ಚಪಾತಿ ರೌಂಡಾಗಿ, ಮೃದುವಾಗಿ, ರುಚಿಯಾಗಿ ಬರಬೇಕೆಂದರೆ ಈ ನಾಲ್ಕು ವಿಧಾನ ಗೊತ್ತಿರಲಿ
How to make round chapati: ಈ ವಿಧಾನಗಳನ್ನು ಅನುಸರಿಸುವುದರಿಂದ ನಿಮ್ಮ ಚಪಾತಿ ಇನ್ನು ಮುಂದೆ ವಕ್ರವಾಗಿ ವಕ್ರವಾಗಿ ಬರುವುದಿಲ್ಲ. ದುಂಡಗೆ, ಮೃದುವಾಗಿ ಬರುತ್ತದೆ.

ಅದ್ಭುತ ಟ್ರಿಕ್ಸ್
ನಮ್ಮ ಬಹುತೇಕ ಹೆಣ್ಮಕ್ಕಳಿಗೆ ಒಂದೇ ಚಿಂತೆ. ಅದೇನೆಂದರೆ ಅವರು ಮಾಡುವ ರೊಟ್ಟಿ ಅಥವಾ ಚಪಾತಿ ದುಂಡಾಗಿ ಮತ್ತು ಮೃದುವಾಗಿರುವುದಿಲ್ಲ ಎಂಬುದು. ಇದೇ ಕಾರಣಕ್ಕೆ ಅನೇಕರು ಅದನ್ನು ಮಾಡುವುದೇ ಬೇಡ ಎಂದು ಕೈ ಕೊಡವಿ ಕೂರುತ್ತಾರೆ. ರೈಸ್ ಬಾತ್, ಆ ಬಾತ್ ಎಂದು ಮಾಡಲು ಶುರುವಿಟ್ಟುಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ಆ ಚಿಂತೆ ಬೇಡ. ನೀವು ಮಾಡುವ ಚಪಾತಿ ವಕ್ರವಾಗಿ ಅಥವಾ ಗಟ್ಟಿಯಾಗಿ ಬರದಂತೆ ಹಾಗೂ ದುಂಡಗೆ ಮಾಡಲು ನಾವು ನಿಮಗಾಗಿ ಕೆಲವು ಮಾಸ್ಟರ್ ಟ್ರಿಕ್ಸ್ ತಂದಿದ್ದೇವೆ.
ಚಪಾತಿ ಮಾಡಲು ಸಿದ್ಧರಾಗಿ
ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಮೊದಲ ಪ್ರಯತ್ನದಲ್ಲಿಯೇ ಪರ್‌ಫೆಕ್ಟ್ ಆಗಿ ದುಂಡಗಿನ ಮತ್ತು ಮೃದುವಾಗಿರುವ ಚಪಾತಿ ಮಾಡಲು ಸಾಧ್ಯವಾಗುತ್ತದೆ. ಮತ್ತೇಕೆ ತಡ, ನಿಮ್ಮ ಅಡುಗೆ ಮನೆಯಲ್ಲಿ ಕುಟುಂಬದವರಿಗಾಗಿ ಮೃದುವಾದ ದುಂಡಗಿನ ಚಪಾತಿ ಮಾಡಲು ಸಿದ್ಧರಾಗಿ.
ಹಿಟ್ಟನ್ನು ಸರಿಯಾಗಿ ಬೆರೆಸಿಕೊಳ್ಳಿ
ಯಾವಾಗಲೂ ಹಿಟ್ಟನ್ನು ಉಗುರು ಬೆಚ್ಚಗಿನ ನೀರಿನಿಂದ ಕಲಸಿಕೊಳ್ಳಿ. ಇದು ಚಪಾತಿಯನ್ನು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಹಿಟ್ಟಿಗೆ ಒಂದು ಚಿಟಿಕೆ ಉಪ್ಪು ಮತ್ತು 1-2 ಟೀ ಚಮಚ ಎಣ್ಣೆಯನ್ನು ಸೇರಿಸಿ. ಹೀಗೆ ಮಾಡುವುದರಿಂದ ರುಚಿಯೂ ಹೆಚ್ಚಾಗಿರುತ್ತದೆ.
