- Home
- Life
- ಹೆಚ್ಚಿನವರು ಮಾಡುವ ತಪ್ಪುಗಳಿವು! ಮಾವು ಮೆತ್ತಗಾಗಿ ಕೊಳೆಯುತ್ತಿದ್ದರೆ ಹೀಗೆ ಮಾಡಿ.. 10-15 ದಿನ ಫ್ರೆಶ್ ಆಗಿರುತ್ತೆ
ಹೆಚ್ಚಿನವರು ಮಾಡುವ ತಪ್ಪುಗಳಿವು! ಮಾವು ಮೆತ್ತಗಾಗಿ ಕೊಳೆಯುತ್ತಿದ್ದರೆ ಹೀಗೆ ಮಾಡಿ.. 10-15 ದಿನ ಫ್ರೆಶ್ ಆಗಿರುತ್ತೆ
How to keep mangoes fresh longer: ಬೇಸಿಗೆಯಲ್ಲಿ ಹೆಚ್ಚು ದುಡ್ಡು ಕೊಟ್ಟು ತಂದ ಮಾವಿನ ಹಣ್ಣುಗಳು ಎರಡೇ ದಿನಕ್ಕೆ ಕೊಳೆತು ಹೋಗುತ್ತಿವೆಯೇ? ಮಾವು 15 ದಿನಗಳವರೆಗೆ ಕೆಡದಂತೆ, ಫ್ರೆಶ್ ಆಗಿ ಇಡಲು ಅನುಸರಿಸಬೇಕಾದ ಸೂಪರ್ ಕಿಚನ್ ಹ್ಯಾಕ್ಸ್ ಮತ್ತು ತಜ್ಞರ ಸರಳ ಸಲಹೆಗಳು ಇಲ್ಲಿವೆ.

ತಾಜಾವಾಗಿರಲು ಏನು ಮಾಡಬೇಕು?
ಬೇಸಿಗೆ ಬಂತೆಂದರೆ ಸಾಕು, ಮನೆತುಂಬಾ ಮಾವಿನ ಹಣ್ಣಿನದ್ದೇ ಸುವಾಸನೆ. ಆದರೆ ತುಂಬಾ ಇಷ್ಟಪಟ್ಟು, ಹೆಚ್ಚು ದುಡ್ಡು ಕೊಟ್ಟು ತಂದ ಮಾವಿನ ಹಣ್ಣುಗಳು ಕೇವಲ ಎರಡೇ ದಿನಕ್ಕೆ ಮೆತ್ತಗಾಗಿ ಕೊಳೆತು ಹೋದರೆ ಬೇಸರವಾಗುವುದು ಸಹಜ. ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳಿಂದಲೇ ಮಾವಿನ ಹಣ್ಣುಗಳು ತಮ್ಮ ರುಚಿ ಮತ್ತು ಗುಣಮಟ್ಟವನ್ನು ಕಳೆದುಕೊಳ್ಳುತ್ತವೆ. ಹಾಗಾದರೆ, ಮಾವಿನ ಹಣ್ಣುಗಳು 10-15 ದಿನಗಳವರೆಗೆ ಹಾಳಾಗದೆ, ತಾಜಾವಾಗಿರಲು ಏನು ಮಾಡಬೇಕು? ತಿಳಿಯೋಣ ಬನ್ನಿ..

ಕೊಳ್ಳುವಾಗಲೇ ಇರಲಿ ಎಚ್ಚರ
ಹೆಚ್ಚಿನವರು ಪೂರ್ತಿಯಾಗಿ ಹಣ್ಣಾಗಿರುವ, ಮೆತ್ತಗಿರುವ ಹಣ್ಣುಗಳನ್ನೇ ಆರಿಸಿಕೊಳ್ಳುತ್ತಾರೆ. ಆದರೆ ತಜ್ಞರ ಪ್ರಕಾರ, ಅರ್ಧ ಹಣ್ಣಾಗಿರುವ ಅಥವಾ ಸ್ವಲ್ಪ ಗಟ್ಟಿ ಇರುವ ಹಣ್ಣುಗಳನ್ನು ಖರೀದಿಸುವುದು ಉತ್ತಮ. ಇವು ಮನೆಯಲ್ಲಿ ನಿಧಾನವಾಗಿ ಹಣ್ಣಾಗುವುದರಿಂದ ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತವೆ. ಹಣ್ಣಿನ ಮೇಲೆ ಯಾವುದೇ ಕಪ್ಪು ಕಲೆಗಳು ಇಲ್ಲದಂತೆ ನೋಡಿಕೊಳ್ಳುವುದು ಮುಖ್ಯ.
