ಮಾರ್ಚ್‌ನಲ್ಲಿ ತಾಪ್ಸಿ ಮದ್ವೆ: ದಶಕದ ಗೆಳೆಯ, ಡ್ಯಾನಿಶ್ ಬ್ಯಾಡ್ಮಿಂಟನ್ ಆಟಗಾರನ ಕೈ ಹಿಡಿಯಲಿರುವ ನಟಿ
ಬಾಲಿವುಡ್ ನಟಿ ತಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ, ಡೆನ್ಮಾರ್ಕ್‌ನ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಅವರನ್ನು ಶೀಘ್ರದಲ್ಲೇ ಮದ್ವೆಯಾಗಲಿದ್ದಾರೆ.
ಬಾಲಿವುಡ್ ನಟಿ ತಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ, ಡೆನ್ಮಾರ್ಕ್‌ನ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋಯ್ ಅವರನ್ನು ಶೀಘ್ರದಲ್ಲೇ ಮದ್ವೆಯಾಗಲಿದ್ದಾರೆ. ಕಳೆದ 10 ವರ್ಷಗಳಿಂದಲೂ ಇವರು ಪ್ರೇಮ ಸಂಬಂಧದಲ್ಲಿದ್ದಾರೆ.
ಇತ್ತೀಚೆಗೆ ಆಂಗ್ಲ ಮಾಧ್ಯಮವೊಂದು ತನ್ನ ಸಂದರ್ಶನವೊಂದರಲ್ಲಿ 35 ವರ್ಷದ ನಟಿ ತಾಪ್ಸಿ ಅವರಿಗೆ ಮದ್ವೆ ಬಗ್ಗೆ ಕೇಳಿದ್ದು, ಈ ವೇಳೆ ಅವರು ತಾನು ಶೀಘ್ರದಲ್ಲೇ ತಮ್ಮ ಬಹುಕಾಲದ ಗೆಳೆಯ ಮಥಿಯಾಸ್ ಬೋಯ್ ಅವರನ್ನು ವಿವಾಹವಾಗುವ ವಿಚಾರ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ ಈ ವರ್ಷದ ಮಾರ್ಚ್‌ನಲ್ಲಿ ಮದ್ವೆಯಾಗ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪನ್ನು, ನಾನು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾರಿಗೂ ಸ್ಪಷ್ಟನೆ ಕೊಡುವುದಿಲ್ಲ, ಯಾವತ್ತಿಗೂ ಕೊಡುವುದು ಇಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಅಂಗ್ಲ ಮಾಧ್ಯಮಗಳ ವರದಿಯ ಪ್ರಕಾರ ಇದೇ ವರ್ಷದ ಮಾರ್ಚ್‌ನ ಅಂತ್ಯದಲ್ಲಿ ರಾಜಸ್ಥಾನದ ಉದಯ್‌ಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದ್ದು, ಇದು ಸಂಪೂರ್ಣ ಕೌಟುಂಬಿಕ ವ್ಯವಹಾರವಾಗಿರುತ್ತದೆ. ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳನ್ನು ಈ ಮದುವೆಗೆ ಆಹ್ವಾನಿಸಲಾಗುವುದಿಲ್ಲ ಎಂದು ತಿಳಿದು ಬಂದಿದೆ.
ತಪ್ಸಿ ಪನ್ನು ಸಿಖ್ ಆಗಿದ್ದು, ಡ್ಯಾನಿಷ್ ಬ್ಯಾಡ್ಮಿಂಟನ್ ಆಟಗಾರನಾಗಿರುವ ಮಥಿಯಾಸ್ ಕ್ರಿಶ್ಚಿಯನ್ ಆಗಿದ್ದು, ಹೀಗಾಗಿ ಈ ಮದ್ವೆಯೂ ಕ್ರಿಶ್ಚಿಯನ್ ಹಾಗೂ ಸಿಖ್ ಸಂಪ್ರದಾಯದಂತೆ ನಡೆಯಲಿದೆ.
ಕಳೆದೊಂದು ದಶಕದಿಂದಲೂ ಈ ಜೋಡಿ ಡೇಟಿಂಗ್‌ನಲ್ಲಿದ್ದು, ಹಲವು ಸಂದರ್ಶನಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಈ ಸಂಬಂಧದ ಬಗ್ಗೆ ಆಗಾಗ ತಪ್ಸಿ ಹೇಳಿಕೊಂಡಿದ್ದರು.
ಕಳೆದ ವರ್ಷದ ಜನವರಿಯಲ್ಲಿ ತಪ್ಸಿ ತಮ್ಮ ಕನಸಿನ ಮದುವೆಯ ಬಗ್ಗೆ ಹೇಳಿಕೊಂಡಿದ್ದರು. ಮದುವೆಯೊಂದು ಸಿಕ್ಕಾಪಟ್ಟೆ ಡಾನ್ಸ್, ಹಾಗೂ ರುಚಿರುಚಿಯಾದ ಭೋಜನವಿರಲಿದೆ ಎಂದು ಹೇಳಿಕೊಂಡಿದ್ದರು.
ಈ ಬಗ್ಗೆ ಬ್ರೈಡ್ಸ್ ಟುಡೇ ಜೊತೆ ಮಾತನಾಡಿದ್ದ ತಪ್ಸಿ ತಮ್ಮ ಒಂದು ದಿನದ ಮದ್ವೆಯಲ್ಲಿ ಯಾವುದೇ ಡ್ರಾಮಾಗಳಿರಬಹುದು ಏಕೆಂದರೆ ನನ್ನ ವೃತ್ತಿ ಬದುಕಿನಲ್ಲಿ ಬೇಕಾದಷ್ಟು ಡ್ರಾಮಾಗಳಿವೆ. ಈ ನಾಟಕಗಳು ನನ್ನ ವೈಯಕ್ತಿಕ ಬದುಕಿನಲ್ಲಿ ನಡೆಯುವುದು ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಯಾವುದೇ ತಡರಾತ್ರಿ ಪಾರ್ಟಿಗಳು ನಮ್ಮ ವಿವಾಹದಲ್ಲಿ ಇರಬಾರದು ಎಂದು ಅವರು ಹೇಳಿದ್ದಾರೆ.
Taapsee Pannu Mathias Boe
ಇನ್ನು ತಾಪ್ಸಿ ಬಾಯ್‌ಫ್ರೆಂಡ್ ಬಗ್ಗೆ ಹೇಳುವುದಾದರೆ ಅವರೊಬ್ಬ ಒಲಿಂಪಿಕ್ ಸಿಲ್ವರ್ ಪದಕ ವಿಜೇತ ಪ್ರಸ್ತುತ ಬ್ಯಾಡ್ಮಿಂಟನ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ತಾಪ್ಸಿ ಸಿನಿಮಾಗಳ ಬಗ್ಗೆ ಹೇಳುವುದಾದರೆ ತಾಪ್ಸಿ ತಮಿಳಿನ ಅಡುಕಲಂ ಮೂಲಕ ಸಿನಿಮಾ ರಂಗಕ್ಕೆ ಬಂದಿದ್ದು, ನಂತರ ಚಶ್ಮೆ ಬದ್ದೂರ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು, ಇದಾದ ನಂತರ ಅವರು ಬೇಬಿ, ಪಿಂಕ್, ಗಾಜಿ ಅಟ್ಯಾಕ್, ಮುಲ್ಕ್, ಡುಂಕಿ, ಬದ್ಲಾ, ಮನಮರ್ಜಿಯಾನ್, ಮಿಷನ್ ಮಂಗಲ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.