Mint Growing Tips: ಪುದೀನ ಗೊಂಚಲು ಗೊಂಚಲಾಗಿ ಬೆಳೆಯಬೇಕಾ? ಕಾಂಡಗಳನ್ನ ಹೀಗೆ ನೆಟ್ಟು ನೋಡಿ!
Mint Growing Tips: ಅಂಗಡಿಯಿಂದ ತಂದ ಪುದೀನ ಸೊಪ್ಪಿನ ಕಾಂಡಗಳನ್ನು ಬಿಸಾಡಬೇಡಿ. ಅದನ್ನೇ ಬಳಸಿ ಮನೆಯಲ್ಲಿ ಪುದೀನ ಬೆಳೆಸಬಹುದು. ಕಾಂಡದಲ್ಲಿ ಬೇರು ಬರಿಸುವುದರಿಂದ ಹಿಡಿದು, ಪುದೀನ ದಟ್ಟವಾಗಿ ಬೆಳೆಯುವಂತೆ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್ಸ್.

ಗೊಂಚಲು ಗೊಂಚಲಾಗಿ ಪುದೀನ ಬೆಳೆಯಬೇಕಾ?
ಚಟ್ನಿ, ಬಿರಿಯಾನಿ, ಪುದೀನ ರೈಸ್, ಜ್ಯೂಸ್ ಹೀಗೆ ಅಡುಗೆಯ ರುಚಿ ಮತ್ತು ಘಮ ಹೆಚ್ಚಿಸಲು ಪುದೀನ ಬೇಕೇ ಬೇಕು. ಆದರೆ ಪ್ರತಿ ಬಾರಿಯೂ ಅಂಗಡಿಗೆ ಹೋಗಿ ಪುದೀನ ತರುವುದು ಕಷ್ಟ ಅನಿಸುತ್ತಾ? ಇನ್ಮುಂದೆ ಪುದೀನ ಎಲೆಗಳನ್ನು ಬಳಸಿದ ಮೇಲೆ ಉಳಿಯುವ ಕಾಂಡಗಳನ್ನು ಕಸಕ್ಕೆ ಎಸೆಯಬೇಡಿ.
ಸ್ವಲ್ಪ ಕಾಳಜಿ ವಹಿಸಿ ಈ ಕಾಂಡಗಳನ್ನು ನೆಟ್ಟರೆ ಸಾಕು, ಹೊಸ ಬೇರುಗಳು ಹುಟ್ಟಿ ಮನೆಯಲ್ಲೇ ಹಸಿರಾದ ಪುದೀನ ಬೆಳೆಸಬಹುದು. ಬಾಲ್ಕನಿ, ಟೆರೇಸ್ ಮಾತ್ರವಲ್ಲ, ಸ್ವಲ್ಪ ಬಿಸಿಲು ಬೀಳುವ ಜಾಗವಿದ್ದರೂ ಸಾಕು, ನೀವೂ ಟ್ರೈ ಮಾಡಬಹುದು.
ಅಂಗಡಿಯಿಂದ ತಂದ ಪುದೀನಾನೇ ಸಾಕು
ಅಂಗಡಿಯಿಂದ ತಂದ ಪುದೀನ ಬಳಸಿದ ಮೇಲೆ ಕಾಂಡಗಳನ್ನು ಕಸಕ್ಕೆ ಎಸೆಯುವ ತಪ್ಪು ಇನ್ಮುಂದೆ ಮಾಡಬೇಡಿ. ಅದೇ ಕಾಂಡಗಳನ್ನು ಬಳಸಿ ಮನೆಯಲ್ಲಿ ಗೊಂಚಲು ಗೊಂಚಲಾಗಿ ಪುದೀನ ಬೆಳೆಸಬಹುದು.
ಪುದೀನವನ್ನು ಬೀಜದಿಂದಲೇ ಬೆಳೆಸಬೇಕು ಅನ್ನೋ ನಿಯಮವೇನಿಲ್ಲ. ಅಂಗಡಿಯಿಂದ ತಂದ ಪುದೀನ ಎಲೆಗಳನ್ನು ಅಡುಗೆಗೆ ಬಳಸಿದ ಮೇಲೆ, ದಪ್ಪಗಿರುವ ಮತ್ತು ಹಸಿರಾಗಿರುವ ಆರೋಗ್ಯಕರ ಕಾಂಡಗಳನ್ನು ಮಾತ್ರ ಪ್ರತ್ಯೇಕವಾಗಿ ಎತ್ತಿಟ್ಟುಕೊಳ್ಳಿ. ಸರಿಯಾದ ಕ್ರಮದಲ್ಲಿ ಅವುಗಳನ್ನು ನೆಟ್ಟು ಪೋಷಿಸಿದರೆ, ಕೆಲವೇ ದಿನಗಳಲ್ಲಿ ಬೇರು ಬಿಟ್ಟು ಹೊಸ ಚಿಗುರುಗಳು ಬರಲು ಶುರುವಾಗುತ್ತವೆ.
