ಹನಿಮೂನ್ ಪ್ಯಾಕೇಜ್ ಗೆ ಲಕ್ಷ ಲಕ್ಷ ಸುರಿದು, ದುಬೈಗೆ ಹಾರಿದ ಜೋಡಿಗೆ ಕಂಪನಿಯಿಂದ ಮಹಾ ಮೋಸ!
ಮದುವೆಯ ಬಳಿಕ ಕೆಲವು ದಿನಗಳವರೆಗೆ ಪರಸ್ಪರ ಏಕಾಂಗಿಯಾಗಿ ಸಮಯ ಕಳೆಯೋದಕ್ಕೆ ಕೆಲವು ನವವಿವಾಹಿತ ಜೋಡಿಗಳು ಹನಿಮೂನಿಗೆ ಹೋಗುವ ಮೊದಲು ಹನಿಮೂನ್ ಪ್ಯಾಕೇಜ್ ತೆಗೆದುಕೊಂಡು, ತಮ್ಮ ಹನಿಮೂನ್ ಆರಾಮವಾಗಿರಲಿ, ಮೆಮೊರೇಬಲ್ ಆಗಿರಲಿ ಎಂದು ಬಯಸ್ತಾರೆ. ಆದರೆ ಇದ್ರಿಂದ ಮೋಸ ಹೋದೋರು ಇದ್ದಾರೆ.
ಮದುವೆಯಾದ ಬಳಿಕ ಜೋಡಿಗಳಿಗೆ ತಮ್ಮ ಹನಿಮೂನ್ ಗೆ (honeymoon) ತುಂಬಾನೆ ಎಕ್ಸೈಟ್ ಮೆಂಟ್ ಇರುತ್ತೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗಬೇಕು, ಯಾವ ಡೆಸ್ಟಿನೇಶನ್ ನೋಡೋದಕ್ಕೆ ಚೆಂದ, ಅಲ್ಲಿ ಎಷ್ಟು ದಿನಗಳನ್ನು ಕಳೆಯಬೇಕು ಮತ್ತು ಯಾವುದನ್ನು ಮಿಸ್ ಮಾಡಬಾರದು ಎಂದು ಕಪಲ್ಸ್ ಮದುವೆಗೆ ಹಲವಾರು ತಿಂಗಳುಗಳ ಮೊದಲು ನಿರ್ಧರಿಸುತ್ತಾರೆ. ಸ್ವಲ್ಪ ಯೋಚಿಸಿ, ಇದೆಲ್ಲವನ್ನೂ ಯೋಜಿಸಿದ ನಂತರ, ನಿಮ್ಮ ಹನಿಮೂನ್ ಕೆಟ್ಟು ಹೋದ್ರೆ ಏನಾಗುತ್ತೆ?
ಖಂಡಿತವಾಗಿಯೂ ನಿಮಗೆ ತುಂಬಾ ಬಂದೇ ಬರುತ್ತೆ ಅಲ್ವಾ? ಏಕೆಂದರೆ ನಿಮ್ಮ ಜೀವನದುದ್ದಕ್ಕೂ ನಿಮ್ಮ ಮನಸ್ಸಿನಲ್ಲಿ ಉಳಿಯುವ ಪ್ರವಾಸ ಅಂದ್ರೆ ಅದು ನಿಮ್ಮ ಹನಿಮೂನ್. ಅದನ್ನ ಸಖತ್ತಾಗಿ ಎಂಜಾಯ್ ಮಾಡಬೇಕೆಂದೇ ಬಯಸ್ತಾರೆ ಜನ. ಆದ್ರೆ ಅದುವೇ ಹಾಳಾಗಿ ಹೋದ್ರೆ, ಅಥವಾ ಹನಿಮೂನ್ ಪ್ಯಾಕೆಜಿಂಗ್ (honeymoon package) ಕಂಪನಿಯೇ ಮೋಸ ಮಾಡಿದ್ರೆ ಮುಂದೇನು? ಇಂತದ್ದೇ ಒಂದು ಘಟನೆ ದೆಹಲಿಯ ವ್ಯಕ್ತಿಯ ಜೀವನದಲ್ಲಿ ನಡೆದಿದೆ. ನೋಯ್ಡಾ ಮೂಲದ ಕಂಪನಿಯೊಂದರ ಮೂಲಕ ದುಬೈಗೆ ಹನಿಮೂನ್ ಗೆ ಹಾರಿದ ಜೋಡಿಗಳಿಗೆ ಕಾದಿದ್ದು ಭಾರಿ ಶಾಕ್.
