ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಬೇಗ ಹಾಳಾಗಲು ಕಾರಣ ಏನು? ಸ್ಟೋರ್ ಮಾಡುವ 5 ವಿಧಾನ
ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಬೇಗ ಹಾಳಾಗಲು ಕಾರಣಗಳು ಮತ್ತು ಅದನ್ನು ತಡೆಯುವ ವಿಧಾನಗಳನ್ನು ಈ ಲೇಖನ ವಿವರಿಸುತ್ತದೆ. ಉಪ್ಪಿನಕಾಯಿ ಇಡುವ ಡಬ್ಬಿಯ ಆಯ್ಕೆ, ಶೇಖರಣಾ ವಿಧಾನ ಮತ್ತು ಬಳಸುವ ರೀತಿಯಲ್ಲಿನ ಸಣ್ಣ ತಪ್ಪುಗಳನ್ನು ಸರಿಪಡಿಸುವ ಐದು ಸುಲಭ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಉಪ್ಪಿನಕಾಯಿ
ರುಚಿಯಿಲ್ಲದ ಊಟದ ರುಚಿಯನ್ನು ಹೆಚ್ಚಿಸುವ ಅಹಾರ ಅಂದ್ರೆ ಅದು ಉಪ್ಪಿನಕಾಯಿ. ಇಂದು ಮಾರುಕಟ್ಟೆಗಳಲ್ಲಿ ಬಗೆ ಬಗೆಯ ಉಪ್ಪಿನಕಾಯಿಗಳು ಸಿಗುತ್ತದೆ. ಒಂದು ವರ್ಗದ ಜನರಿಗೆ ಊಟದಲ್ಲಿ ಉಪ್ಪಿನಕಾಯಿ ಕಡ್ಡಾಯವಾಗಿರಬೇಕು. ಉಪ್ಪಿನಕಾಯಿ ತಯಾರಿಸುವ ವಿಧಾನವೂ ಸ್ಥಳದಿಂದ ಸ್ಥಳಕ್ಕೆ ವಿಭಿನ್ನವಾಗಿರುತ್ತದೆ. ಆದ್ರೆ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಕೆಲವೇ ದಿನಗಳಲ್ಲಿ ಕೆಡುತ್ತದೆ.
ಉಪ್ಪಿನಕಾಯಿ ಹಾಳಾಗಲು ಮುಖ್ಯ ಕಾರಣ
ದೀರ್ಘಕಾಲ ಇಡಲು ತಯಾರಿಸಿದ ಉಪ್ಪಿನಕಾಯಿಗಳು ಕೂಡ ಕೆಲವೊಮ್ಮೆ ಹಾಳಾಗುತ್ತವೆ. ಹೀಗೆ ಉಪ್ಪಿನಕಾಯಿ ಹಾಳಾದರೆ ಖಂಡಿತ ಬೇಸರವಾಗುತ್ತದೆ. ನಾವು ಉಪ್ಪಿನಕಾಯಿ ಇಡುವ ರೀತಿ, ಅದನ್ನು ಬಳಸುವ ರೀತಿಯಲ್ಲಿ ಆಗುವ ತಪ್ಪುಗಳೇ ಉಪ್ಪಿನಕಾಯಿ ಹಾಳಾಗಲು ಮುಖ್ಯ ಕಾರಣ. ಉಪ್ಪಿನಕಾಯಿಗಳು ಹೀಗೆ ಹಾಳಾಗದಂತೆ ತಡೆಯಲು ಸಹಾಯ ಮಾಡುವ ಐದು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.
ಸಲಹೆ 1
ಉಪ್ಪಿನಕಾಯಿ ಇಡಲು ಯಾವಾಗಲೂ ಅಗಲ ಬಾಯಿಯ ಡಬ್ಬಿಗಳನ್ನೇ ಬಳಸಿ. ದೀರ್ಘಕಾಲ ಇಡುವುದಾದರೆ, ಬಾಟಲಿಯಲ್ಲಿ ಪೂರ್ತಿಯಾಗಿ ಉಪ್ಪಿನಕಾಯಿ ತುಂಬಿಡಿ. ಇದರಿಂದ ಉಪ್ಪಿನಕಾಯಿಯ ಮೇಲೆ ಗಾಳಿ ಉಳಿಯುವುದನ್ನು ತಪ್ಪಿಸಬಹುದು. ಗಾಳಿ ಇದ್ದರೆ ಉಪ್ಪಿನಕಾಯಿ ಹಾಳಾಗಬಹುದು.
