ಹಿಮಪಾತ ನೋಡೋದಕ್ಕೆ ಮನಾಲಿಗೆ ಹೋಗ್ತೀರಾ? ಹಾಗಿದ್ರೆ ಈ ತಾಣಗಳನ್ನ ಮಿಸ್ ಮಾಡ್ಬೇಡಿ!
ಈ ಡಿಸೆಂಬರ್ ಅಥವಾ ಜನವರಿಗೆ ನೀವು ಮನಾಲಿಗೆ ಟ್ರಾವೆಲ್ ಮಾಡೋ ಪ್ಲ್ಯಾನ್ ಇದ್ರೆ, ಮಿಸ್ ಮಾಡದೇ ನೋಡಲೇಬೇಕಾದ ಸುಂದರ ತಾಣಗಳ ಲಿಸ್ಟ್ ಇಲ್ಲಿವೆ.
ನೀವು ಡಿಸೆಂಬರ್, ಜನವರಿಯಲ್ಲಿ ಹಿಮಪಾತವನ್ನು ನೋಡೋದಕ್ಕೆ ಇಷ್ಟಪಟ್ಟರೆ, ಹಿಮಾಚಲ ಪ್ರದೇಶವು (Himachal Pradesh) ಅತ್ಯುತ್ತಮ ಸ್ಥಳವಾಗಿದೆ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನಾಲಿ ಗಿರಿಧಾಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಬಹುದು ಮತ್ತು ಇಲ್ಲಿ ಹಿಮಪಾತವನ್ನು ಕಣ್ತುಂಬಿಕೊಳ್ಳಬಹುದು. ಚಳಿಗಾಲದಲ್ಲಿ, ದೇಶ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರು ಕೂಡ ಮನಾಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಹಿಮಪಾತವನ್ನು ಆನಂದಿಸಲು ಬರುತ್ತಾರೆ. ನೀವು ಅಲ್ಲಿಗೆ ಹೋಗೋದಕ್ಕೆ ಪ್ಲ್ಯಾನ್ ಮಾಡಿದ್ರೆ, ಈ ತಾಣಗಳನ್ನು ನೋಡೊದನ್ನ ಮಿಸ್ ಮಾಡ್ಲೇಬೇಡಿ. ಇವು ಅಷ್ಟೊಂದು ಜನಪ್ರಿಯತೆ ಗಳಿಸಿಲ್ಲದ, ಆದ್ರೆ ಒಂದು ಬಾರಿಯಾದರೂ ನೋಡಲೇಬೇಕಾದ ಸುಂದರ ತಾಣಗಳಿವು.
ನಗ್ಗರ್ ಕ್ಯಾಸೆಲ್ (Naggar Castle) : ನಗ್ಗರ್ ಕ್ಯಾಸೆಲ್ ಒಂದು ಸುಂದರ ತಾಣವಾಗಿದ್ದು, ಇಲ್ಲಿ ನೀವು ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಜೊತೆಗೆ ಇಲ್ಲಿ ಕುಲ್ಲು ಆರ್ಟಿಟೆಕ್ಚರ್ ಕೂಡ ಕಾಣಬಹುದು.
ಜೋಗಿನಿ ಫಾಲ್ಸ್ (Jogini Waterfalls) : ಇದು ಪ್ರಕೃತಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ. ಯಾಕಂದ್ರೆ ಈ ಸುಂದರವಾದ ಜೋಗಿನಿ ವಾಟರ್ ಫಾಲ್ಸ್, ಪ್ರಕೃತಿಯ ಮಧ್ಯದಲ್ಲಿ ಅಡಗಿದೆ. ಇದನ್ನು ನೋಡೊದಕ್ಕೆ ಬರೋರು ಕೂಡ ಕಡಿಮೆ. ಶಾಂತಿಯಿಂದ ಟ್ರೆಕ್ ಮಾಡುವ ಮೂಲಕ ಈ ಫಾಲ್ಸ್ ಸೌಂದರ್ಯವನ್ನು ಸವಿಯಬಹುದು.
ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ (Great Himalayan National Park) : ನೀವು ಸಾಹಸ ಪ್ರಿಯರಾಗಿದ್ರೆ ಯುನೆಸ್ಕೋ ವಲ್ರ್ಡ್ ಹೆರಿಟೇಜ್ ಲಿಸ್ಟ್ ನಲ್ಲಿರೋ ಈ ತಾಣಕ್ಕೆ ಭೇಟಿ ನೀಡಬಹುದು. ಇಲ್ಲಿ ನೀವು ಬೇರೆ ಬೇರೆ ವಿಧದ ಕಾಡು ಪ್ರಾಣಿಗಳನ್ನು ಕಾಡಬಹುದು, ಟ್ರೆಕ್ಕಿಂಗ್ ಮಾಡಬಹುದು ಜೊತೆಗೆ ಪ್ರಕೃತಿಯನ್ನು ಆನಂದಿಸಬಹುದು.
ರಸೋಲ್ ಗ್ರಾಮ (Rasol Village) : ಇದು ಪ್ರವಾಸಿ ತಾಣಗಳ ಲಿಸ್ಟ್ ನಲ್ಲಿ ಖಂಡಿತಾ ಇಲ್ಲ. ಆದರೆ ಈ ಊರಿನ ಸೌಂದರ್ಯದ ಮುಂದೆ ಎಲ್ಲವೂ ನಗಣ್ಯ ಅಂತಹ ಅದ್ಭುತವಾದ ಗ್ರಾಮ ಇದು. ನಿಶ್ಯಬ್ಧವಾಗಿರುವ, ಎತ್ತರೆತ್ತರದ ಪರ್ವತಗಳಿಂದ ಸುತ್ತುವರೆದಿರುವ ಸುಂದರ ಗ್ರಾಮ ಇದು.
ಬ್ರಿಘು ಸರೋವರ (Bhrigu Lake) : ಬ್ರಿಘು ಸರೋವರವು ಭಾರತದ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸುಮಾರು 4,300 ಮೀಟರ್ ಎತ್ತರದಲ್ಲಿದೆ. ಇದು ರೋಹ್ಟಾಂಗ್ ಪಾಸ್ ನ ಪೂರ್ವದಲ್ಲಿದೆ ಮತ್ತು ಗುಲಾಬಾ ಗ್ರಾಮದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಬ್ರಿಘು ಮಹರ್ಷಿಗಳು ತಪಸ್ಸು ಮಾಡಿದ್ದರು ಎನ್ನಲಾಗುತ್ತದೆ. ಇದೊಂದು ಸುಂದರವಾದ ತಾಣ.