- Home
- Entertainment
- Sandalwood
- 'ಲೂಸ್ ಮಾದ' ಸಿನಿಮಾ; ಯಾರ ಮಾತನ್ನು ಕೇಳದ ತೋಳದ ಸ್ವಭಾವವಿರೋ ಪಾತ್ರದಲ್ಲಿ 'ಲೂಸ್ ಮಾದ' ಯೋಗಿ ನಟನೆ!
'ಲೂಸ್ ಮಾದ' ಸಿನಿಮಾ; ಯಾರ ಮಾತನ್ನು ಕೇಳದ ತೋಳದ ಸ್ವಭಾವವಿರೋ ಪಾತ್ರದಲ್ಲಿ 'ಲೂಸ್ ಮಾದ' ಯೋಗಿ ನಟನೆ!
‘ದುನಿಯಾ’ ಸಿನಿಮಾದಲ್ಲಿ ʼಲೂಸ್ ಮಾದʼ ಎಂಬ ಪಾತ್ರವನ್ನು ಯೋಗೇಶ್ ಅವರು ಮಾಡಿದ್ದರು. ಆ ಪಾತ್ರಕ್ಕೆ ನೋಡುಗರು ಫಿದಾ ಆದರು. ಅಂದಿನಿಂದಲೂ ʼಲೂಸ್ ಮಾದʼ ಯೋಗೇಶ್ ಅಂತಲೇ ಯೋಗೇಶ್ ಜನಪ್ರಿಯರಾದರು. ಈಗ ʼಲೂಸ್ ಮಾದʼ ಸಿನಿಮಾದ ಶೀರ್ಷಿಕೆಯಾಗಿದೆ.

ಈ ಚಿತ್ರದ ನಾಯಕನಾಗಿ ಯೋಗೇಶ್ ಅಭಿನಯಿಸುತ್ತಿದ್ದಾರೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ಅವರು ನಿರ್ಮಿಸುತ್ತಿರುವ ಈ ಸಿನಿಮಾವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು. ಯೋಗೇಶ್ ಅವರ ತಂದೆ, ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರದ ನಿರ್ಮಾಪಕ ಧರ್ಮೇಂದ್ರ ಅವರೆ ಕ್ಯಾಮೆರಾ ಚಾಲನೆ ಮಾಡಿದರು. ಉದಯ್ ಶೆಟ್ಟಿ, ಉಮೇಶ್ ಶೆಟ್ಟಿ, ರಘು ಗುಜ್ಜಲ್ ಮುಂತಾದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಯೋಗೇಶ್ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ಸಿನಿಮಾ ಮುಹೂರ್ತದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.
ನಿರ್ಮಾಪಕ ಧರ್ಮೇಂದ್ರ ಮಾತನಾಡಿ, “ನಾನು ಮೂಲತಃ ಮಂಗಳೂರಿನವನು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್. ಸಿನಿಮಾರಂಗ ನನಗೆ ಹೊಸತು. ಕೆಲವು ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿ ಅಂತ ಹೇಳಿದರು. ನಿರ್ದೇಶಕರು ಹೇಳಿದ ಕಥೆಯೂ ಇಷ್ಟವಾಯಿತು. ನಾನು ಲೂಸ್ ಮಾದ ಯೋಗೇಶ್ ಅವರ ಅಭಿಮಾನಿ. ಅವರೆ ನಮ್ಮ ಸಿನಿಮಾದ ನಾಯಕರಾಗಿರುವುದು ಖುಷಿಯಾಗಿದೆ. ಇಂದಿನ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ” ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ರಂಜಿತ್ ಮಾತನಾಡಿ, "ಲೂಸ್ ಮಾದ" ನನ್ನ ನಿರ್ದೇಶನದ ಮೂರನೇ ಸಿನಿಮಾ. ಈ ಚಿತ್ರಕ್ಕೆ ”The Wolf" ಎಂಬ ಅಡಿಬರಹವಿದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದೆ. ಯೋಗೇಶ್ ಅವರು ಹಲವು ವರ್ಷಗಳ ಪರಿಚಯ. ಅವರಿಗೆ ಈ ಚಿತ್ರದ ಕಥೆ ಹೇಳಿದೆ. ನಾಯಕನಾಗಿ ನಟಿಸಲು ಒಪ್ಪಿಕೊಂಡರು. ಧರ್ಮೇಂದ್ರ ಅವರು ನಿರ್ಮಾಣಕ್ಕೆ ಮುಂದಾದರು. ಎಲ್ಲಾ ಪ್ರಾಣಿಗಳಿಗಿಂತ ತೋಳವನ್ನು ಪಳಗಿಸುವುದು ಸ್ವಲ್ಪ ಕಷ್ಟ. ಅದು ಯಾರ ಮಾತನ್ನು ಕೇಳದ ಪ್ರಾಣಿ. ನಮ್ಮ ಚಿತ್ರದಲ್ಲಿ ನಾಯಕನ ಸ್ವಭಾವವೂ ಇದೇ ರೀತಿ. ಯಾವುದಕ್ಕೂ ಹಾಗೂ ಯಾರಿಗೂ ಅಂಜದ ಹುಡುಗ. ಈ ಹಿಂದೆ ಯೋಗೇಶ್ ಅವರು ಮಾಡಿರುವ ಪಾತ್ರಗಳಿಗಿಂತ ಭಿನ್ನ ಪಾತ್ರ. ಕಿಶೋರ್ ಅವರು ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಆದಿ ಲೋಕೇಶ್, ಅಚ್ಯುತ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಧರ್ಮೇಂದ್ರ ಹಾಗೂ ನನ್ನ ಕಾಂಬಿನೇಶನ್‌ನಲ್ಲಿ "ಕಂಸ" ಎಂಬ ಸಿನಿಮಾ ಆರಂಭವಾಗಬೇಕಿತ್ತು. ಕಾರಣಾಂತರದಿಂದ ಆ ಸಿನಿಮಾ ವಿಳಂಬವಾಯಿತು. ಈಗ "ಲೂಸ್ ಮಾದ" ಸಿನಿಮಾ ಶುರುವಾಗಿದೆ. ಈ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. ನಾನೇ ಬೇಡ ಎನ್ನುತ್ತಿದ್ದೆ. ಆದರೆ ಈ ಕಥೆಗೂ ಶೀರ್ಷಿಕೆಗೂ ಪೂರಕವಾಗಿದೆ.
"ದುನಿಯಾ" ಸಿನಿಮಾದ ಲೂಸ್ ಮಾದ ನ ಪಾತ್ರಕ್ಕೂ ಈ ಚಿತ್ರದ ಪಾತ್ರಕ್ಕೂ ಸಂಬಂಧ ಇರುವುದಿಲ್ಲ. ನೋಡುಗರಿಗೆ ಒಂದೊಳ್ಳೆ ಸಿನಿಮಾ ಕೊಡಬೇಕು. ಹಾಗಾಗಿ ಇಡೀ ತಂಡದ ಸಹಕಾರ ಮುಖ್ಯ. ನಮ್ಮ ಚಿತ್ರಕ್ಕೆ ಅಂತಹ ಉತ್ತಮ ತಂಡ ಸಿಕ್ಕಿದೆ” ಎಂದು ರಂಜಿತ್ ಹೇಳಿದ್ದಾರೆ.
ಪ್ರದೀಪ್ ರೆಡ್ಡಿ ಛಾಯಾಗ್ರಹಣ, ರಂಜನ್ ಸಂಕಲನ, ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಚಿನ್ ಪೂಜಾರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕಿಶೋರ್, ಆದಿ ಲೋಕೇಶ್, ಅಚ್ಯುತಕುಮಾರ್ ಮೊದಲಾದ ಅನುಭವಿ ಕಲಾವಿದರ ತಾರಾಬಳಗವಿರುವ "ಲೂಸ್ ಮಾದ" ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡುವುದು ಖಂಡಿತ ಎಂದು ನಾಯಕ ಲೂಸ್ ಮಾದ ಯೋಗೇಶ್ ತಿಳಿಸಿದರು.
“ಯೋಗೇಶ್ ಜೊತೆಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ” ಎಂದರು ನಟ ಆದಿ ಲೋಕೇಶ್.
ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ, ಛಾಯಾಗ್ರಾಹಕ ಪ್ರದೀಪ್ ರೆಡ್ಡಿ, ಸಂಕಲನಕಾರ ರಂಜನ್, ಕಾರ್ಯಕಾರಿ ನಿರ್ಮಾಪಕ ಪವನ್ ಕುಮಾರ್ ಉಡುಪಿ ಹಾಗೂ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿವಾನ್ ಆಕರ್ಷ್, ರಿತೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.