ಒಂದೇ ಒಂದು ಕಾಂಡ ಸಾಕು..
ಪುದೀನ ಕಾಂಡವನ್ನು ನೇರವಾಗಿ ನೆಡುತ್ತಿದ್ದೀರಾ? ಒಮ್ಮೆ ಹೀಗೆ ಮಲಗಿಸಿ ನೆಟ್ಟು ನೋಡಿ. ಕುಂಡ ಪೂರ್ತಿ ಪುದೀನ ಹರಡಲು ಈ ಸಣ್ಣ ಟ್ರಿಕ್ ಸಹಾಯ ಮಾಡುತ್ತೆ.
ಪುದೀನ ಗಿಡವನ್ನು ನೇರವಾಗಿ ನೆಟ್ಟು ಒಂದೇ ಕಡೆ ಬೇರು ಬಿಡುವಂತೆ ಮಾಡುವ ಬದಲು, ಕಾಂಡವನ್ನು ಮಣ್ಣಿನ ಮೇಲೆ ಮಲಗಿಸಿ ಬೆಳೆಸಿ ನೋಡಿ. ಇದೇ ಇದರ ಹಿಂದಿರುವ ಸೀಕ್ರೆಟ್. ಒಂದೇ ಕಾಂಡದಲ್ಲಿರುವ ಹಲವು ಗಂಟುಗಳು ಮಣ್ಣಿಗೆ ತಾಗಿ, ಅಲ್ಲಿಂದ ಬೇರುಗಳು ಮತ್ತು ಹೊಸ ಚಿಗುರುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಕುಂಡ ಪೂರ್ತಿ ಪುದೀನ ದಟ್ಟವಾಗಿ ಬೆಳೆಯುತ್ತದೆ.
ಈ ವಿಧಾನದಿಂದ ಬೇಗ ದಟ್ಟವಾಗಿ ಬೆಳೆಯುತ್ತೆ
ಪುದೀನ ಸ್ವಾಭಾವಿಕವಾಗಿಯೇ ಕಾಂಡಗಳು ಮತ್ತು ಬೇರುಗಳ ಮೂಲಕ ವೇಗವಾಗಿ ಹರಡುವ ಗುಣ ಹೊಂದಿದೆ. ಮಣ್ಣಿಗೆ ತಾಗುವ ಕಾಂಡದ ಗಂಟುಗಳಲ್ಲಿ ಹೊಸ ಬೇರುಗಳು (adventitious roots) ಹುಟ್ಟಿಕೊಳ್ಳುತ್ತವೆ.
ಇದರಿಂದ ಕಾಂಡದ ಒಂದು ಭಾಗದಲ್ಲಿ ಮಾತ್ರ ಬೇರು ಬರುವ ಬದಲು, ಮಣ್ಣಿಗೆ ತಾಗುವ ಹಲವು ಗಂಟುಗಳಲ್ಲಿ ಬೇರುಗಳು ಬರುವ ಅವಕಾಶ ಸಿಗುತ್ತದೆ. ಆ ಜಾಗಗಳಿಂದ ಹೊಸ ಚಿಗುರುಗಳು ಮತ್ತು ಕೊಂಬೆಗಳು ಬೆಳೆದಾಗ, ಪುದೀನ ಗಿಡ ಅಗಲವಾಗಿ ಹರಡಿ ದಟ್ಟವಾಗಿ ಕಾಣುತ್ತದೆ.
ಪುದೀನ ಗೊಂಚಲಾಗಿ ಬೆಳೆಯಲು ಈ ವಿಚಾರ ಗಮನಿಸಿ
ಪುದೀನ ನೆಟ್ಟರೆ ಮಾತ್ರ ಸಾಲದು. ಅದು ಗೊಂಚಲಾಗಿ ಬೆಳೆಯಲು ಈ ಸಣ್ಣ ನಿರ್ವಹಣಾ ಟ್ರಿಕ್ಸ್ ಮರೆಯಬೇಡಿ. ಪುದೀನ ಗಿಡ ಹುಲುಸಾಗಿ ಬೆಳೆಯಲು, ಮಣ್ಣಿನಲ್ಲಿ ಯಾವಾಗಲೂ ಸ್ವಲ್ಪ ತೇವಾಂಶ ಇರುವಂತೆ ನೋಡಿಕೊಳ್ಳಿ. ಹಾಗಂತ ಅತಿಯಾಗಿ ನೀರು ಹಾಕಿ ಕುಂಡದಲ್ಲಿ ನೀರು ನಿಲ್ಲುವಂತೆ ಮಾಡಬಾರದು. ನೀರು ನಿಂತರೆ ಬೇರು ಕೊಳೆಯುವ ಸಾಧ್ಯತೆ ಇರುತ್ತದೆ.
ಮೇಲಕ್ಕೆ ಬೆಳೆಯಲು ಬಿಡಬೇಡಿ
ಪುದೀನ ಗಿಡವನ್ನು ಒಳ್ಳೆಯ ಬಿಸಿಲು ಬೀಳುವ ಜಾಗದಲ್ಲಿ ಇಟ್ಟು ಪೋಷಿಸಿ. ಹೊಸ ಹಸಿರು ಚಿಗುರುಗಳು ಬೆಳೆಯಲು ಶುರುವಾದಾಗ ಇನ್ನೊಂದು ಸೂಪರ್ ಟ್ರಿಕ್ ಇದೆ. ಚಿಗುರುಗಳ ತುದಿಯನ್ನು ಆಗಾಗ ಮೆಲ್ಲಗೆ ಚಿವುಟಿ ತೆಗೆಯಿರಿ. ಇದರಿಂದ ಪಕ್ಕದಲ್ಲಿ ಹೊಸ ಕೊಂಬೆಗಳು ಹುಟ್ಟಿಕೊಳ್ಳುತ್ತವೆ. ಗಿಡ ಉದ್ದವಾಗಿ ಬೆಳೆಯುವ ಬದಲು ಪೊದೆಯಂತೆ ದಟ್ಟವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.
ಕಟಾವು ಮಾಡುವಾಗಲೂ ಒಂದು ಸಣ್ಣ ಟ್ರಿಕ್
ಪುದೀನ ಬೆಳೆದ ಮೇಲೆ ಎಲೆಗಳನ್ನು ಮಾತ್ರ ಕೀಳುತ್ತಿದ್ದೀರಾ? ಅದರ ಬದಲು ಈ ಸಣ್ಣ ಟ್ರಿಕ್ ಟ್ರೈ ಮಾಡಿ ನೋಡಿ, ಮತ್ತೆ ಕೊಂಬೆಗಳು ಬರಲು ಸಹಾಯ ಆಗುತ್ತೆ.
ಅಡುಗೆಗೆ ಪುದೀನ ಬೇಕಾದಾಗ ಒಂದೊಂದೇ ಎಲೆ ಕೀಳುವ ಬದಲು, ಎಲೆಗಳು ಹುಟ್ಟುವ ಗಂಟಿನ (node) ಸ್ವಲ್ಪ ಮೇಲ್ಭಾಗದಲ್ಲಿ ಕಾಂಡದ ಸಮೇತ ಕತ್ತರಿಸಿ ತೆಗೆದುಕೊಳ್ಳಿ. ಹೀಗೆ ಕತ್ತರಿಸುವುದರಿಂದ ಆ ಜಾಗದಿಂದ ಪಕ್ಕದ ಕೊಂಬೆಗಳು ಹುಟ್ಟಿ, ಗಿಡ ಮತ್ತೆ ದಟ್ಟವಾಗಿ ಬೆಳೆಯುತ್ತದೆ.
ಆದರೆ ಒಂದೇ ಸಲಕ್ಕೆ ಇಡೀ ಗಿಡವನ್ನು ಕತ್ತರಿಸಿ ತೆಗೆಯಬೇಡಿ. ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ಸ್ವಲ್ಪವೇ ಕಟಾವು ಮಾಡುವುದು ಸೂಪರ್ ಟ್ರಿಕ್. ಇದರಿಂದ ಗಿಡದಲ್ಲಿ ಸಾಕಷ್ಟು ಎಲೆಗಳು ಉಳಿದುಕೊಳ್ಳುತ್ತವೆ. ಮತ್ತೆ ಹೊಸ ಚಿಗುರುಗಳು ಮತ್ತು ಕೊಂಬೆಗಳು ಬೆಳೆಯಲು ಸಮಯ ಸಿಗುತ್ತದೆ.
ಹೀಗೆ ಸ್ವಲ್ಪ ಕಾಳಜಿಯಿಂದ ಪೋಷಿಸಿದರೆ ಸಾಕು, ಅಡುಗೆಗೆ ಪುದೀನ ಬೇಕಾದಾಗಲೆಲ್ಲಾ ಅಂಗಡಿಗೆ ಓಡುವ ಬದಲು ಮನೆಯ ಕುಂಡದಿಂದಲೇ ಫ್ರೆಶ್ ಆಗಿ ಕಿತ್ತು ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
