ಸ್ಟಾರ್ ನಟಿಯಾಗಿದ್ದಾಗಲೇ ಮದುವೆಯಾದ ಸರೋಜಾದೇವಿ, ವೈಯಕ್ತಿಕ ಜೀವನದ ದುಃಖದ ಸ್ಟೋರಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಬಿ. ಸರೋಜಾದೇವಿ ಅವರ ಜೀವನದಲ್ಲಿ ಯಶಸ್ಸಿನ ಜೊತೆಗೆ ಕಷ್ಟಗಳೂ ಇದ್ದವು. ಪತಿಯ ಅಗಲಿಕೆಯ ನಂತರ ಅವರು ಸಮಾಜದಿಂದ ಅನೇಕ ರೀತಿಯಲ್ಲಿ ಅತೃಪ್ತಿ ಅನುಭವಿಸಿದರು. ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರ ಬೆಂಬಲವನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಭಾರತೀಯ ಚಿತ್ರರಂಗದ ಹಿರಿಯ ನಟಿ, ಕನ್ನಡತಿ ಡಾ. ಬಿ. ಸರೋಜಾದೇವಿ ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಇಡೀ ಚಿತ್ರರಂಗ ಅವರಿಗೆ ಕಂಬನಿ ಮಿಡಿದಿದೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಚಿತ್ರರಂಗದಲ್ಲಿ ಅಪಾರ ಯಶಸ್ಸು ಗಳಿಸಿದರೂ ಅವರ ವೈಯಕ್ತಿಕ ಜೀವನ ಕಷ್ಟಕರವಾಗಿತ್ತು. ಈ ಹಿಂದೆ ಜೀ ಕನ್ನಡ ವಾಹಿನಿಯ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದರು.
ಕೈತುಂಬಾ ಸಿನಿಮಾಗಳ ಜೊತೆಗೆ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ ಯಶಸ್ಸಿನ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿಯೇ ನಟಿ ಡಾ. ಬಿ. ಸರೋಜಾದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜರ್ಮನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದ ಶ್ರೀಹರ್ಷ ಅವರೊಂದಿಗೆ 1967ರ ಮಾರ್ಚ್ 1 ರಂದು ಸಪ್ತಪದಿ ತುಳಿದರು. ಆಗಿನ ಕಾಲಕ್ಕೆ ಅದ್ಧೂರಿಯಾಗಿ ಇವರ ಮದುವೆ ನಡೆದಿತ್ತು. ಮದುವೆಯ ನಂತರ ಪತಿ ಶ್ರೀಹರ್ಷ ಅವರ ಸಹಕಾರದೊಂದಿಗೆ ನಟನೆಯನ್ನೂ ಮುಂದುವರೆಸಿದ ಸರೋಜಾದೇವಿ, ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ, 1986ರಲ್ಲಿ ಹೃದಯಾಘಾತದಿಂದ ಶ್ರೀಹರ್ಷ ಅವರು ನಿಧನರಾದದ್ದು ನಟಿಯ ಜೀವನದಲ್ಲಿ ಬರಸಿಡಿಲು ಬಡಿದಂತಾಯಿತು.
ನಾನು ಅವಾಗ ಸೂಪರ್ ಸ್ಟಾರ್. ಟಾಪ್ ನಲ್ಲಿ ಇರುವಾಗಲೇ ಮದುವೆಯಾಗಿದ್ದೆ. ಕೈಯಲ್ಲಿ ಇನ್ನೂ ಎಷ್ಟೋ ಸಿನಿಮಾಗಳು ಇತ್ತು. ಅಷ್ಟೆಲ್ಲಾ ಖುಷಿಯಿಂದ ಜೀವನ ಮಾಡಿಕೊಂಡು ಬಂದೆ. ಆದರೆ 1986ರಲ್ಲಿ ಹರ್ಷರಿಗೆ ಹಾರ್ಟ್ ಅಟ್ಯಾಕ್ ಆಯ್ತು. ಅವರು ತೀರಿಕೊಂಡರು ಎಂದು ದುಃಖದ ಕ್ಷಣವನ್ನು ಜ್ಞಾಪಿಸಿಕೊಂಡಿದ್ದರು.
ಪತಿ ನಿಧನದ ನಂತರ ಸರೋಜಾದೇವಿ ಅವರ ಸ್ಥಿತಿ ಅತ್ಯಂತ ಕಷ್ಟಕ್ಕೆ ದೂಡಿತು. “ನಾನು ಕಣ್ಣೀರು ಹಾಕ್ಲಿಲ್ಲ. ‘ಅತ್ತು ಬಿಡಿ, ಇಲ್ಲ ಅಂದ್ರೆ ಶಾಕ್ ಆಗುತ್ತೆ’ ಅಂತ ಎಲ್ಲರೂ ಹೇಳ್ತಿದ್ರು. ನಾನು ಹಾಗೇ ನಿಂತಿದ್ದೆ. ಡಾಕ್ಟರ್ ಬಂದು ಕಪಾಳಕ್ಕೆ ಹೊಡೆದರು. ಆಗ ನಾನು ಜೋರಾಗಿ ಕಿರುಚಿಕೊಂಡು, ಫಿಯಟ್ ಕಾರಿನ ಜಜ್ಜಿ ಹಾಕ್ಬಿಟ್ಟೆ ಎಂದು ತಮ್ಮ ನೋವನ್ನು ವೀಕೆಂಡ್ ವಿಥ್ ಕಾರ್ಯಕ್ರಮದಲ್ಲಿ ತೋಡಿಕೊಂಡಿದ್ದರು.
