ನಾಳಿನ ಬ್ರೇಕ್ ಫಾಸ್ಟ್ ಏನು? ಟೆನ್ಷನ್ ಬೇಡ ಹೈ ಪ್ರೋಟೀನ್ ರೆಸಿಪಿ ಇಲ್ಲಿದೆ
High protein breakfast recipe : ಬೆಳಗಿನ ಬ್ರೇಕ್ ಫಾಸ್ಟ್ ತಲೆ ನೋವಿನ ಕೆಲ್ಸ. ಏನು ಮಾಡ್ಬೇಕು ಎನ್ನವು ಪ್ರಶ್ನೆ ಸಾಮಾನ್ಯ. ಆರೋಗ್ಯಕರ, ರುಚಿಕರ ಹಾಗೂ ಹೆಚ್ಚು ಪ್ರೋಟೀನ್ ಇರೋ ಬ್ರೇಕ್ ಫಾಸ್ಟ್ ರೆಸಿಪಿಗಳು ಇಲ್ಲಿವೆ.

ಹೆಸರು ಬೇಳೆ ಚಿಲ್ಲಾ
ರಾತ್ರಿಯೇ ಹೆಸರು ಬೇಳೆಯನ್ನು ನೀರಿನಲ್ಲಿ ನೆನೆ ಹಾಕಿ. ಬೆಳಿಗ್ಗೆ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಶುಂಠಿ, ತುರಿದ ಕ್ಯಾರೆಟ್, ಕತ್ತರಿಸಿದ ಹಸಿ ಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನೀವು ಈ ಬ್ಯಾಟರ್ ಗೆ ಶುಂಠಿ ಮತ್ತು ನಿಮ್ಮಿಷ್ಟದ ತರಕಾರಿ ಸೇರಿಸಬಹುದು. ನಂತ್ರ ದೋಸೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಸವರಿ, ಬ್ಯಾಟರ್ ಹಾಕಿ ದೋಸೆ ತಯಾರಿಸಿ. ಈ ಹೆಸರು ಬೇಳೆ ಚಿಲ್ಲಾ ಸ್ನಾಯುಗಳಿಗೆ ಬಲ ನೀಡುತ್ತದೆ. ತುಂಬಾ ಸಮಯ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್ ಇದ್ರಲ್ಲಿ ಕಡಿಮೆ ಇರೋದ್ರಿಂದ, ಹಸಿವನ್ನು ಕಡಿಮೆ ಮಾಡುತ್ತದೆ.
ಪನೀರ್ ಭುರ್ಜಿ
ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ, ಮಧ್ಯಮ ಉರಿಯಲ್ಲಿ ಬೇಯಿಸಿ. ಅದಕ್ಕೆ ಜೀರಿಗೆ ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ಸಾಸಿವೆ ಸಿಡಿದ ನಂತ್ರ ಈರುಳ್ಳಿ ಸೇರಿಸಿ ಫ್ರೈ ಮಾಡಿ. ನಂತ್ರ ಟೊಮ್ಯಾಟೊ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ. ಬೆಳ್ಳುಳ್ಳಿ ಪರಿಮಳ ಬರುವವರೆಗೆ 4-5 ನಿಮಿಷ ಬೇಯಿಸಿ. ಇದಕ್ಕೆ ಉಪ್ಪು ಮತ್ತು ಕ್ಯಾಪ್ಸಿಕಂ ಹಾಕಿ, 3 ನಿಮಿಷ ಬೇಯಿಸಿ. ನಂತ್ರ 3/4 ಕಪ್ ಬಿಸಿ ನೀರನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಕಡಿಮೆ ಉರಿಯಲ್ಲಿ ಸುಮಾರು 5-6 ನಿಮಿಷಗಳ ಕಾಲ ಬೇಯಿಸಿ. ಆ ನಂತ್ರ ತುರಿದ ಪನೀರ್ ಸೇರಿಸಿ. ನೀವು ಇದಕ್ಕೆ ಕ್ರೀಮ್, ಕಸೂರಿ ಮೇಥಿ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು. ಎಲ್ಲವನ್ನು 3-4 ನಿಮಿಷ ಬೇಯಿಸಿ, ಗ್ಯಾಸ್ ಬಂದ್ ಮಾಡಿ. ಪನೀರ್ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಒದಗಿಸುತ್ತದೆ. ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ತೂಕ ಇಳಿಸ್ಬೇಕು ಅಂದ್ರೆ ಈ ರೆಸಿಪಿ ಟ್ರೈ ಮಾಡಿ.