ಎಥಿಲಿನ್ ಗ್ಯಾಸ್ (Ethylene Gas) ಬಗ್ಗೆ ಗಮನವಿರಲಿ
ಮಾವಿನ ಹಣ್ಣುಗಳು ನೈಸರ್ಗಿಕವಾಗಿ 'ಎಥಿಲಿನ್' ಎಂಬ ಅನಿಲವನ್ನು ಬಿಡುಗಡೆ ಮಾಡುತ್ತವೆ. ಇದು ಹಣ್ಣುಗಳು ಬೇಗ ಹಣ್ಣಾಗಲು ಸಹಾಯ ಮಾಡುತ್ತದೆ. ಹಾಗಾಗಿ ಪೂರ್ತಿ ಹಣ್ಣಾಗಿರುವ ಮಾವಿನ ಹಣ್ಣುಗಳನ್ನು ಮತ್ತು ಹಸಿ ಕಾಯಿಗಳನ್ನು ಒಟ್ಟಿಗೆ ಇಡಬೇಡಿ. ಹಣ್ಣಾಗಿರುವ ಮಾವು ಬಿಡುಗಡೆ ಮಾಡುವ ಎಥಿಲಿನ್, ಪಕ್ಕದಲ್ಲಿರುವ ಕಾಯಿಗಳನ್ನು ಅವಧಿಗಿಂತ ಮುಂಚಿತವಾಗಿಯೇ ಹಣ್ಣಾಗಿಸಿ, ಅವು ಕೊಳೆಯುವಂತೆ ಮಾಡುತ್ತದೆ. ಮಾವಿನ ಹಣ್ಣುಗಳನ್ನು ಆಪಲ್ ಅಥವಾ ಬಾಳೆಹಣ್ಣುಗಳಿಂದಲೂ ದೂರ ಇಡಬೇಕು, ಏಕೆಂದರೆ ಅವುಗಳೂ ಸಹ ಎಥಿಲಿನ್ ಗ್ಯಾಸ್ ಬಿಡುಗಡೆ ಮಾಡುತ್ತವೆ.
ಗಾಳಿ ಆಡುವ ಜಾಗದಲ್ಲಿ ಇಡಿ
ಮಾವಿನ ಹಣ್ಣುಗಳಿಗೆ ಚೆನ್ನಾಗಿ ಗಾಳಿ ಸಿಗುವುದು ತುಂಬಾ ಮುಖ್ಯ. ಮಾರ್ಕೆಟ್‌ನಿಂದ ತಂದ ತಕ್ಷಣ ಪ್ಲಾಸ್ಟಿಕ್ ಕವರ್‌ಗಳಿಂದ ಹಣ್ಣುಗಳನ್ನು ಹೊರಗೆ ತೆಗೆಯಿರಿ. ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟರೆ ಒಳಗೆ ಶಾಖ ಹೆಚ್ಚಾಗಿ ಹಣ್ಣುಗಳು ಬೆವತುಕೊಳ್ಳುತ್ತವೆ. ಇದರಿಂದ ಬ್ಯಾಕ್ಟೀರಿಯಾಗಳು ಸೇರಿ ಹಣ್ಣು ಬೇಗನೆ ಮೆತ್ತಗಾಗುತ್ತದೆ. ಹಣ್ಣುಗಳನ್ನು ಬಿದಿರಿನ ಬುಟ್ಟಿಗಳಲ್ಲಿ ಅಥವಾ ಗಾಳಿ ಆಡುವ ಮರದ ಪೆಟ್ಟಿಗೆಗಳಲ್ಲಿ ಇಡುವುದು ಉತ್ತಮ. ನೆಲದ ಮೇಲೆ ಪೇಪರ್ ಹಾಸಿ, ಅದರ ಮೇಲೆ ಹಣ್ಣುಗಳನ್ನು ಬಿಡಿಬಿಡಿಯಾಗಿ ಜೋಡಿಸಿಡುವುದು ಕೂಡ ಒಳ್ಳೆಯ ವಿಧಾನ.
