23 ವರ್ಷದೊಳಗಿನವರಿಗೆ ಮದ್ಯ ಮಾರಾಟ ನಿಷೇಧ; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ನಿಬಂಧನೆ
23 ವರ್ಷದೊಳಗಿನವರಿಗೆ ಮದ್ಯ ಮಾರಾಟ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಬಾರ್ಗಳಲ್ಲಿ ವಯಸ್ಸಿನ ದಾಖಲೆ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳಲ್ಲಿ ಅಕ್ರಮ ತಡೆಯಲು 1000 ರೂ. ಮೇಲ್ಪಟ್ಟ ಖರೀದಿಗೆ ಡಿಜಿಟಲ್ ಪಾವತಿಯನ್ನು ಕಡ್ಡಾಯ ಮಾಡಲಾಗಿದೆ.

ಕೇರಳಂನಲ್ಲಿ ನಿಬಂಧನೆ
ರಾಜ್ಯದಲ್ಲಿ 23 ವರ್ಷ ಕೆಳಗಿನವರಿಗೆ ಮದ್ಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಿರುವ ರಾಜ್ಯ ಸರ್ಕಾರ ಅದರ ಕಟ್ಟುನಿಟ್ಟಿನ ಜಾರಿಗೆ ಬಾರ್ ಮಾಲಕರಿಗೆ ಸೂಚಿಸಿದ್ದು, ಮಾಲೀಕರು ಕಡ್ಡಾಯವಾಗಿ ವಯಸ್ಸಿನ ದಾಖಲೆ ಪರಿಶೀಲಿಸಬೇಕು. ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಅಬಕಾರಿ ಸಚಿವರಿಂದ ಖಡಕ್ ಸೂಚನೆ
ಇತ್ತೀಚೆಗೆ ಅಪ್ರಾಪ್ತ ಮದ್ಯ ಸೇವಿಸಿ ಕಾರು ಚಲಾಯಿಸಿ ಮೂವರ ಸಾವಿಗೆ ಕಾರಣವಾದ ಬೆನ್ನಲ್ಲೇ ಸರ್ಕಾರ ನಿಯಮ ಬಿಗಿಗೊಳಿಸಿದೆ. ಕೇರಳಂನ ಅಬಕಾರಿ ಸಚಿವ ಎಂ.ಲಿಜು ಈ ಬಗ್ಗೆ ಸೂಚನೆ ನೀಡಿದ್ದು, ‘ರಾಜ್ಯದಲ್ಲಿ ಕಾನೂನುಬದ್ಧ ಮದ್ಯಪಾನ ವಯಸ್ಸು 23 ವರ್ಷವಾಗಿದ್ದು, ಅಪ್ರಾಪ್ತ ವಯಸ್ಸಿನ ಗ್ರಾಹಕರಿಗೆ ಮದ್ಯ ಸೇವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಬಾರ್ಗಳ ಮೇಲಿದೆ ಎಂದು ಹೇಳಿದ್ದಾರೆ.
2017ರಿಂದಲೂ ಜಾರಿಯಲ್ಲಿರುವ ನಿಯಮ
ಯಾರಾದರೂ 23 ವರ್ಷಕ್ಕಿಂತ ಕಡಿಮೆ ವಯಸ್ಸಿನವರಂತೆ ಕಂಡುಬಂದರೆ, ಬಾರ್ಗಳು ಮದ್ಯವನ್ನು ಪೂರೈಸುವ ಮೊದಲು ಅವರ ಆಧಾರ್ ಕಾರ್ಡ್ ಅಥವಾ ಇತರ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಬೇಕು’ ಎಂದಿದ್ದಾರೆ. 2017ರಿಂದಲೂ ಕೇರಳದಲ್ಲಿ ಮದ್ಯಪಾನಕ್ಕೆ ಕಾನೂನಾತ್ಮಕ ವಯಸ್ಸು 23 ಎನ್ನುವ ನಿಯಮ ಜಾರಿಯಲ್ಲಿದೆ.
ತ.ನಾಡಿನಲ್ಲಿ 1000 ರು. ಮೇಲ್ಪಟ್ಟ ಮದ್ಯ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯ
ಮದ್ಯದ ಅಂಗಡಿಗಳಲ್ಲಿ ಮೂಲ ಬೆಲೆಗಿಂತ ಹೆಚ್ಚು ಹಣ ವಸೂಲಿಗೆ ಕಡಿವಾಣಕ್ಕೆ ಮುಂದಾಗಿರುವ ತಮಿಳುನಾಡು ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಮದ್ಯದ ಅಂಗಡಿಗಳಲ್ಲಿ ನ.1ರಿಂದ ಜಾರಿಗೆ ಬರುವಂತೆ 1000 ರು. ಮೇಲ್ಪಟ್ಟ ಮದ್ಯ ಖರೀದಿಗೆ ಡಿಜಿಟಲ್ ಪಾವತಿ ಕಡ್ಡಾಯಗೊಳಿಸಿದೆ.
ಬಿಲ್ ಪಾವತಿ
ಯುಪಿಎಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಈಗಾಗಲೇ ಸ್ವೀಕರಿಸಲಾಗುತ್ತಿದ್ದರೂ, ನಗದು ವಹಿವಾಟುಗಳೇ ಹೆಚ್ಚಾಗಿ ನಡೆಯುತ್ತಿದೆ. ಹೀಗಾಗಿ ಪಾರದರ್ಶಕತೆ ಜತೆಗೆ ನಗದು ಬಿಲ್ ಪಾವತಿ ವೇಳೆಯಲ್ಲಿನ ರಿಸ್ಕ್ ತಡೆಗೆ ಈ ಕ್ರಮ ಕೈಗೊಂಡಿದೆ. 1000 ರು.ಗಿಂತ ಕಡಿಮೆ ಮೊತ್ತದ ಮದ್ಯ ಖರೀದಿಸಿದವರು ನಗದು ಪಾವತಿ ಮಾಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ





