ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?
ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಯಶವಂತಪುರ-ಗದಗ ಬೈಪಾಸ್-ವಿಜಯಪುರ
ಗುಮ್ಮಟ ನಗರಿ ವಿಜಯಪುರ ಜನತೆಯ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದೆ. ಇದೀಗ ಈ ರೈಲಿಗೆ ಗದಗ ಜನತೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಿಂದಲೂ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಗದಗ ಜನತೆ ಬೇಸರ ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ. ಈ ಬೇಸರಕ್ಕೆ ಗದಗ ಜನತೆ ತಮ್ಮದೇ ಆದ ಕೆಲವು ಕಾರಣಗಳನ್ನು ನೀಡುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್
ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ ನೈಋತ್ಯ ರೈಲ್ವೆಯ ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತೀರಿಸಿ ಎಂದು ಆಗ್ರಹಿಸಿದ್ದಾರೆ. ಈ ಟ್ವೀಟ್‌ನನ್ನು ಸಂಸದರಾ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಹೆಚ್.ಕೆ.ಪಾಟೀಲ್ ಅವರಿಗೆ ಟ್ಯಾಗ್ ಮಾಡಲಾಗಿದೆ.
ಗದಗ ಜನತೆಗೆ ವಿಜಯಪುರ ಟ್ರೈನ್ ಯಾಕೆ ಬೇಕು?
ವೈರಲ್ ಆಗಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಶೋಕ್ ಹಳ್ಳೂರು ಎಂಬವರು, ಸಾಹುಕಾರ್, ಈ ಟ್ರೈನ್ ಗೆ ಬರಬೇಕು ಅಂತ ನಿಮಗ್ಯಾಕೆ ಹಠ? ಬೇರೆ ಟ್ರೈನ್ ಹತ್ತಿ ಬರ್ರೀ, ಹತ್ತು ಹನ್ನೆರಡು ಟ್ರೈನ್ ಇದ್ರೂ ವಿಜಾಪುರ ಗಾಡಿನೇ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಗದಗ ಕಣಗಿನಹಾಳು ನಡುವೆ ಒಂದು ಬೈಪಾಸ್ ರೈಲು ಹಳಿ ಹೊಂಬಾಳ ರೈಲು ನಿಲ್ದಾಣಕ್ಕೆ ಹೊಸದಾಗಿ ನಿರ್ಮಾಣ ಮಾಡಿದ್ರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಆದರೆ ಇವರುಗಳು ಅದನ್ನು ಕೇಳುವುದನ್ನು ಬಿಟ್ಟು ಪ್ರತಿ ಸಾರಿ ಏಕೆ ಗದಗ್ ಬೈಪಾಸ್ ಮೂಲಕ ಟ್ರೈನ್ ಗಳು ಹೋಗುತ್ತದೆ ಎಂದು ಬಡಿದಾಡುತ್ತಾರೆ ಎಂದು ಮತ್ತೋರ್ವ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.
5 ಗಂಟೆ ಸಮಯ ಉಳಿತಾಯ
ಬೆಂಗಳೂರು ಅಥವಾ ಯಶವಂತಪುರ ನಿಲ್ದಾಣದಿಂದ ವಿಜಯಪುರಕ್ಕೆ ಹೊರಡುವ ರೈಲುಗಳು ಗದಗ ಬೈಪಾಸ್ ಮೂಲಕ ಚಲಿಸಿದ್ರೆ ಐದು ಗಂಟೆ ಸಮಯ ಉಳಿತಾಯವಾಗುತ್ತದೆ. ಈ ಮಾರ್ಗದಿಂದ ಚಲಿಸಿದ್ರೆ ಹುಬ್ಬಳ್ಳಿ ಮತ್ತು ಗದಗ ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಿಸುವ ಸಮಯ ಉಳಿತಾಯವಾಗುತ್ತದೆ. ಅನತ್ಯವಾಗಿ ಹುಬ್ಬಳ್ಳಿಗೆ ಹೋಗುವುದು ಸಹ ತಪ್ಪಲಿದೆ.
ಬೈಪಾಸ್ ಚಲಿಸುವ ರೈಲಿನ ಮಾರ್ಗ ಈ ರೀತಿಯಾಗಿದೆ.
ಯಶವಂತಪುರ ಜಂಕ್ಷನ್, ತುಮಕೂರು, ಅರಸಿಕೆರೆ ಜಂಕ್ಷನ್, ದಾವಣಗೆರೆ, ಎಸ್‌ಎಂಎಂ ಹಾವೇರಿ, ಗದಗ ಬೈಪಾಸ್, ಬದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್ ಮೂಲಕ ವಿಜಯಪುರ ತಲುಪಲಿದೆ.
ನೂತನ ಬೈಪಾಸ್ ರೈಲಿಗೆ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದು, ಇದನ್ನು ಮುಂದಿನ ದಿನಗಳಲ್ಲಿ ಕಾಯಂಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಗುಳೇದಗುಡ್ಡ ರೋಡ್ ನಿಲ್ದಾಣದಲ್ಲಿಯೂ ನಿಲುಗಡೆ ಕಲ್ಪಿಸಬೇಕು ಎಂಬ ಒತ್ತಾಯವೂ ಸಹ ಕೇಳಿ ಬಂದಿದೆ.
ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ @SWRRLY ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತಿರಿಸಿ @HKPatilINC@BSBommaipic.twitter.com/vDesnjuKcg
— ಗದಗ ರೈಲು ಬಳಕೆದಾರರು Gadag Railway Users (@GadagRailUsers) May 16, 2026