ಮೊದಲನೇಯ ವಿಧಾನ
ನಾದಿಕೊಂಡ ಹಿಟ್ಟನ್ನು ಮೊದಲಿಗೆ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಉಂಡೆಯನ್ನು ಎರಡೂ ಅಂಗೈಗಳ ನಡುವೆ ಒತ್ತಿ. ಬಿಲ್ಲೆ ರೆಡಿಯಾಗುತ್ತದೆ. ಒತ್ತಿದಾಗ ಅದು ಸಂಪೂರ್ಣವಾಗಿ ದುಂಡಾಗಿರುವಂತೆ ನೋಡಿಕೊಳ್ಳಿ. ಮಣೆ (Rolling board) ಮೇಲೆ ಬಿಲ್ಲೆ ಹಾಕಿ, ನಿಧಾನವಾಗಿ ಲಟ್ಟಣಿಗೆ (ರೋಲಿಂಗ್ ಪಿನ್ )ಯನ್ನು ಪ್ರದಕ್ಷಿಣಾಕಾರವಾಗಿ ತಿರುಗಿಸಿ. ಇದರಿಂದ ಚಪಾತಿ ದುಂಡಾಗಿರುತ್ತದೆ. ಮತ್ತೆ ಮತ್ತೆ ತಿರುಗಿಸಿ ಮತ್ತು ಅಂಟಿಕೊಳ್ಳದಂತೆ ಎರಡೂ ಬದಿಗಳಲ್ಲಿ ಒಣ ಹಿಟ್ಟನ್ನು ಹಚ್ಚಿ. ಚಪಾತಿಯ ಅಂಚುಗಳು ದಪ್ಪವಾಗಿರದಂತೆ ನೋಡಿಕೊಳ್ಳಲು, ಲಘುವಾಗಿ ಪ್ರೆಶರ್ ಹಾಕುವ ಮೂಲಕ ಲಟ್ಟಣಿಗೆಯನ್ನು ಅಂಚುಗಳಿಂದ ಮಧ್ಯದ ಕಡೆಗೆ ಲಟ್ಟಿಸಿ.
ಎರಡನೇಯ ವಿಧಾನ
ಎರಡನೇಯ ವಿಧಾನವನ್ನು ಸಾಮಾನ್ಯವಾಗಿ ಪೂರಿ ಮಾಡುವಾಗ ಬಳಸುತ್ತಾರೆ. ಆದರೆ ನಿಮಗೆ ಮೇಲೆ ಹೇಳಿದಂತೆ ಬಿಲ್ಲೆ ಮಾಡಿಕೊಳ್ಳಲು ಬರುವುದಿಲ್ಲವೆಂದರೆ ಚಪಾತಿಯನ್ನು ದುಂಡಗಿನ ಮುಚ್ಚಳ ಅಥವಾ ಬಟ್ಟಲಿನಿಂದ ಕತ್ತರಿಸಿ. ನಂತರ ಲಟ್ಟಿಸಿ. ಇದು ಪರ್‌ಫೆಕ್ಟ್ ಆಗಿ ದುಂಡಗಿನ ಆಕಾರ ನೀಡುತ್ತದೆ.
ಮೂರನೇಯ ವಿಧಾನ
ಇದು ಬಹಳ ಸುಲಭವಾದ ವಿಧಾನ. ಆದರೆ ಸ್ವಲ್ಪ ದುಡ್ಡು ಖರ್ಚು ಮಾಡಬೇಕಷ್ಟೇ. ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಟಿ ಮೇಕರ್ ಅಥವಾ ರೌಂಡ್ ಶೇಪರ್ ಬಳಸಿ. ಇದರಿಂದ ತಕ್ಷಣವೇ ದುಂಡಗಿನ ಚಪಾತಿಗಳು ತಯಾರಾಗುತ್ತವೆ.
ಕೊನೆಯ ವಿಧಾನ
ನಾದಿಟ್ಟ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದರೆ, ಅದನ್ನು ಹೊರತೆಗೆದು ಮತ್ತೆ ಉಗುರು ಬೆಚ್ಚಗಿನ ನೀರಿನಿಂದ ಬೆರೆಸಿಕೊಳ್ಳಿ. ಚಪಾತಿ ಮಾಡುವ ಮೊದಲು ಹಿಟ್ಟನ್ನು ಕೋಣೆಯ ಉಷ್ಣಾಂಶಕ್ಕೆ ತನ್ನಿ. ಹಿಟ್ಟಿನ ಮೇಲೆ ಒಣ ಹಿಟ್ಟನ್ನು ಹಚ್ಚಿ. ಇದರಿಂದ ಅದು ಮಣೆ ಮೇಲೆ ಅಂಟಿಕೊಳ್ಳುವುದಿಲ್ಲ.