ಪತಿಯ ಅಗಲಿಕೆಯ ನಂತರ ಅವರ ಜೀವನದಲ್ಲಿ ಕಷ್ಟಗಳು ಶುರುವಾಯಿತು. ಪತಿಯ ನಿಧನ ನಂತರ ಸಮಾಜದಿಂದಲೇ ಅವರು ಅನೇಕ ರೀತಿಯಲ್ಲಿ ಅತೃಪ್ತಿ ಅನುಭವಿಸಿದರು. “ಆಗ ಎಂ.ಜಿ.ಆರ್. ಫೋನ್ ಮಾಡಿ ಸಮಾಧಾನ ಮಾಡಿದರು. ಗಂಡ ಇರುವವರೆಗೆ ಎಷ್ಟು ಸುಖದಲ್ಲಿ ಇದ್ದೆ. ಅಲ್ಲಿಂದ ನನಗೆ ಕಷ್ಟ ಶುರು ಆಯ್ತು. I suffered quite a lot , ಯಾರಾದರೂ ಕುಂಕುಮ ಕೊಡೋಕೆ ಬಂದ್ರೆ, ಮನೆಯಲ್ಲಿ ಇರುವವರಿಗೆಲ್ಲಾ ಕೊಟ್ಟರೂ ನನಗೆ ಮಾತ್ರ ಕೊಡ್ತಿರ್ಲಿಲ್ಲ. ಯಾವುದೇ ಶುಭ ಕಾರ್ಯಕ್ಕೂ ನನ್ನನ್ನು ಕರೀತಿರಲಿಲ್ಲ, ಸೇರಿಸುತ್ತಿರಲಿಲ್ಲ. ಎಷ್ಟೋ ಬಾರಿ ಒಳಗೆ ಹೋಗಿ ಗೊಳೋ ಅಂತ ಅತ್ತಿದ್ದೇನೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಮತ್ತೆ ಮದುವೆಯಾಗುವ ಕುರಿತ ಪ್ರಶ್ನೆಯೂ ಅವರ ಮನಸ್ಸನ್ನು ಕಾಡುತ್ತಿತ್ತು. ಒಂದು ಪ್ರಶ್ನೆ ನನಗೆ ಸದಾ ಕಾಡುತ್ತೆ. ಒಂದು ವೇಳೆ ನಾನು ಇನ್ನೊಂದು ಮದುವೆ ಆಗ್ಬಿಟಿದ್ರೆ, ನಾನು ಸುಮಂಗಲಿ ಆಗ್ಬಿಡ್ತಿದ್ನಾ? ಆದರೂ, ಮತ್ತೊಬ್ಬರನ್ನು ತಮ್ಮ ಜೀವನದಲ್ಲಿ ತರಲು ಅವರು ಒಪ್ಪಲಿಲ್ಲ. “ಸಮಾಜ ನನ್ನನ್ನು ಚುಚ್ತಾಯಿತ್ತು. ಇನ್ನೊಂದು ಮದುವೆ ಆಗ್ಬೇಕು ಅಂತ ತಾಯಿ ಹಠ ಹಿಡಿದರು. ಆದರೆ, ಹರ್ಷ ಅವರ ಜಾಗಕ್ಕೆ ಮತ್ತೊಬ್ಬರನ್ನು ತರೋಕೆ ನನ್ನ ಮನಸ್ಸು ಒಪ್ಪಲಿಲ್ಲ. ಅಲ್ಲಿಂದ ನಾನು ಪಟ್ಟ ಕಷ್ಟ ಮರೆಯೋಕೆ ಸಾಧ್ಯವಿಲ್ಲ. ಅತ್ತು ಅತ್ತು ನನ್ನ ಕಣ್ಣು ಬತ್ತಿಹೋಗಿತ್ತು ಎಂದು ಸರೋಜಾದೇವಿ ಹೇಳಿದ್ದರು.
ಇದೆಲ್ಲ ದುಃಖದ ನಡುವೆ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ರಾಜ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ನಾನು ಸಾವಿರಾರು ಜನರನ್ನ ನೋಡಿದ್ದೀನಿ. ಸಾವಿರಾರು ಜನರನ್ನ ಭೇಟಿ ಮಾಡಿದ್ದೀನಿ. ಆದರೆ, ನಮ್ಮ ರಾಜ್ ಕುಮಾರ್ ಅಷ್ಟು ಸರಳಜೀವಿ ಯಾರೂ ಇಲ್ಲ. ನನ್ನ ಕಷ್ಟ ಎಲ್ಲವನ್ನೂ ಅವರ ಹತ್ತಿರ ಹೇಳಿಕೊಳ್ಳುತ್ತಿದ್ದೆ. ಅದಕ್ಕೂ ಮೀಗಿಲಾಗಿ, ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮರ ಪೋಷಣೆ ಮತ್ತು ಬೆಂಬಲವನ್ನು ಅವರು ಕೃತಜ್ಞತೆಯಿಂದ ನೆನಪಿಸಿಕೊಂಡರು. “ರಾಜ್ ಕುಮಾರ್ ಮತ್ತು ಪಾರ್ವತಮ್ಮ ತುಂಬಾ ಸಪೋರ್ಟ್ ಮಾಡಿದ್ದಾರೆ. ಅವರನ್ನ ನೆನಪಿಸಿಕೊಳ್ಳಬೇಕು”, ಎಂದು ನಟಿ ಡಾ. ಬಿ. ಸರೋಜಾದೇವಿ ಮನಸಾರೆ ಈ ಎಲ್ಲಾ ವಿಚಾರಗಳನ್ನು ವೀಕೆಂಡ್ ವಿಥ್ ಶೋ ನಲ್ಲಿ ಹೇಳಿಕೊಂಡರು.