ನೋಯ್ಡಾದ ಟ್ರಾವೆಲ್ ಕಂಪನಿಯಿಂದ ನವ ಜೋಡಿಗೆ ಮೋಸ
ದೆಹಲಿ ನಿವಾಸಿ ಅಂಕಿತ್ ಗುಪ್ತಾ 2022 ರಲ್ಲಿ ಮದುವೆಯಾಗಿದ್ದರು. ಹಲವು ತಿಂಗಗಳಿಂದ, ಅವರು ಮತ್ತು ಅವರ ಸಂಗಾತಿ ತಮ್ಮ ಮಧುಚಂದ್ರಕ್ಕೆ ಎಲ್ಲಿಗೆ ಹೋಗಬೇಕೆಂದು ಕನಸು ಕಾಣುತ್ತಿದ್ದರು. ಹೆಚ್ಚಿನ ಸರ್ಚ್ ಮಾಡಿ ಮತ್ತು ಡಿಸ್ಕಸ್ ಮಾಡಿ ಕೊನೆಗೆ, ಇಬ್ಬರೂ ದುಬೈಯನ್ನು ತಮ್ಮ ಹನಿಮೂನ್ ತಾಣವನ್ನಾಗಿ ಆರಿಸಿಕೊಂಡರು. ಅಂಕಿತ್ ನೋಯ್ಡಾ ಮೂಲದ ಟ್ರಾವೆಲ್ ಕಂಪನಿಯಿಂದ 5 ಲಕ್ಷ ರೂ.ಸದಸ್ಯತ್ವವನ್ನು ಪಡೆದಿದ್ದರು. ಇದರಲ್ಲಿ ಕಂಪನಿಯು ಜೋಡಿಗಳಿಬ್ಬರಿಗೆ ಜನರಿಗೆ ಐದು ವರ್ಷಗಳ ಇಂಟರ್ನ್ಯಾಷನಲ್ ಪ್ಯಾಕೇಜ್ (international package) ನೀಡಿತು. ಹಾಗಾಗಿ ಅಂಕಿತ್ ಮತ್ತು ಅವರ ಪತ್ನಿ ದುಬೈಗೆ ಹೋಗಲು ಪ್ಲ್ಯಾನ್ ಮಾಡಿದ್ದರು. ಕಂಪನಿಯ ನೀತಿಯ ಪ್ರಕಾರ ದುಬೈ ಪ್ರವಾಸದ ಎಲ್ಲಾ ಅರೇಂಜ್ ಮೆಂಟ್, ಟಿಕೇಟ್ ಬುಕ್ಕಿಂಗ್, ದುಬೈನಲ್ಲಿ ಹೊಟೇಲ್ ಬುಕ್ಕಿಂಗ್, ಎಲ್ಲವೂ ಇದೇ ಪ್ಯಾಕೇಜ್ ನಲ್ಲಿ ಬರಬೇಕಿತ್ತು. ಆದ್ರೆ ಆಗಿದ್ದು ಮಾತ್ರ ಬೇರೆ.
ಕೊನೆಯ ಕ್ಷಣದಲ್ಲಿ ಮೋಸ ಮಾಡಿದ ಟ್ರಾವೆಲ್ ಕಂಪನಿ
ನೋಯ್ಡಾ ಕಂಪನಿಯು ಎಲ್ಲವನ್ನೂ ಮ್ಯಾನೇಜ್ ಮಾಡುತ್ತೆ, ದುಬೈ ಗೆ ಹನಿಮೂನಿಗೆ ಹೋದ್ರೆ ಅಲ್ಲಿ ಏನೂ ತೊಂದರೆ ಆಗೋ ಸಾಧ್ಯತೆ ಇರೋಕೆ ಚಾನ್ಸ್ ಇಲ್ಲ ಎಂದು ಅಂಕಿತ್ ಅಂದುಕೊಂಡಿದ್ದರು. ಆದರೆ ದುಬೈಗೆ ಹೋಗಿ ತಲುಪಿದ ನವ ಜೋಡಿಗಳಿಗೆ ಆಗಿದ್ದು ದೊಡ್ಡ ಶಾಖ್. 15 ನವೆಂಬರ್ 2022 ರಂದು, ಅಂಕಿತ್ ಮತ್ತು ಪತ್ನಿ ದುಬೈಗೆ ತೆರಳಲು ನಿರ್ಧರಿಸಿದ್ರು.. ಹೋಟೆಲ್ ಬುಕಿಂಗ್, ಟಿಕೆಟ್ ಸೇರಿ ಇತರೆ ವ್ಯವಸ್ಥೆ ಮಾಡುವುದಾಗಿ ನೋಯ್ಡಾ ಕಂಪನಿ ಹೇಳಿತ್ತು. ಕಂಪನಿಯನ್ನು ನಂಬಿ ಇಬ್ಬರೂ ದುಬೈ ತಲುಪಿದಾಗ, ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. ಯಾಕಂದ್ರೆ ಕಂಪನಿ ನೀಡಿದ ಭರವಸೆಗಳ ಪ್ರಕಾರ, ಅಲ್ಲಿ ಯಾವುದೇ ಅರೇಂಜ್ ಮೆಂಟ್ ಮಾಡಿಯೇ ಇರಲಿಲ್ಲ. ಕಂಪನಿಯು ಯಾವುದೇ ರೀತಿಯಲ್ಲಿ ಹೋಟೆಲ್, ಟ್ಯಾಕ್ಸಿಯನ್ನು ವ್ಯವಸ್ಥೆ ಮಾಡಿಲ್ಲ. ಇಬ್ಬರ ಫ್ಲೈಟ್ ಬುಕ್ಕಿಂಗ್ ಸಹ ಮಾಡಿರಲಿಲ್ಲ ಕಂಪನಿ.
