ಮಕ್ಕಳನ್ನು ಮನೇಲಿ ಒಂಟಿಯಾಗಿ ಬಿಟ್ಟು ಹೋಗೋ ಮುನ್ನ ಈ ವಿಚಾರ ಗಮನದಲ್ಲಿರಲಿ
ಪೋಷಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲವೊಮ್ಮೆ ಕೆಲಸಕ್ಕಾಗಿ ಹೊರಗೆ ಹೋಗಬೇಕಾಗುತ್ತದೆ. ಆದರೆ ಹೀಗೆ ಮಕ್ಕಳನ್ನು ಒಂಟಿಯಾಗಿ ಬಿಡುವುದು ಒಳ್ಳೆಯದಲ್ಲ. ಮತ್ತು ಹೊರಗೆ ಹೋಗುವ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕೆಲವು ವಿಷಯಗಳನ್ನು ಮರೆಯದೇ ಹೇಳಬೇಕು..ಏನದು?
ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಚಿಕ್ಕ ಮಕ್ಕಳಿಗೆ ಏನೂ ಗೊತ್ತಿರುವುದಿಲ್ಲ. ಯಾರು ಏನು ಹೇಳಿದರೂ ನಂಬುತ್ತಾರೆ.
ಹೀಗಾಗಿ ಮನೆಯಲ್ಲಿ ಮಕ್ಕಳನ್ನು ಮಾತ್ರ ಒಂಟಿಯಾಗಿ ಬಿಟ್ಟು ಹೋಗುವಾಗ ಪೋಷಕರು ಕೆಲವೊಂದು ವಿಚಾರಗಳನ್ನು ಹೇಳಿ ಕೊಡಬೇಕು. ಅದೇನು ತಿಳಿಯೋಣ.
ಅಪರಿಚಿತರೊಂದಿಗೆ ಮಾತನಾಡಬೇಡಿ
ಪೋಷಕರು ಮಕ್ಕಳೊಂದಿಗೆ ಸದಾ ಮನೆಯಲ್ಲಿ ಇರಲು ಸಾಧ್ಯವಾಗದೇ ಇರಬಹುದು. ಆದರೆ ಹೀಗೆ ಒಬ್ಬಂಟಿಯಾಗಿ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವಾಗ ಅಪರಿಚಿತರು ಮನೆಗೆ ಬಂದಾಗ ಅವರೊಂದಿಗೆ ಮಾತನಾಡಬೇಡಿ ಎಂದು ಮಕ್ಕಳಿಗೆ ಹೇಳಬೇಕು. ಇದಲ್ಲದೆ, ಅಪರಿಚಿತರನ್ನು ಮನೆಯೊಳಗೆ ಪ್ರವೇಶಿಸಲು ಅನುಮತಿಸಬಾರದು ಎಂದು ತಿಳಿಸಬೇಕು.
ಆಹಾರ ಆರ್ಡರ್ ಮಾಡದಂತೆ ಸೂಚಿಸಿ
ಮನೆಯಲ್ಲಿ ಒಂಟಿಯಾಗಿರುವ ಮಕ್ಕಳು ಇಷ್ಟಪಟ್ಟ ಆಹಾರ ಆರ್ಡರ್ ಮಾಡಿ ತಿನ್ನುತ್ತಾರೆ. ಆದ್ರೆ ಮಕ್ಕಳು ಒಬ್ಬರೇ ಇದ್ದಾಗ ಆಹಾರ ಆರ್ಡರ್ ಮಾಡದಂತೆ ಸೂಚಿಸಿ. ಇದರಿಂದ ಡೆಲಿವರಿ ಬಾಯ್‌ಗಳು ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಕಳ್ಳತನ ಮಾಡುವ ಸಾಧ್ಯತೆಗಳಿವೆ. ಇದೇ ರೀತಿಯ ಘಟನೆಗಳೂ ಹಿಂದೆ ನಡೆದಿವೆ. ಅದಕ್ಕಾಗಿಯೇ ನಿಮ್ಮ ಮಕ್ಕಳು ಒಬ್ಬರೇ ಇರುವಾಗ ಹೊರಗಿನಿಂದ ಏನನ್ನೂ ಆರ್ಡರ್ ಮಾಡದಂತೆ ಸೂಚಿಸಿ.
