ಹೈದರಾಬಾದ್ ಬಿಟ್ಟು ಹುಟ್ಟೂರು ಶೃಂಗೇರಿಯಲ್ಲಿ ಕಾಣಿಸಿಕೊಂಡು ಕಥೆ ಹೇಳಿದ ನಭಾ ನಟೇಶ್..
ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶೃಂಗೇರಿಯ ಚೆಲುವೆ ನಭಾ ನಟೇಶ್, ಇದೀಗ ಹಲವು ವರ್ಷಗಳ ಬಳಿಕ ಹುಟ್ಟೂರಿನ ಶೃಂಗೇರಿ ಶಾರದಮ್ಮ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಪಟಾಕಿ ಪೋರಿ ನಭಾ ನಟೇಶ್
ವಜ್ರಕಾಯ ಸಿನಿಮಾದಲ್ಲಿ ಶಿವರಾಜಕುಮಾರ್ ಗೆ ನಾಯಕಿಯಾಗಿ ನಟಿಸಿ, ಪಟಾಕಿ ಪೋರಿಯಾಗಿ ಜನಪ್ರಿಯತೆ ಗಳಿಸಿದ ನಟಿ ನಭಾ ನಟೇಶ್ (Nabha Natesh). ಮೊದಲನೇ ಸಿನಿಮಾದಲ್ಲೇ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ್ದರು ಈ ಬೆಡಗಿ.
ವಜ್ರಕಾಯದ ಬೆಡಗಿ
ವಜ್ರಕಾಯದ (Vajrakaya film)ಪಟಾಕ ಪಾರ್ವತಿ ಪಾತ್ರ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇದಾದ ಬಳಿಕ ನಭಾ ನಟೇಶ್ ಲೀ , ಮತ್ತು ಸಾಹೇಬಾ ಸಿನಿಮಾದಲ್ಲಿ ನಟಿಸಿದ್ದರು. ನಂತರ ತೆಲುಗು ಚಿತ್ರರಂಗಕ್ಕೆ ಹಾರಿದ ಶೃಂಗೇರಿಯ ಈ ಬ್ಯೂಟಿಗೆ ನಂತರ ಒಂದು ಸಿನಿಮಾ ಬಳಿಕ ಮತ್ತೊಂದರಂತೆ ಸಾಲು ಸಾಲು ಅವಕಾಶಗಳು ಹರಸಿ ಬಂದು ಸದ್ಯ ಹೈದರಾಬಾದ್ನಲ್ಲೇ ನೆಲೆಯಾಗಿದ್ದಾರೆ ಪಟಾಕ ಪೋರಿ.
ಶೃಂಗೇರಿಯ ಹುಡುಗಿ
ಕೆಲ ವರ್ಷಗಳ ಹಿಂದೆ ಭೀಕರ ಆಕ್ಸಿಡೆಂಟ್ ಗೆ ಒಳಗಾಗಿ ಎರಡು ವರ್ಷ ನಟನೆಯಿಂದ ದೂರ ಉಳಿಸಿದ್ದ ನಟಿ, ಕೊನೆಯದಾಗಿ ಡಾರ್ಲಿಂಗ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಹುಟ್ಟೂರನ್ನೆ ಮರೆತು ಬಿಟ್ಟರೇ ಎನ್ನುವಾಗಲೇ ನಟಿ ಶೃಂಗೇರಿಯ (Sringeri) ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಹುಟ್ಟೂರಲ್ಲಿ ನಭಾ ನಟೇಶ್
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಭಾ ನಟೇಶ್, ಇತ್ತೀಚೆಗೆ ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತವರೂರಿಗೆ ತೆರೆಳಿದ್ದರು, ತಮ್ಮ ಮನೆಯಲ್ಲಿ ತಂದೆ ತಾಯಿ ಹಾಗೂ ಸಹೋದರನೊಂದಿಗೆ ಸಂಭ್ರಮದಿಂದ ಹಬ್ಬವನ್ನು ಆಚರಿಸಿ, ಫೋಟೊ ಹಂಚಿಕೊಂಡಿದ್ದರು. ಇದೀಗ ಶೃಂಗೇರಿ ಶಾರದಮ್ಮನ (Sringeri Sharada Temple) ದರ್ಶನ ಪಡೆದಿದ್ದು, ಆ ಫೋಟೊಗಳನ್ನು ಸಹ ತಮ್ಮ ಇನ್’ಸ್ಟಾಗ್ರಾಮಲ್ಲಿ ಹಂಚಿಕೊಂಡಿದ್ದಾರೆ.
