- Home
- Entertainment
- News
- RAMAYANA: ಬಿಗ್ ಬಜೆಟ್ 'ರಾಮಾಯಣ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಶುರು, ಜಗತ್ತಿನಾದ್ಯಂತ ಹೇಗಿದೆ ರೆಸ್ಪಾನ್ಸ್?
RAMAYANA: ಬಿಗ್ ಬಜೆಟ್ 'ರಾಮಾಯಣ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಶುರು, ಜಗತ್ತಿನಾದ್ಯಂತ ಹೇಗಿದೆ ರೆಸ್ಪಾನ್ಸ್?
ನಿತೇಶ್ ತಿವಾರಿ ನಿರ್ದೇಶನ, ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಚಿತ್ರವು 05 ನವೆಂಬರ್ 2026ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಮುಂಗಡ ಬುಕಿಂಗ್ ಇಂದಿನಿಂದ ಶುರುವಾಗಿದ್ದು, ಜಗತ್ತಿನಾದ್ಯಂತ ರೆಸ್ಪಾನ್ಸ್ ಹೇಗಿದೆ ನೋಡಿ..!

₹4000 ಕೋಟಿ ‘ರಾಮಾಯಣ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಶುರು!
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ರಾಮಾಯಣ’ ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ಕುತೂಹಲವೂ ಹೆಚ್ಚುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಭವ್ಯ ಚಿತ್ರದಲ್ಲಿ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿರುವುದು ಸಿನಿಪ್ರಿಯರ ಗಮನ ಸೆಳೆದಿದೆ.
ನವೆಂಬರ್ 5, 2026ರಂದು ವಿಶ್ವಾದ್ಯಂತ ತೆರೆಕಾಣಲಿರುವ ‘ರಾಮಾಯಣ’ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಐಮ್ಯಾಕ್ಸ್ ಸೇರಿದಂತೆ ವಿವಿಧ ಪ್ರೀಮಿಯಂ ಸ್ವರೂಪಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಭಾರತೀಯ ಮಹಾಕಾವ್ಯದ ಕಥೆಯನ್ನು ಜಾಗತಿಕ ಪ್ರೇಕ್ಷಕರಿಗೆ ಅದ್ಧೂರಿಯಾಗಿ ಪರಿಚಯಿಸಲು ಚಿತ್ರತಂಡ ಸಿದ್ಧವಾಗಿದೆ.
ಎ.ಆರ್. ರೆಹಮಾನ್ ಜೊತೆ ಹ್ಯಾನ್ಸ್ ಜಿಮ್ಮರ್ ಸಂಗೀತದ ಮೋಡಿ!
ಈ ಸಿನಿಮಾದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸಂಗೀತ. ಆಸ್ಕರ್ ಪ್ರಶಸ್ತಿ ವಿಜೇತ ಭಾರತೀಯ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ನ ಖ್ಯಾತ ಸಂಗೀತ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ‘ರಾಮಾಯಣ’ಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಇಬ್ಬರು ದಿಗ್ಗಜರ ಸಂಗಮ ಚಿತ್ರಕ್ಕೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.
ಪ್ರೈಮ್ ಫೋಕಸ್ ಸ್ಟುಡಿಯೋಸ್ನ ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ನವೆಂಬರ್ 5ರಂದು ತೆರೆಕಂಡರೆ, ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
ಎ.ಆರ್. ರೆಹಮಾನ್ ಹಾಡುಗಳಿಗೆ ಹೆಜ್ಜೆ ಹಾಕಿದ್ದ ಯಶ್!
‘ರಾಮಾಯಣ’ದ ಸಂಗೀತದ ಕುರಿತು ಮಾತನಾಡಿದ ಯಶ್, ಎ.ಆರ್. ರೆಹಮಾನ್ ಅವರ ಹಾಡುಗಳೊಂದಿಗಿನ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ರೆಹಮಾನ್ ಅವರ ಅನೇಕ ಹಾಡುಗಳಿಗೆ ತಾವು ನೃತ್ಯ ಮಾಡುತ್ತಿದ್ದುದನ್ನು ಸ್ಮರಿಸಿದ್ದಾರೆ.
ವಿಶೇಷವಾಗಿ ‘ಚಿಕ್ಕುಬುಕ್ಕು ಚಿಕ್ಕುಬುಕ್ಕು ರೈಲು’ ಹಾಡು ತಮ್ಮ ನೆನಪಿನಲ್ಲಿ ಉಳಿದಿದೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೂ ರೆಹಮಾನ್ ಅವರ ಕೊಡುಗೆ ಅಪಾರವಾಗಿದ್ದು, ಅವರೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಭರ್ಜರಿ ತಾರಾಗಣ, ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ ಮತ್ತು ದಿಗ್ಗಜರ ಸಂಗೀತದೊಂದಿಗೆ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