ಅಡುಗೆ ಮನೆಗೆ ಬೀಗ ಹಾಕಿ
ಮಕ್ಕಳು ಮನೆಯಲ್ಲಿ ಒಬ್ಬರೇ ಇದ್ದಾಗ ಬೇಕಾಬಿಟ್ಟಿ ಓಡಾಡುತ್ತಿರುತ್ತಾರೆ. ಹೊಸತನ್ನೇನಾದರೂ ಟ್ರೈ ಮಾಡಲು ಯತ್ನಿಸುತ್ತಾರೆ. ಹೀಗಾಗಿ ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡುವ ಮುನ್ನ ಅಡುಗೆ ಮನೆಗೆ ಬೀಗ ಹಾಕಿ. ಇಲ್ಲದಿದ್ದರೆ ಮಕ್ಕಳು ಗ್ಯಾಸ್ ಆನ್ ಮಾಡಿ ಏನಾದರೂ ಎಡವಟ್ಟು ಮಾಡಿಕೊಳ್ಳುವ ಅಪಾಯವಿದೆ. ಹೀಗಾಗಿ ಮನೆಯಿಂದ ಹೊರಗೆ ಹೋಗುವ ಮೊದಲು, ಅವರಿಗೆ ತಿನ್ನಲು ಆಹಾರ ಮತ್ತು ನೀರನ್ನು ಕೊಟ್ಟು ಅಡುಗೆಮನೆಗೆ ಬೀಗ ಹಾಕಿ.
ಅಪಾಯಕಾರಿ ವಸ್ತು ಕೈಗೆಟುಕುವಂತೆ ಇಡಬೇಡಿ
ಚಾಕು, ಕತ್ತಿ ಮೊದಲಾದ ವಸ್ತುಗಳನ್ನು ಮಕ್ಕಳ ಕೈಗೆಟುಕುವಂತೆ ಇಡಬೇಡಿ. ವಿದ್ಯುತ್ ಸಂಪರ್ಕಗಳನ್ನು ಮುಟ್ಟದಂತೆ ಮಕ್ಕಳಿಗೆ ಸ್ಪಷ್ಟವಾಗಿ ಸೂಚಿಸಿ. ಅಗತ್ಯವಿಲ್ಲದಿದ್ದರೆ ಫ್ರಿಡ್ಜ್, ವಾಷಿಂಗ್ ಮೆಷಿನ್ ಮೊದಲಾದ ಕಡೆ ಕನೆಕ್ಷನ್ ತೆಗೆದು ಹಾಕಿ, ಅಪಾಯವನ್ನು ತಪ್ಪಿಸಿ.
ಕರೆ ಮಾಡಲು ಕೇಳಿ
ನಿಮ್ಮ ಮಕ್ಕಳಿಗೆ ಏನಾದರೂ ಅಗತ್ಯವಿದ್ದರೆ ತಕ್ಷಣ ನಿಮ್ಮನ್ನು ಕರೆಯಲು ಹೇಳಿ. ನೀವು ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ಸಂಖ್ಯೆಯನ್ನು ಅವರಿಗೆ ತಿಳಿಸಿ ಅಥವಾ ಸಂಖ್ಯೆಯನ್ನು ಬರೆದು ನಿಮ್ಮ ಮಕ್ಕಳಿಗೆ ನೀಡಿ.
ಮಕ್ಕಳನ್ನು ಬಿಝಿಯಾಗಿಡಿ
ಮಕ್ಕಳು ಮನೆಯೊಳಗೆ ಖಾಲಿ ಕೂತಿದ್ದರೆ ಹೊಸತಾಗಿ ಏನಾದರೂ ಟ್ರೈ ಮಾಡಲು ಯತ್ನಿಸಿ ಅನಾಹುತವಾಗಬಹುದು. ಹೀಗಾಗಿ ಮನೆಯಿಂದ ಹೊರ ಹೋಗುವ ಮೊದಲು ಏನಾದರೂ ಟಾಸ್ಕ್ ಕೊಟ್ಟು ಹೋಗಿ. ಹೋಂವರ್ಕ್ ಕಂಪ್ಲೀಟ್ ಮಾಡಲು ಸೂಚಿಸಿ. ಇದರಿಂದ ಮಕ್ಕಳು ನೀವು ಮನೆಗೆ ರಿಟರ್ನ್ ಬರುವ ವರೆಗೂ ಬಿಝಿಯಾಗಿರುತ್ತಾರೆ.