ಸಲಹೆ 2
ಉಪ್ಪಿನಕಾಯಿ ಇಡುವ ಬಾಟಲಿಗಳ ಮುಚ್ಚಳ ಲೋಹದ್ದಾಗಿದ್ದರೆ ಅಷ್ಟು ಒಳ್ಳೆಯದಲ್ಲ. ಯಾಕೆಂದರೆ ಲೋಹದ ಮುಚ್ಚಳಗಳಾದರೆ, ಉಪ್ಪಿನಕಾಯಿಯಲ್ಲಿರುವ ವಿನೆಗರ್ ಅಂಶ ಅದರೊಂದಿಗೆ ಪ್ರತಿಕ್ರಿಯಿಸಿ ಉಪ್ಪಿನಕಾಯಿ ಹಾಳಾಗಬಹುದು. ಉಪ್ಪಿನಕಾಯಿ ತೆಗೆಯುವಾಗಲೂ ಲೋಹದ ಚಮಚಗಳನ್ನು ಬಳಸಬೇಡಿ. ಇದಕ್ಕಾಗಿ ಪ್ಲಾಸ್ಟಿಕ್ ಸೌಟುಗಳನ್ನು ಬಳಸಬಹುದು.
ಸಲಹೆ 3
ಉಪ್ಪಿನಕಾಯಿ ಇಡಲು ಬಳಸುವ ಬಾಟಲಿ ಅಥವಾ ಡಬ್ಬಿಗಳನ್ನು ಮೊದಲು ಸ್ವಚ್ಛಗೊಳಿಸಿ, ಒಣಗಿಸಿ, ಶುದ್ಧೀಕರಿಸಬೇಕು. ತೊಳೆಯುವಾಗ ಕೊನೆಯಲ್ಲಿ ಬಿಸಿ ನೀರನ್ನು ಬಳಸಿ ತೊಳೆಯಬೇಕು. ನೀರಿನಂಶ ಇಲ್ಲದಂತೆ ಬಾಟಲಿಯಲ್ಲಿ ಉಪ್ಪಿನಕಾಯಿ ತುಂಬಬೇಕು.
ಓವನ್‌ನಲ್ಲಿ ಇಟ್ಟು ಡಬ್ಬಿಗಳನ್ನು ಶುದ್ಧೀಕರಿಸುವವರೂ ಇದ್ದಾರೆ. ಇದು ಸಾಧ್ಯವಾಗದವರು ಬಿಸಿ ನೀರಿನಲ್ಲಿ ತೊಳೆದು, ಸ್ವಚ್ಛವಾದ ಹತ್ತಿ ಬಟ್ಟೆಯಿಂದ ಚೆನ್ನಾಗಿ ಒರೆಸಿ ಬಾಟಲಿಯನ್ನು ಒಣಗಿಸಬೇಕು. ಗಮನಿಸಿ, ಇದಕ್ಕಾಗಿ ಬಳಸುವ ಬಟ್ಟೆ ತುಂಬಾ ಸ್ವಚ್ಛವಾಗಿರಬೇಕು.
ಸಲಹೆ 4
ವಾತಾವರಣದಲ್ಲಿ ಯಾವಾಗಲೂ ತೇವಾಂಶವಿರುವ ಜಾಗದಲ್ಲಿ ಉಪ್ಪಿನಕಾಯಿ ಇಡಬೇಡಿ. ಒಣಗಿದ, ಆದರೆ ಹೆಚ್ಚು ಸೂರ್ಯನ ಬೆಳಕು ಬೀಳದ ಜಾಗದಲ್ಲಿ ಇಡಬೇಕು. ಇದು ಕೂಡ ದೀರ್ಘಕಾಲ ಉಪ್ಪಿನಕಾಯಿ ಕೆಡದಂತೆ ಇರಲು ಸಹಾಯ ಮಾಡುತ್ತದೆ.
ಸಲಹೆ 5
ಉಪ್ಪಿನಕಾಯಿಯನ್ನು ಒಟ್ಟಿಗೆ ತಯಾರಿಸಿ ಇಡುವುದಾದರೆ, ಕೆಲವು ದಿನಗಳಿಗೆ ಬೇಕಾಗುವಷ್ಟನ್ನು ಬೇರೊಂದು ಚಿಕ್ಕ ಬಾಟಲಿ ಅಥವಾ ಪಾತ್ರೆಯಲ್ಲಿ ಹಾಕಿ ಇಡಬೇಕು. ದೊಡ್ಡ ಬಾಟಲಿಯಿಂದಲೇ ಪದೇ ಪದೇ ಉಪ್ಪಿನಕಾಯಿ ತೆಗೆಯುತ್ತಿದ್ದರೆ, ಅದು ಬೇಗನೆ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