ತರಕಾರಿ ಓಟ್ಸ್ ಉಪ್ಮಾ
ಒಂದು ಕಪ್ ಓಟ್ಸ್ ಅನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ನಂತ್ರ ಅದನ್ನು ಶುದ್ಧ ಬಟ್ಟಲಿಗೆ ಹಾಕಿಡಿ. ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ, ಬಿಸಿ ಆದ್ಮೇಲೆ ಅರ್ಧ ಚಮಚ ಸಾಸಿವೆ ಮತ್ತು ಅರ್ಧ ಚಮಚ ಜೀರಿಗೆ ಸೇರಿಸಿ. ಸಾಸಿವೆ ಸಿಡಿದ ಮೇಲೆ ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡಲೆ ಬೇಳೆ ಮತ್ತು 8-10 ಗೋಡಂಬಿ ಸೇರಿಸಿ. ಇದು ಹುರಿದ ಮೇಲೆ 2 ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಐದಾರು ಕರಿಬೇವಿನ ಎಲೆ ಸೇರಿಸಿ, ಹುರಿಯಿರಿ. ಅರ್ಧ ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ನಂತ್ರ 1 ಕಪ್ ಮಿಶ್ರ ತರಕಾರಿ ಸೇರಿಸಿ 3 -4 ನಿಮಿಷ ಹುರಿಯಿರಿ. ರುಚಿಗೆ ತಕ್ಕಷ್ಟು ಅರಿಶಿನ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಆ ನಂತ್ರ ಅದಕ್ಕೆ 1 ಕಪ್ ನೀರು ಸೇರಿಸಿ. ನೀರು ಕುದಿಯುತ್ತಿರುವಾಗ ಹುರಿದ ಓಟ್ಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಎಲ್ಲಾ ನೀರು ಹೀರಿಕೊಳ್ಳುವವರೆಗೆ ಬೇಯಿಸಿ. ಗ್ಯಾಸ್ ಬಂದ್ ಮಾಡಿ 1 ಚಮಚ ನಿಂಬೆ ರಸ ಮತ್ತು 2 ಚಮಚ ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಕಡಲೆ ಹಿಟ್ಟಿನ ಚಿಲ್ಲಾ
ಕಡಲೆ ಹಿಟ್ಟಿನ ಚಿಲ್ಲಾ ಮಾಡುವುದು ಕೂಡ ಬಹಳ ಸುಲಭ. ಕಡಲೆ ಹಿಟ್ಟು ನೈಸರ್ಗಿಕವಾಗಿ ಸಸ್ಯ ಪ್ರೋಟೀನ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಇದು ಹಸಿವನ್ನು ನಿಯಂತ್ರಿಸುತ್ತದೆ. ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಕಡಲೆ ಹಿಟ್ಟಿನ ಚಿಲ್ಲಾ ಮಾಡಲು, ಮೊದಲು, 1 ಕಪ್ ಕಡಲೆ ಹಿಟ್ಟಿಗೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಶುಂಠಿ, ಕೊತ್ತಂಬರಿ, ಹಸಿರು ಮೆಣಸಿನಕಾಯಿ ಸೇರಿಸಿ. ಉಪ್ಪು ಹಾಗೂ ಮಸಾಲೆ ಪದಾರ್ಥ ಸೇರಿಸಿ, ನೀರನ್ನು ಹಾಕಿ ಬ್ಯಾಟರ್ ಸಿದ್ಧಪಡಿಸಿ. ನಂತ್ರ ತವಾ ಮೇಲೆ ಬ್ಯಾಟರ್ ಹಾಕಿ ಚಿಲ್ಲಾ ತಯಾರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