ಶೃಂಗೇರಿ ದೇಗುಲದ ಇತಿಹಾಸ
ಶೃಂಗೇರಿ ದೇಗುಲದ ಫೋಟೋಗಳ ಜೊತೆಗೆ, ನಟಿ ಅಲ್ಲಿನ ಇತಿಹಾಸವನ್ನು ಸಹ ತೆರೆದಿಟ್ಟಿದ್ದಾರೆ. ಶೃಂಗೇರಿ, ನನ್ನ ಜನ್ಮಸ್ಥಳ. ರಾಮಾಯಣಕ್ಕೂ ಮುಂಚಿನ ಪವಿತ್ರ ಇತಿಹಾಸ. ಮಹರ್ಷಿಗಳ ತಪಸ್ಸಿನಿಂದ ಪವಿತ್ರವಾದ ಈ ಭೂಮಿ, ಋಷಿ ಋಷ್ಯಶೃಂಗರಿಂದ ಹುಟ್ಟಿಕೊಂಡಿದೆ, ಅವರು ಪುತ್ರಕಾಮೇಷ್ಟಿಯನ್ನು ಮಾಡಿದವರು, ರಾಜ ದಶರಥನಿಗೆ ಶ್ರೀರಾಮನನ್ನು ಅನುಗ್ರಹಿಸಿದರು. ಈ ದೈವಿಕ ಕೊಂಡಿ ತ್ರೇತಾಯುಗಕ್ಕೆ ಸಂಪರ್ಕ ಹೊಂದಿದೆ.
ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪನೆ
ಶತಮಾನಗಳ ನಂತರ (ಸುಮಾರು 8ನೇ -14ನೇ ಶತಮಾನ) ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ತುಂಗಾ ನದಿಯ ದಡದಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದ ಕಪ್ಪೆಗೆ ನೆರಳು ನೀಡುತ್ತಿರುವ ನಾಗರಹಾವನ್ನು ನೋಡಿ ಚಕಿತರಾದರು, ಅವರು ತಮ್ಮ ಮೊದಲ ಪೀಠವನ್ನು ಸ್ಥಾಪಿಸಲು ಶೃಂಗೇರಿಯನ್ನು ಆರಿಸಿಕೊಂಡರು. ಜ್ಞಾನದ ಸಾಕಾರ ದೇವತೆ ಶಾರದಾಂಬೆಯನ್ನು ಅವರು ಪ್ರತಿಷ್ಠಾಪಿಸಿದರು, ಶೃಂಗೇರಿಯನ್ನು ಅದ್ವೈತ ವೇದಾಂತದ ಉಜ್ವಲ ಪೀಠವನ್ನಾಗಿ ಮಾಡಿದರು. ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವೆಂದು ಪೂಜಿಸಲ್ಪಡುವ ಇದು, ತಲೆಮಾರುಗಳಾದ್ಯಂತ ಅನ್ವೇಷಕರಿಗೆ ವ್ಯಾಖ್ಯನ ಸಿಂಹಾಸನ - ಅಲೌಕಿಕ ಜ್ಞಾನದ ಸಿಂಹಾಸನ - ಆಗಿ ಉಳಿದಿದೆ.
