- Home
- Entertainment
- Sandalwood
- ಟೆಕ್ಕಿ ಕೆಲಸ ಹೋದ್ರೇನು 'ರೋಡ್ ಸೈಡಲ್ಲಿ ಟಿಕ್ಕಿಪೂರಿ' ಮಾರುವ ಸಾಫ್ಟ್‌ವೇರ್ ಇಂಜಿನಿಯರ್; ನಟ ಜಗ್ಗೇಶ್ ಮೆಚ್ಚುಗೆ!
ಟೆಕ್ಕಿ ಕೆಲಸ ಹೋದ್ರೇನು 'ರೋಡ್ ಸೈಡಲ್ಲಿ ಟಿಕ್ಕಿಪೂರಿ' ಮಾರುವ ಸಾಫ್ಟ್‌ವೇರ್ ಇಂಜಿನಿಯರ್; ನಟ ಜಗ್ಗೇಶ್ ಮೆಚ್ಚುಗೆ!
ಸಾಫ್ಟ್‌ವೇರ್ ಉದ್ಯೋಗ ಕಳೆದುಕೊಂಡ ಯುವಕನೊಬ್ಬ, ಧೃತಿಗೆಡದೆ ಬೆಂಗಳೂರಿನಲ್ಲಿ ಸ್ನ್ಯಾಕ್ಸ್ ಗಾಡಿ ಇಟ್ಟುಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾನೆ. ಈತನ ಛಲವನ್ನು ಮೆಚ್ಚಿದ ನಟ ಜಗ್ಗೇಶ್, ಆತನನ್ನು ಪ್ರಶಂಸಿಸಿ, ಈ ಕಥೆ ನಿರುದ್ಯೋಗಿ ಯುವಕರಿಗೆ ಮಾದರಿ ಎಂದು ಹೇಳಿದ್ದಾರೆ.

ಬೆಂಗಳೂರು (ಜ.13): ಜೀವನದಲ್ಲಿ ಕಷ್ಟಗಳು ಎದುರಾದಾಗ ಸೋತು ಅಡ್ಡದಾರಿ ಹಿಡಿಯುವವರ ನಡುವೆ, ಸಾಫ್ಟ್‌ವೇರ್ ಉದ್ಯೋಗ ಕಳೆದುಕೊಂಡ ಯುವಕನೊಬ್ಬ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವರಸ ನಾಯಕ ಜಗ್ಗೇಶ್ ಅವರು ಈ ಯುವಕನ ಛಲವನ್ನು ಕಂಡು ಬೆನ್ನುತಟ್ಟಿದ್ದು, 'ಮನಸ್ಸಿದ್ದರೆ ಮಾರ್ಗ' ಎಂದು ಕೊಂಡಾಡಿದ್ದಾರೆ.
ನಟ ಜಗ್ಗೇಶ್ ಅವರು ಇಂದು ಮಾಯಸಂದ್ರದಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಮಲ್ಲೇಶ್ವರಂನ ಎಂ.ಇ.ಎಸ್ (MES) ಕಾಲೇಜು ಮೂಲೆಯಲ್ಲಿರುವ ಸ್ನ್ಯಾಕ್ಸ್ ತಳ್ಳುಗಾಡಿಯೊಂದರ ರುಚಿ ಸವಿಯಲು ನಿಂತಿದ್ದಾರೆ. ಅಲ್ಲಿ ವ್ಯಾಪಾರ ಮಾಡುತ್ತಿದ್ದ ಯುವಕನ ಹಿನ್ನೆಲೆ ಕೇಳಿ ಅವರು ದಿಘ್ಭ್ರಾಂತರಾಗಿದ್ದಾರೆ.
ಆ ಯುವಕ ಸಾಫ್ಟ್‌ವೇರ್ ಇಂಜಿನಿಯರಿಂಗ್ ಓದಿ ಉತ್ತಮ ಕೆಲಸದಲ್ಲಿದ್ದವನು. ಕಾರಣಾಂತರಗಳಿಂದ ಉದ್ಯೋಗ ಕಳೆದುಕೊಂಡಾಗ ಆತ ದೃತಿಗೆಡದೆ, ತನ್ನ ಕುಟುಂಬದ ಹೊಣೆ ಹೊರಲು ಈ ಸ್ನ್ಯಾಕ್ಸ್ ಗಾಡಿಯನ್ನು ಆರಂಭಿಸಿದ್ದಾನೆ. ಹಗಲಿರುಳು ಶ್ರಮಪಟ್ಟು ಕೆಲಸ ಮಾಡುವ ಈತ ದಿನಕ್ಕೆ ಸುಮಾರು 2 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ. ಆತನ ಈ ಸ್ವಾಭಿಮಾನದ ದುಡಿಮೆಯನ್ನು ಕಂಡು ಜಗ್ಗೇಶ್ ಭಾವುಕರಾಗಿದ್ದಾರೆ.
ಈ ಛಲಗಾರನನ್ನು ಕಂಡಾಗ ಜಗ್ಗೇಶ್ ಅವರಿಗೆ ತಮ್ಮ ಯೌವನದ ದಿನಗಳು ನೆನಪಾಗಿವೆ. 'ನಾನು ಕೂಡ ಬದುಕಿನಲ್ಲಿ ಇಂತಹ ಅನೇಕ ಕೆಲಸಗಳನ್ನು ಮಾಡಿ, ಕಷ್ಟಪಟ್ಟು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ಬಡವರ ಮಕ್ಕಳು ಬೆಳೆಯುವ ರೀತಿ ಇದೇ ಇರಬೇಕು' ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಕ್ಕಳಿಗೆ ಜಗ್ಗೇಶ್ ಅವರು ಸಿಹಿ ಹಂಚಿ ಸಂಭ್ರಮಿಸಿದರು. ಕೈಯಲ್ಲಿ ಡಿಗ್ರಿ ಇದೆ ಎಂದು ಸುಮ್ಮನೆ ಕುಳಿತುಕೊಳ್ಳದೆ, ಸಿಕ್ಕ ಅವಕಾಶವನ್ನೇ ಬಂಡವಾಳವಾಗಿಸಿಕೊಂಡು ಯಶಸ್ವಿಯಾಗುತ್ತಿರುವ ಈ ಯುವಕನ ಕಥೆ ಸಾವಿರಾರು ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದೆ.
ಮತ್ತೊಂದು ಘಟನೆಯಲ್ಲಿ, ಡಿಸೆಂಬರ್ 14ರ ತಡರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಜಗ್ಗೇಶ್ ಅವರು ಬಸವನಗುಡಿಯ ರಾಮಕೃಷ್ಣ ಆಶ್ರಮದ ಮೂಲೆಯ ಬಳಿ ಇರುವ ಒಂದು ಸಣ್ಣ ತಳ್ಳುವ ಗಾಡಿಯ ಬಳಿ ಭೋಜನ ಸವಿದಿದ್ದಾರೆ. ಸಾಮಾನ್ಯ ಜನರಂತೆ ಗಾಡಿಯ ಹಿಂದೆ ನಿಂತು ಅತ್ಯಂತ ಆನಂದದಿಂದ ತಿಂಡಿ ಸೇವಿಸಿದ ಅವರು, ಆ ವಿಡಿಯೋವನ್ನು 'X' ಖಾತೆಯಲ್ಲಿ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