ತೇವಾಂಶದಿಂದ ದೂರವಿಡಿ
ಹಣ್ಣುಗಳನ್ನು ಸ್ಟೋರ್ ಮಾಡಿ ಇಡುವ ಮುನ್ನ ಎಂದಿಗೂ ತೊಳೆಯಬೇಡಿ. ತೇವಾಂಶ ಇದ್ದರೆ ಫಂಗಸ್ ಅಥವಾ ಬೂಸ್ಟ್ ಹಿಡಿಯುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನೀವು ಹಣ್ಣುಗಳನ್ನು ಬೇಗ ಹಣ್ಣು ಮಾಡಬೇಕೆಂದರೆ ಅವುಗಳನ್ನು ಬ್ರೌನ್ ಪೇಪರ್ ಬ್ಯಾಗ್‌ನಲ್ಲಿ ಇಡಿ. ಅದೇ ಹೆಚ್ಚು ದಿನ ಇಡಬೇಕೆಂದರೆ, ಒಂದೊಂದು ಹಣ್ಣನ್ನು ಪ್ರತ್ಯೇಕವಾಗಿ ನ್ಯೂಸ್ ಪೇಪರ್ ಅಥವಾ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಇಡಿ. ಇದು ಹಣ್ಣಿನಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ.
ಫ್ರಿಡ್ಜ್‌ನಲ್ಲಿ ಯಾವಾಗ ಇಡಬೇಕು?
ಬಹಳಷ್ಟು ಜನ ಮಾಡುವ ಸಾಮಾನ್ಯ ತಪ್ಪೆಂದರೆ, ಹಸಿ ಮಾವಿನಕಾಯಿ ಅಥವಾ ಪೂರ್ತಿ ಹಣ್ಣಾಗದ ಮಾವನ್ನು ಫ್ರಿಡ್ಜ್‌ನಲ್ಲಿಡುವುದು. ಹಣ್ಣುಗಳು ಸಂಪೂರ್ಣವಾಗಿ ಹಣ್ಣಾಗುವವರೆಗೆ ಅವುಗಳನ್ನು ಕೋಣೆಯ ಉಷ್ಣಾಂಶದಲ್ಲೇ (Room Temperature) ಇಡಬೇಕು. ಪೂರ್ತಿ ಹಣ್ಣಾದ ನಂತರವಷ್ಟೇ ಫ್ರಿಡ್ಜ್‌ನಲ್ಲಿಡಬೇಕು. ಫ್ರಿಡ್ಜ್‌ನಲ್ಲಿ ಇಡುವಾಗಲೂ ಒಂದರ ಮೇಲೊಂದು ಹಾಕದೆ, ಬಿಡಿಬಿಡಿಯಾಗಿ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ವೆಜಿಟೇಬಲ್ ಬಾಕ್ಸ್‌ನಲ್ಲಿ ಇಟ್ಟರೆ 5-7 ದಿನಗಳವರೆಗೆ ಫ್ರೆಶ್ ಆಗಿರುತ್ತವೆ. ಹಾಗೆಯೇ, ಜೋಡಿಸಿಟ್ಟ ಮಾವಿನ ಹಣ್ಣುಗಳನ್ನು ದಿನಕ್ಕೊಮ್ಮೆ ಮೆಲ್ಲನೆ ತಿರುಗಿಸಿ ಇಡುತ್ತಿರಿ. ಒಂದೇ ಕಡೆ ಹೆಚ್ಚು ದಿನ ಇಟ್ಟರೆ ಆ ಭಾಗದ ಮೇಲೆ ಒತ್ತಡ ಬಿದ್ದು ಹಣ್ಣು ಮೆತ್ತಗಾಗಿ ಹಾಳಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
