್ಸ್‌ನಂತೆ ಯಾವುದೇ ಪಾಸ್‌ಪೋರ್ಟ್ ಅಗತ್ಯವಿಲ್ಲ, ಏಕೆಂದರೆ ಅದು ನಮ್ಮದೇ ದೇಶದ ಕೇಂದ್ರಾಡಳಿತ ಪ್ರದೇಶವಾಗಿದೆ ಎಂಬುದು ಒಂದು ಪ್ಲಸ್ ಪಾಯಿಂಟ್.
ನೀವು ಕೂಡಾ ಲಕ್ಷದ್ವೀಪ ಹೋಗಬೇಕು, ಅಲ್ಲಿ ಸ್ನೋರ್ಕೆಲಿಂಗ್ ಮಾಡಬೇಕು ಎಂದು ಯೋಜಿಸುತ್ತಿದ್ದರೆ, ನಿಮ್ಮ ಪ್ರವಾಸದಲ್ಲಿ ಸೇರಿಸಿಕೊಳ್ಳಬಹುದಾದ ಮತ್ತಷ್ಟು ರೋಮಾಂಚಕ ಚಟುವಟಿಕೆಗಳ ಪಟ್ಟಿ ಇಲ್ಲಿದೆ.
ಸ್ನಾರ್ಕ್ಲಿಂಗ್
ನಿಮ್ಮ ಆದ್ಯತೆಗಳು ಮತ್ತು ಬಜೆಟ್‌ಗೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದಾದ ಹಲವಾರು ಸ್ನಾರ್ಕೆಲಿಂಗ್ ಪ್ಯಾಕೇಜುಗಳನ್ನು ನೀವು ಲಕ್ಷದ್ವೀಪದಲ್ಲಿ ಕಾಣುವಿರಿ. ಇದು ನೀರಿನೊಳಗಿನ ಲೋಕವನ್ನು ನಿಮ್ಮೆದುರು ಅನಾವರಣಗೊಳಿಸುವ ಜೊತೆಗೆ, ನಿಮ್ಮ ಸಾಹಸೀ ಪ್ರವೃತ್ತಿಗೆ ಅತ್ಯುತ್ತಮ ಮದ್ದಾಗಲಿದೆ. ಜೀವನದ ಸ್ಮರಣೀಯ ಕ್ಷಣವಾಗಿ ಜೊತೆಗಿರಲಿದೆ.
ಸ್ಕೂಬಾ ಡೈವಿಂಗ್
ನಿಮ್ಮ ಸಂಗಾತಿಯೊಂದಿಗೆ ನೀವು ಲಕ್ಷದ್ವೀಪಕ್ಕೆ ತೆರಳಿದರೆ, ಸ್ಕೂಬಾ ಡೈವಿಂಗ್ ಪ್ರಯತ್ನಿಸಲೇಬೇಕು. ಬಂಗಾರಮ್ ಮತ್ತು ಕದ್ಮತ್‌ನಲ್ಲಿರುವ ರೆಸಾರ್ಟ್‌ಗಳು ಈ ಕ್ರೀಡೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುತ್ತವೆ.
ಪ್ಯಾರಾಸೈಲಿಂಗ್
ಲಕ್ಷದ್ವೀಪದಾದ್ಯಂತ ಪ್ಯಾರಾಸೈಲಿಂಗ್ ಆಯ್ಕೆಗಳನ್ನು ನೀಡುವ ವಿವಿಧ ಸ್ಥಳಗಳನ್ನು ನೀವು ಕಾಣಬಹುದು. ಸ್ಟೀಮ್ ಮತ್ತು ಜೆಟ್ ಬೋಟ್‌ಗಳ ಮೂಲಕ ಸಮುದ್ರದಲ್ಲಿ ಕೊಂಚ ದೂರ ಸಾಗಿ, ಆಕಾಶಕ್ಕೆ ನಿಮ್ಮನ್ನು ಎತ್ತುತ್ತಾರೆ. ಇದಂಥೂ ಬಹಳ ಥ್ರಿಲ್ ಎನಿಸಲಿದೆ. ಅನುಭವವು ನಿಜವಾಗಿಯೂ ಅನನ್ಯವಾಗಿರುತ್ತದೆ. ಆಕಾಶದಲ್ಲಿ ಎತ್ತರಕ್ಕೆ ಹಾರುವಾಗ, ನೀವು ಮರಳಿನ ತೀರಗಳು ಮತ್ತು ಸಾಗರದ ವಿಹಂಗಮ 360-ಡಿಗ್ರಿ ನೋಟವನ್ನು ಆನಂದಿಸಬಹುದು. ನಂತರ ನೀರಿನ ಮೇಲೆ ಹಾರಾಡುವ ಮರೆಯಲಾಗದ ನೆನಪು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ.
Kayaking
ಕಯಾಕಿಂಗ್
ಕಯಾಕಿಂಗ್ ಎಂಬುದು ಲಕ್ಷದ್ವೀಪದಲ್ಲಿ ನೀವು ಪ್ರಯತ್ನಿಸಬಹುದಾದ ಮತ್ತೊಂದು ಮೋಜಿನ ಕ್ರೀಡೆಯಾಗಿದೆ. ಆರಂಭಿಕರೂ ಸಹ ಈ ಚಟುವಟಿಕೆಯನ್ನು ಪ್ರಯತ್ನಿಸಬಹುದು.
ಫಿಶಿಂಗ್
ಲಕ್ಷದ್ವೀಪ ಮೀನುಗಾರಿಕೆ ಉತ್ಸಾಹಿಗಳಿಗೆ ಸ್ವರ್ಗವಾಗಿದೆ. ಆಧುನಿಕ ಮತ್ತು ನವೀನ ಮೀನುಗಾರಿಕೆ ತಂತ್ರಗಳನ್ನು ಈಗ ಅಳವಡಿಸಿಕೊಳ್ಳಲಾಗಿದ್ದರೂ, ದ್ವೀಪಗಳು ತಮ್ಮ ಸಾಂಪ್ರದಾಯಿಕ ಮೀನುಗಾರಿಕೆ ವಿಧಾನಗಳು ಮತ್ತು ಹೇರಳವಾದ ಮೀನುಗಾರಿಕೆ ಮೈದಾನಗಳಿಗೆ ಹೆಸರುವಾಸಿಯಾಗಿವೆ. ಫಿಶಿಂಗ್ ನಿಮ್ಮ ಹಾಬಿಯಾಗಿದ್ದಲ್ಲಿ, ನೀವದನ್ನು ಇಲ್ಲಿ ಪ್ರಯತ್ನಿಸಬಹುದು.