ಹಣಕಾಸಿನ ಕಾರಣಕ್ಕೆ ತೂಗುದೀಪ ಕುಟುಂಬದ ಜತೆ ಸಂಬಂಧ ಕಳೆದುಕೊಂಡಿಲ್ಲ : ಧ್ರುವ ಸರ್ಜಾ
ಧ್ರುವ ಸರ್ಜಾ ಅವರು ತೂಗುದೀಪ ಕುಟುಂಬದೊಂದಿಗಿನ ಸಂಬಂಧದ ಬಿರುಕಿನ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧ ಹಾಳಾಗಿಲ್ಲ, ಇಂತಹ ಸುಳ್ಳು ಸುದ್ದಿಗಳಿಂದ ನೋವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ವಿಷಯಗಳು ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡಲು ನಿರಾಕರಿಸಿದ್ದಾರೆ.

ವದಂತಿಗಳಿಗೆ ಪ್ರತಿಕ್ರಿಯೆ
‘ಹಣಕಾಸಿನ ವಿಚಾರಕ್ಕಾಗಿಯೇ ತೂಗುದೀಪ ಕುಟುಂಬದ ಜೊತೆಗೆ ಸಂಬಂಧ ಕಳೆದುಕೊಂಡಿಲ್ಲ’ ಎಂದು ನಟ ಧ್ರುವ ಸರ್ಜಾ ಹೇಳುವ ಮೂಲಕ ‘ದರ್ಶನ್ ಜೊತೆ ಧ್ರುವ ಮುನಿಸಿಕೊಂಡಿದ್ದಾರೆ’ ಎನ್ನುವ ವದಂತಿಗಳಿಗೆ ನೇರವಾಗಿ ಪ್ರತಿಕ್ರಿಯಿಸಿದ್ದಾರೆ.
ದುಡ್ಡಿನ ವಿಚಾರಕ್ಕೆ ಬಿರುಕು ಮೂಡಿದೆ ಅನ್ನೋದೆಲ್ಲಾ ಸುಳ್ಳು
‘ಕೆಡಿ’ ಚಿತ್ರದ ಪ್ರಚಾರ ವೇಳೆ ಮಾತನಾಡುತ್ತಾ, ‘ಇಂಥ ವದಂತಿಗಳನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ಸರ್ಜಾ ಫ್ಯಾಮಿಲಿ ದುಡ್ಡಿಗೋಸ್ಕರ ಒಂದು ಸಂಬಂಧವನ್ನು ಕಳೆದುಕೊಳ್ಳುವುದಿಲ್ಲ. ಅದೇ ರೀತಿ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಫ್ಯಾಮಿಲಿ ಕೂಡ. ಹೀಗಿರುವಾಗ ನಮ್ಮ ನಡುವೆ ದುಡ್ಡಿನ ವಿಚಾರಕ್ಕೆ ಬಿರುಕು ಮೂಡಿದೆ ಎನ್ನುವುದೆಲ್ಲ ಸುಳ್ಳು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಅರ್ಜುನ್ ಸರ್ಜಾ ಅವರನ್ನೇ ಕೇಳಿ
‘ಯಾರಿಗೆಲ್ಲ ನಮ್ಮ ಸಂಬಂಧಗಳ ನಡುವೆ ಬಿರುಕು ಮೂಡಬೇಕು ಎಂದು ಆಸೆ ಇತ್ತೋ ಅವರೇ ಹಣಕಾಸಿನ ವಿಚಾರವಾಗಿ ದೂರವಾಗಿದ್ದಾರೆಂದು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಇಲ್ಲಿ ಯಾರೂ ಕೂಡ ಹಣದ ಹಿಂದೆ ಬೀಳುವವರಲ್ಲ. ಹೀಗಾಗಿ ದುಡ್ಡಿಗಾಗಿ ಬಿರುಕು ಅನ್ನೋದೆಲ್ಲ ಸುಳ್ಳು. ಈ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟನೆ ಬೇಕಿದ್ದಲ್ಲಿ ಅರ್ಜುನ್ ಸರ್ಜಾ ಅವರನ್ನೇ ಕೇಳಿ. ಸದ್ಯಕ್ಕೆ ಕೆಲವು ವಿಷಯಗಳು ನ್ಯಾಯಾಲಯದ ಹಂತದಲ್ಲಿರುವುದರಿಂದ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ’ ಎಂದು ಧ್ರುವ ಸರ್ಜಾ ಅಭಿಪ್ರಾಯ ಪಟ್ಟಿದ್ದಾರೆ.
ದರ್ಶನ್ ತೂಗುದೀಪ- ಅರ್ಜುನ್ ಸರ್ಜಾ ಕುಟುಂಬ
ದರ್ಶನ್ ತೂಗುದೀಪ ಹಾಗೂ ಅರ್ಜುನ್ ಸರ್ಜಾ ಅವರ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿದೆ. ಇದಕ್ಕೆ ಸರ್ಜಾ ಕುಟುಂಬದ ನಿರ್ಮಾಣದ ‘ಪ್ರೇಮಬರಹ’ ಸಿನಿಮಾದ ಹಣಕಾಸಿನ ವ್ಯವಹಾರವೇ ಕಾರಣ ಎನ್ನುವ ಮಾತುಗಳು ಕೆಲವು ತಿಂಗಳುಗಳಿಂದ ಸದ್ದು ಮಾಡುತ್ತಿವೆ. ಇದೇ ವಿಚಾರವಾಗಿ ಈಗ ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ.
ಕೆಡಿ ಚಿತ್ರದ ಫ್ಯಾನ್ಸ್ ಶೋ ಟಿಕೆಟ್ ಬುಕಿಂಗ್ ಶುರು
ಧ್ರುವ ಸರ್ಜಾ ಅಭಿನಯದ, ಕೆವಿಎನ್ ಸಂಸ್ಥೆ ನಿರ್ಮಾಣದ ‘ಕೆಡಿ’ ಚಿತ್ರದ ಫ್ಯಾನ್ಸ್ ಶೋಗೆ ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿದೆ. ಏ.30ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದ್ದು, ಮೊದಲ ದಿನದ ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋ ಆರಂಭವಾಗಲಿದೆ. ಈ ಫ್ಯಾನ್ಸ್ ಶೋಗೆ ಬುಕ್ ಮೈ ಶೋ ಮೂಲಕ ನಾಲ್ಕು ದಿನಗಳ ಮೊದಲೇ ಟಿಕೆಟ್ ಬುಕಿಂಗ್ ಆರಂಭವಾಗಿದೆ.
ಸೆನ್ಸಾರ್ ಕಾರಣಕ್ಕೆ ಮೊದಲು ಬಿಡುಗಡೆ ಆಗಿದ್ದ ಟ್ರೇಲರ್ ವಾಪಸ್ಸು ಪಡೆದುಕೊಂಡು ಈಗ ಹೊಸ ಟ್ರೇಲರ್ ಕೂಡ ಬಿಡುಗಡೆ ಮಾಡಿದ್ದಾರೆ. ಮೊದಲ ಟ್ರೇಲರ್‌ನಲ್ಲಿದ್ದ ಅಲೆಕ್ಸಾಂಡರ್, ನಾಯಕಿ ಹಾಗೂ ಶಿಲ್ಪಾ ಶೆಟ್ಟಿ ಪಾತ್ರ ಹೇಳುವ ಒಂದೆರಡು ಡೈಲಾಗ್‌ಗಳನ್ನು ಮ್ಯೂಟ್ ಮಾಡಿ ಎರಡನೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