ಮತ್ತೆ ತಾವೇ ಖರ್ಚು ಮಾಡಿ ದುಬೈನಲ್ಲಿ ಉಳಿದ ಜೋಡಿ
ನಾವು ದುಬೈ ತಲುಪುತ್ತಿದ್ದಂತೆ ಎಲ್ಲವೂ ಅರೇಂಜ್ ಆಗಬೇಕಿತ್ತು. ಆದ್ರೆ ಅಲ್ಲಿ ಏನೂ ತಯಾರಿಯೇ ಇರಲಿಲ್ಲ. ನೋಯ್ಡಾ ಕಂಪನಿಗೆ ಹಲವಾರು ಬಾರಿ ಸಂಪರ್ಕಕ್ಕೆ ಪ್ರಯತ್ನಿಸಿದ್ರೂ ಕಂಪನಿ ಯಾವುದಕ್ಕೂ ಸರಿಯಾದ ಪ್ರತಿಕ್ರಿಯೆ ಕೊಡಲೇ ಇಲ್ಲ. ಇದ್ರಿಂದ ಕೋಪದ ಜೊತೆಗೆ ಅಂಕಿತ್ ಮತ್ತವರ ಪತ್ನಿಗೆ ಬೇಸರವೂ ಆಗಿತ್ತು, ಯಾಕಂದ್ರೆ, ತಮ್ಮ ಹನಿಮೂನ್ ಎಂಜಾಯ್ ಮಾಡಲು ಬಂದಿದ್ದ ಜೋಡಿಗೆ ಕಾದಿದ್ದು ನಿರಾಸೆ. ಕೊನೆಗೆ ತಮ್ಮ ಹನಿಮೂನ್ ಹಾಳಾಗಬಾರದೆಂದು 5 ದಿನ ತಮ್ಮ ಟ್ರಾವೆಲ್, ಊಟ, ತಿಂಡಿ, ಹೊಟೇಲ್ ವೆಚ್ಚವನ್ನು ತಾವೇ ಭರಿಸಿ ದುಬೈನಲ್ಲಿ ಹನಿಮೂನ ಎಂಜಾಯ್ ಮಾಡಿ ಬಂದಿದ್ದರು ಜೋಡಿ.
ಕಂಪನಿ ವಿರುದ್ಧ ಕೋರ್ಟ್ ಮೊರೆ ಹೋದ ಅಂಕಿತ್
ದುಬೈನಿಂದ ಹಿಂದಿರುಗಿದ ತಕ್ಷಣ ಅಂಕಿತ್ ಮೊದಲು ಮಾಡಿದ ಕೆಲಸ ಅಂದ್ರೆ ನೋಯ್ಡಾ ಮೂಲದ ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ. ಇದೀಗ ಅಂಕಿತ್ ಪರವಾಗಿ ತೀರ್ಪು ಹೊರ ಬಂದಿದೆ. ಈ ವಿಷಯದ ಬಗ್ಗೆ ಕ್ರಮ ಕೈಗೊಂಡ ಆಯೋಗವು ಅಂಕಿತ್ ಗೆ 9% ಬಡ್ಡಿದರದೊಂದಿಗೆ 10 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ಕಂಪನಿಗೆ ಸೂಚಿಸಿದೆ.
ಗ್ರಾಹಕ ವೇದಿಕೆಯಲ್ಲಿ ದೂರು ನೀಡುವುದು ಹೇಗೆ?
ನೀವೂ ಸಹ ಅಂಕಿತ್ ನಂತೆ ಯಾವುದೇ ಕಂಪನಿಗೆ ಹಣ ಕೊಟ್ಟು ಮೋಸಕ್ಕೊಳಗಾಗಿದ್ರೆ, ನೀವು ಗ್ರಾಹಕ ವೇದಿಕೆಯಲ್ಲಿ (consumer forum) ನಿಮ್ಮ ದೂರನ್ನು ಸಲ್ಲಿಸಬಹುದು. ಗ್ರಾಹಕ ವೇದಿಕೆಯ ದೂರು ಕೇಂದ್ರದ ಟೋಲ್ ಫ್ರೀ ಸಂಖ್ಯೆ 1800-11-4000 ಅಥವಾ 1915 ಆಗಿದೆ. ಇದಲ್ಲದೆ, ನೀವು ನಿಮ್ಮ ಮೊಬೈಲ್ನಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಎನ್ಸಿಎಚ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬಹುದು ಮತ್ತು ಈ ಅಪ್ಲಿಕೇಶನ್ ಮೂಲಕ ನಿಮ್ಮ ದೂರನ್ನು ನೋಂದಾಯಿಸಬಹುದು.