- Home
- Life
- Relationship
- ತನ್ನ ವೀರ್ಯ ಬಳಸಿ ತಾಯಿಯಾಗಲು ಬಯಸುವರಿಗೆ IVF ವೆಚ್ಚ, ಎಲ್ಲಾ ಮಕ್ಕಳಿಗೆ ಆಸ್ತಿಯಲ್ಲಿ ಪಾಲು: ಉದ್ಯಮಿಯ ಬಿಗ್ ಆಫರ್
ತನ್ನ ವೀರ್ಯ ಬಳಸಿ ತಾಯಿಯಾಗಲು ಬಯಸುವರಿಗೆ IVF ವೆಚ್ಚ, ಎಲ್ಲಾ ಮಕ್ಕಳಿಗೆ ಆಸ್ತಿಯಲ್ಲಿ ಪಾಲು: ಉದ್ಯಮಿಯ ಬಿಗ್ ಆಫರ್
ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಅವರು 37 ವರ್ಷದೊಳಗಿನ ಮಹಿಳೆಯರಿಗೆ ತಮ್ಮ ವೀರ್ಯವನ್ನು ದಾನವಾಗಿ ನೀಡುವ ಮೂಲಕ ತಾಯಿಯಾಗಲು ಆಹ್ವಾನಿಸಿದ್ದಾರೆ. ಈ ಪ್ರಕ್ರಿಯೆಯ ಸಂಪೂರ್ಣ ಐವಿಎಫ್ ವೆಚ್ಚವನ್ನು ಭರಿಸುವುದಲ್ಲದೆ, ಈ ಮೂಲಕ ಜನಿಸುವ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಪಾಲು ನೀಡುವುದಾಗಿಯೂ ಘೋಷಿಸಿದ್ದಾರೆ.

ತಾಯಿಯಾಗಲು ಬಯಸುವವರಿಗೆ ಉದ್ಯಮಿಯ ಆಫರ್
ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಅವರು 37 ವರ್ಷದೊಳಗಿನ ತಾಯಿಯಾಗಲು ಬಯಸುವ ಯುವತಿಯರು ಹಾಗೂ ಮಹಿಳೆಯರಿಗೆ ದೊಡ್ಡದೊಂದು ಆಫರ್ ನೀಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ವೀರ್ಯವನ್ನು ಬಳಸಿ ಯಾರಾದರೂ ಗರ್ಭಧಾರಣೆಯಾಗಲು ಬಯಸಿದರೆ ಅವರಿಗೆ ಸಂಪೂರ್ಣ ಐವಿಎಫ್ ವೆಚ್ಚ ಹಾಗೂ ಆ ಮೂಲಕ ಜನಿಸಿದ ಮಗುವಿಗೆ ತಾನು ಮಾಡಿದ ಆಸ್ತಿಯಲ್ಲಿ ಪಾಲನ್ನು ಕೂಡ ನೀಡಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.
ಟೆಲಿಗ್ರಾಫ್ ಸಂಸ್ಥಾಪನಿಂದ ಭರ್ಜರಿ ಕೊಡುಗೆ
ಪಾವೆಲ್ ಡುರೊವ್ ಅವರು ಈಗಾಗಲೇ 12 ದೇಶಗಳಲ್ಲಿ ವೀರ್ಯ ದಾನದ ಮೂಲಕ ಹಾಗೂ ಮೂರು ವಿವಾಹ ಸಂಬಂಧಗಳಿಂದ ಒಟ್ಟು ಆರು ಮಕ್ಕಳನ್ನು ಮತ್ತು 100 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತಮ್ಮ ಎಲ್ಲಾ ಮಕ್ಕಳು ತಮ್ಮ ಸಂಪತ್ತಿನಲ್ಲಿ ಸಮಾನ ಪಾಲನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
$17 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಪಾವೆಲ್
ಸುಮಾರು $17 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಪಾವೆಲ್ ಡುರೊವ್ ಅವರು ರಷ್ಯಾದ ಸೋಶಿಯಲ್ ಮೀಡಿಯಾ ಸೇವೆಯಾಗಿರುವ ವಿಕೆ ಆರಂಭಿಸಿದ ನಂತರ 2013 ರಲ್ಲಿ ಟೆಲಿಗ್ರಾಮ್ ಅನ್ನು ಸ್ಥಾಪಿಸಿದ್ದರು. ಮೊದಲಿಗೆ ಅವರು ಸ್ನೇಹಿತನೋರ್ವನಿಗೆ ಸಹಾಯ ಮಾಡಲು ವೀರ್ಯ ದಾನ ಮಾಡಲು ಪ್ರಾರಂಭಿಸಿದರು.
