- Home
- Karnataka Districts
- Mandya: ಕಸ ಕಡ್ಡಿಗಳಿಂದ ತುಂಬಿದ್ದ 300 ಅಡಿ ಉದ್ದ, 300 ಅಡಿ ಅಗಲ ಮತ್ತು 30 ಅಡಿ ಆಳದ ಕಲ್ಯಾಣಿಗೆ ಮರುಜೀವ
Mandya: ಕಸ ಕಡ್ಡಿಗಳಿಂದ ತುಂಬಿದ್ದ 300 ಅಡಿ ಉದ್ದ, 300 ಅಡಿ ಅಗಲ ಮತ್ತು 30 ಅಡಿ ಆಳದ ಕಲ್ಯಾಣಿಗೆ ಮರುಜೀವ
ಮಂಡ್ಯ ಜಿಲ್ಲೆಯ ಗೌಡಗೆರೆ ಗ್ರಾಮದಲ್ಲಿರುವ ಚಿಕ್ಕದೇವರಾಜ ಒಡೆಯರ್ ಕಾಲದ ಐತಿಹಾಸಿಕ 'ಅಮ್ಮನ ಕಲ್ಯಾಣಿ'ಯನ್ನು ಗ್ರಾಮಸ್ಥರು ಹಾಗೂ ಪರಿತ್ರಾಣ ಫೌಂಡೇಶನ್ ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಐತಿಹಾಸಿಕ ಅಮ್ಮನ ಕಲ್ಯಾಣಿಗೆ ಮರುಜೀವ
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಗೌಡಗೆರೆ ಗ್ರಾಮದ ಐತಿಹಾಸಿಕ ‘ಅಮ್ಮನ ಕಲ್ಯಾಣಿ’ ಸಂರಕ್ಷಣೆಗೆ ಗ್ರಾಮಸ್ಥರು ಹಾಗೂ ಬೆಂಗಳೂರಿನ ಪರಿತ್ರಾಣ ಫೌಂಡೇಶನ್ ಕೈಜೋಡಿಸಿದ್ದಾರೆ.
ಚಿಕ್ಕದೇವರಾಜ ಒಡೆಯರ್ ಆಡಳಿತಕಾಲದಲ್ಲಿ ಕಲ್ಯಾಣಿ ನಿರ್ಮಾಣ
ಚಿಕ್ಕದೇವರಾಜ ಒಡೆಯರ್ ಅವರ ಆಡಳಿತಕಾಲದಲ್ಲಿ ಧರ್ಮಪತ್ನಿಯ ನೆನಪಿಗಾಗಿ ಈ ಕಲ್ಯಾಣಿ ನಿರ್ಮಾಣಗೊಂಡಿದೆ ಎಂದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ ಎನ್ನಲಾಗಿದೆ. ಸುಮಾರು 10–12 ವರ್ಷಗಳ ಹಿಂದೆ ನೀರಿನಿಂದ ಸಮೃದ್ಧವಾಗಿದ್ದ ಕಲ್ಯಾಣಿ, ಮಳೆಯ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಬರಡಾಗಿ ಕಸ-ಕಡ್ಡಿ ಮತ್ತು ಗಿಡಗಂಟಿಗಳಿಂದ ಮುಚ್ಚಿಹೋಗಿತ್ತು.
ಕಲ್ಯಾಣಿಯನ್ನು ಉಳಿಸಿ ಅದರ ಗತವೈಭವ ಮರಳಿ ತರಲು ಮುಂದಾದ ಗ್ರಾಮಸ್ಥರ ಪ್ರಯತ್ನಕ್ಕೆ ಪರಿತ್ರಾಣ ಫೌಂಡೇಶನ್‌ನ ಸಂಸ್ಥಾಪಕ ಸಚಿನ್ ಶಂಕರ್ ಹಾಗೂ ತಂಡ ಕೈಜೋಡಿಸಿದೆ. ಸೆಪ್ಟೆಂಬರ್ 6, 2026 ಸೇರಿದಂತೆ ಮೂರು ಭಾನುವಾರಗಳಲ್ಲಿ ಶ್ರಮದಾನ ನಡೆಸಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಗಿದೆ.
ಯುವಕರ ತಂಡಕ್ಕೆ ಶಾಸಕ ಪುಟ್ಟಣ್ಣಯ್ಯ ಮೆಚ್ಚುಗೆ
ಸುಮಾರು 300 ಅಡಿ ಉದ್ದ, 300 ಅಡಿ ಅಗಲ ಮತ್ತು 30 ಅಡಿ ಆಳ ಹೊಂದಿರುವ ಈ ಬೃಹತ್ ಜಲಮೂಲದ ಸಂರಕ್ಷಣಾ ಕಾರ್ಯವನ್ನು ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭೇಟಿ ನೀಡಿ ಪ್ರಶಂಸಿಸಿದ್ದಾರೆ ಎಂದು ತಿಳಿದುಬಂದಿದೆ.