ಆಧ್ಯಾತ್ಮಿಕ ಚಿಂತನೆಗೆ ದಾರಿದೀಪವಾದ ಶೃಂಗೇರಿ
ಶೃಂಗೇರಿಯಲ್ಲಿ ವೇದಗಳು ಮತ್ತು ಕಲೆಯ ಬಗ್ಗೆ ನನಗೆ ಮೊದಲ ಪರಿಚಯವಾಯಿತು. ಬಾಲ್ಯದಲ್ಲಿ, ಈ ಪವಿತ್ರ ನಗರವು ಪರಿಚಯಿಸಿದ ಇತಿಹಾಸ, ಸಂಸ್ಕೃತಿ ಮತ್ತು ಬುದ್ಧಿವಂತಿಕೆಯಿಂದ ನಾನು ಆಳವಾಗಿ ಪ್ರೇರಿತಳಾಗಿದ್ದೆ. ಈ ಪ್ರಕೃತಿಯ ಆಶೀರ್ವಾದ ಪಡೆದ ಸ್ಥಳದ ಬೋಧನೆಗಳು ನನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ಕಲೆಯ ಮೂಲಕ ಹೊರ ತರಲು ಪ್ರೋತ್ಸಾಹಿಸಿದವು ಮತ್ತು ಕಥೆ ಹೇಳುವ ನನ್ನ ಪ್ರೀತಿಯನ್ನು ಪೋಷಿಸಿದವು. ನಾನು ವಯಸ್ಸಾದಂತೆ ಭಾರತೀಯ ಪುರಾಣ ಮತ್ತು ಆಧ್ಯಾತ್ಮಿಕ ಚಿಂತನೆಯ ಬಗ್ಗೆ ನನ್ನ ಆಕರ್ಷಣೆ ಬಲವಾಯಿತು.
ಸಂಗೀತ, ನೃತ್ಯ, ನಟನೆಗೆ ಸ್ಪೂರ್ತಿಯಾಗಿ ಶೃಂಗೇರಿ
ಸಾಂಸ್ಕೃತಿಕ ಆಚರಣೆಗಳಿಂದ ತುಂಬಿದ ಶೃಂಗೇರಿಯ ಬೀದಿಗಳು ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಅನ್ವೇಷಿಸಲು ನನಗೆ ಸ್ಫೂರ್ತಿ ನೀಡಿದರೆ, ಅದರ ವಾಸ್ತುಶಿಲ್ಪದ ಪ್ರತಿಭೆ ನನ್ನನ್ನು ಚಿತ್ರ ಮಾಡಲು ಪ್ರೇರೇಪಿಸಿತು. ದಟ್ಟವಾದ ಕಾಡುಗಳ ನಡುವೆ ನೆಲೆಸಿರುವ ಮತ್ತು ಭಾರೀ ಮಳೆಗೆ ಹೆಸರುವಾಸಿಯಾದ ಶೃಂಗೇರಿ ತಾಳ್ಮೆ, ಪ್ರತಿಬಿಂಬ ಮತ್ತು ಆಂತರಿಕ ಶಕ್ತಿಯನ್ನು ತುಂಬುತ್ತದೆ. ಪೀಠಕ್ಕೆ ಪ್ರತಿ ಭೇಟಿಯೂ ನನ್ನನ್ನು ಕಾಲಕ್ಕೆ ಹಿಂದಕ್ಕೆ ಕರೆದೊಯ್ಯುತ್ತದೆ - ಅದು ನನ್ನ ಪ್ರಯಾಣವನ್ನು ಹೇಗೆ ರೂಪಿಸಿತು ಅನ್ನೋದನ್ನು ಹೇಳುತ್ತಿದೆ, ನನಗೆ ಮಾರ್ಗದರ್ಶನ ನೀಡುತ್ತಲೇ ಇದೆ ಮತ್ತು ಈ ಪರಂಪರೆಗೆ ಸೇರಿದವಳೆಂಬ ಹೆಮ್ಮೆ ಕೂಡ ಇದೆ ಎಂದು ಬರೆದುಕೊಂಡಿದ್ದಾರೆ.