ಹೆಚ್ಚುತ್ತಿರುವ ಪುರುಷ ಬಂಜೆತನ
ಆದರೆ ಪುರುಷ ಬಂಜೆತನ ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆ ಅವರು ಈ ವೀರ್ಯದಾನ ಕಾರ್ಯವನ್ನು ಮುಂದುವರೆಸಿದರು. ಅವರು ಈ ಹಿಂದೆ ಮಾಡಿರುವ ವೀರ್ಯದಾನದ ಮಾದರಿಗಳು ಇನ್ನೂ ಮಾಸ್ಕೋ ಚಿಕಿತ್ಸಾಲಯದಲ್ಲಿ ಸಂಗ್ರಹಿಸಿಡಲಾಗಿದ್ದು, ಅಗತ್ಯವಿರುವ 37 ವರ್ಷದೊಳಗಿನ ಅವಿವಾಹಿತ ಮಹಿಳೆಯರಿಗೆ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಭಾರಿ ಸುದ್ದಿಯಾಗಿತ್ತು ವೀರ್ಯದಾನ ವಿಚಾರ
ಜಾಗತಿಕ ಪುರುಷ ಬಂಜೆತನದ ವಿರುದ್ಧ ಹೋರಾಡಲು ಸಹಾಯ ಮಾಡುವ ಪ್ರಯತ್ನದ ಭಾಗವಾಗಿ ಅವರು ಹೀಗೆ ಘೋಷಣೆ ಮಾಡಿದ್ದಾರೆ. ಕಳೆದ ವರ್ಷ ಅವರ ವೀರ್ಯ ದಾನದ ವಿಚಾರವೂ ರಷ್ಯಾದಲ್ಲಿ ಭಾರಿ ಗಮನ ಸೆಳೆಯಿತು. ಡಜನ್‌ಗಟ್ಟಲೆ ಮಹಿಳೆಯರು ಮಾಸ್ಕೋದ ಕ್ಲಿನಿಕ್ ಮೂಲಕ ಅವರ ವೀರ್ಯವನ್ನು ಪಡೆಯಲು ಬಯಸಿದ್ದರು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ .
ಪಾವೆಲ್ ಡುರೋವ್ ವೀರ್ಯಕ್ಕೆ ಭರ್ಜರಿ ಪ್ರಚಾರ
ಪ್ರಾಥಮಿಕವಾಗಿ ಶ್ರೀಮಂತ ರಷ್ಯನ್ ಮತ್ತು ಅಂತರರಾಷ್ಟ್ರೀಯ ಗ್ರಾಹಕರಿಗೆ ಸೇವೆ ಸಲ್ಲಿಸುವ ಈ ಕ್ಲಿನಿಕ್, ಪಾವೆಲ್ ಡುರೊವ್ ಅವರ ವೀರ್ಯವನ್ನು ಹೆಚ್ಚಿನ ಆನುವಂಶಿಕ ಹೊಂದಾಣಿಕೆ ಹೊಂದಿದೆ ಎಂದು ಪ್ರಚಾರ ಮಾಡಿತು ಮತ್ತುಬೇಡಿಕೆಯಲ್ಲಿರುವ ವೀರ್ಯವನ್ನು ಬಳಸಲು ಬಯಸುವ 37 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಐವಿಎಫ್ ಚಿಕಿತ್ಸೆಗಳಿಗೂ ಅವರು ಹಣ ನೀಡುವುದಾಗಿ ಹೇಳಿತು.
ಅವಿವಾಹಿತ ಮಹಿಳೆಯರಿಗೆ ಮಾತ್ರ ಅವಕಾಶ
ಈ ಚಿಕಿತ್ಸಾಲಯದ ಮಾಜಿ ವೈದ್ಯರು, ವೀರ್ಯ ದಾನವು ಅವಿವಾಹಿತ ಮಹಿಳೆಯರಿಗೆ ಮಾತ್ರ ಲಭ್ಯವಿದೆ. ಭ್ರೂಣಗಳನ್ನು ಆನುವಂಶಿಕ ಅಸ್ವಸ್ಥತೆಗಳಿಗಾಗಿ ಪರೀಕ್ಷಿಸಲಾಗುತ್ತದೆ. ಕಾನೂನು ತೊಡಕುಗಳನ್ನು ತಪ್ಪಿಸಲು ಡುರೊವ್ ಅವರ ವೀರ್ಯವನ್ನು ಪಡೆಯಲು 37 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಅವಕಾಶವಿದೆ ಎಂದು ಆ ವೈದ್ಯರು ಹೇಳಿದ್ದಾರೆ.
ಎಲ್ಲಾ ಮಕ್ಕಳಿಗೂ ಆಸ್ತಿಯಲ್ಲಿ ಪಾಲು
2010ರಲ್ಲಿ ಸ್ನೇಹಿತರೊಬ್ಬರಿಗೆ ವೀರ್ಯದಾನ ಮಾಡುವ ಮೂಲಕ ಪಾವೆಲ್ ಅವರ ವೀರ್ಯದಾನದ ಪಯಣ ಆರಂಭವಾಗಿದೆ. ಗರ್ಭಧಾರಣೆಯ ವಿಧಾನವನ್ನು ಲೆಕ್ಕಿಸದೇ ನನ್ನ ಎಲ್ಲಾ ಮಕ್ಕಳು ನನ್ನ ಆಸ್ತಿಯಲ್ಲಿ ಪಾಲುಪಡೆಯಲಿದ್ದಾರೆ. ಬಹುಶಃ ಇಂದಿನಿಂದ 30 ವರ್ಷಗಳ ನಂತರ, ನಾನು ಹೋದ ನಂತರ ಅವರು ನನ್ನ ಎಸ್ಟೇಟ್‌ನಲ್ಲಿ ಪಾಲನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