ಶ್ರಮದಾನದಲ್ಲಿ ಭಾಗಿಯಾಗಿದ್ದ ಗ್ರಾಮಸ್ಥರು
ಪರಿತ್ರಾಣ ಫೌಂಡೇಶನ್ ತಂಡದ ಸಚಿನ್ ಶಂಕರ್, ಮಹೇಶ್, ಸಂತೋಷ್, ದಿವ್ಯ, ಪವನ್, ನಾಗೇಶ್, ಲಿಖಿತ್ ಸೇರಿದಂತೆ ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದಾರೆ. ಚನ್ನಪಟ್ಟಣದ ಲಕ್ಷ್ಮಿಕಿಶೋರ್ ಅರಸ್ ಹಾಗೂ ಪಂಜಾಬ್‌ನ ರೊಪಡ್ ಜಿಲ್ಲೆಯ ನವಜೋತ್ ಸಿಂಗ್ ಕೂಡ ಆಗಮಿಸಿ ಸೇವೆ ಸಲ್ಲಿಸಿದ್ದಾರೆ. ಐತಿಹಾಸಿಕ ಪರಂಪರೆಯ ಸಂರಕ್ಷಣೆ ಜೊತೆಗೆ ಮುಂದಿನ ದಿನಗಳಲ್ಲಿ ಈ ಕಲ್ಯಾಣಿ ಗ್ರಾಮಸ್ಥರು ಹಾಗೂ ಪಶು-ಪಕ್ಷಿಗಳಿಗೆ ಜಲಮೂಲವಾಗಿ ಉಳಿಯಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.
'ಕಲ್ಯಾಣಿಯನ್ನು ಶಾಶ್ವತವಾಗಿ ಉಳಿಸಿ'
ಈ ಕುರಿತಂತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ನಟರಾಜ್ ಪಂಡಿತ್ ಅವರು, ಯುವಕರ ತಂಡ ಬಹುದೊಡ್ಡ ಕೆಲಸ ಮಾಡಿದೆ. ಎರಡು ವಾರದ ಕೆಲಸ ಮಾಡಿ ಈ ಕಲ್ಯಾಣಿಗೆ ಮೂಲ ಸ್ವರೂಪ ನೀಡಿದ್ದಾರೆ. ಇಂತಹ ಕಾರ್ಯ ಯಾಕೆ ಮಾಡಬೇಕು ಎಂದು ಬಂದಾಗ, ಜಿಎಸ್ ಶಿವರುದ್ರಪ್ಪನ ಮಾತನ್ನು ನೆನಪಿಸಿದ ಅವರು. ನಿಮ್ಮನ್ನು ನಿಮ್ಮ ಅಮ್ಮ ಮಾತ್ರ ಬೆಳೆಸಿಲ್ಲ. ನಿಮ್ಮ ಬೆಳವಣಿಗೆಗೆ ಸಮಾಜ ಕೂಡ ಕಾರಣವಾಗಿದೆ. ಸಮಾಜದ ಋಣ ನಮ್ಮ ಮೇಲೆ ಅಪಾರವಾಗಿದೆ. ಸಮಾಜ ಯಾವ ಚೆನ್ನಾಗಿದೆ, ಒಳ್ಳೆಯ ವ್ಯಕ್ತಿಗಳು ಸಮಾಜದಿಂದ ಹೊರ ಬಂದಿದ್ದಾರೆ. ಸಮಾಜ ದಿಕ್ಕು ತಪ್ಪುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳು ಉಳಿದುಕೊಳ್ಳುತ್ತದೆ. ಆದರೆ ಈ ಕಾರ್ಯವನ್ನು ಇಲ್ಲಿಗೆ ಕೈಬಿಡದೆ, ಇದನ್ನು ಕೊನೆಯ ಹಂತದ ವರೆಗೂ ಮುಂದುವರಿಸಿಕೊಂಡು ಹೋಗಬೇಕು. ಶಾಸಕರ ಹಿಂದೆ ಬಿಂದು ನೀವು ಈ ಕಲ್ಯಾಣಿಗೆ ನೀರು ತುಂಬುವಂತೆ ಮಾಡಿದರೆ ಕಲ್ಯಾಣಿ ಶಾಶ್ವತವಾಗಿ ಉಳಿದುಕೊಳ್ಳಲಿದೆ ಎಂದು ಸಲಹೆ ನೀಡಿದ್ದಾರೆ.

