ಪಾಕ್ ಭಯೋತ್ಪಾದನೆ ನಿಲ್ಲದ ಹೊರತು ಸಿಂಧೂ ಜಲ ಒಪ್ಪಂದ ಪರಿಶೀಲನೆ ಇಲ್ಲ: ಜೈಶಂಕರ್
ಭಯೋತ್ಪಾದನೆ ನಿಲ್ಲದ ಹೊರತು ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಇಲ್ಲ ಮತ್ತು ಸಿಂಧೂ ನದಿ ನೀರಿನ ಒಪ್ಪಂದವನ್ನು ಪುನರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಖಾಲಿ ಮಾಡುವುದರ ಕುರಿತು ಮಾತ್ರ ಚರ್ಚೆ ನಡೆಸಲು ಭಾರತ ಸಿದ್ಧವಿದೆ ಎಂದಿದ್ದಾರೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನದ ವಿರುದ್ಧ ಭಾರತದ ನಿಲುವನ್ನು ಗುರುವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ನವದೆಹಲಿಯಲ್ಲಿ ಹೊಂಡುರಾಸ್ ರಾಯಭಾರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಭಯೋತ್ಪಾದನೆ ಬಗೆಹರಿಯುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಸಾಮಾನ್ಯ ಮಾತುಕತೆ ಸಾಧ್ಯವಿಲ್ಲ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಪರಿಹಾರ ಕಂಡುಕೊಳ್ಳುವವರೆಗೆ ಸಿಂಧೂ ನದಿ ಜಲ ಒಪ್ಪಂದದ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಸಿಂಧೂ ಜಲ ಒಪ್ಪಂದ ಸ್ಥಗಿತಗೊಂಡಿದೆ. ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲದ ಹೊರತು, ಸಿಂಧೂ ಜಲ ಒಪ್ಪಂದವನ್ನು ಪುನರಾರಂಭಿಸುವ ಪ್ರಶ್ನೆಯೇ ಇಲ್ಲ. ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ವಿಶ್ವಾಸಾರ್ಹವಾಗಿ ಪರಿಹಾರ ಕಂಡುಕೊಳ್ಳುವವರೆಗೂ ಈ ಸ್ಥಗಿತ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ವಿರುದ್ಧ ಭಾರತ ಗಂಭೀರವಾಗಿದೆ. "ಪಾಕಿಸ್ತಾನವು ಹಸ್ತಾಂತರಿಸಬೇಕಾದ ಭಯೋತ್ಪಾದಕರ ಪಟ್ಟಿ ನಮ್ಮಲ್ಲಿದೆ ಅವರು ತಕ್ಷಣವೇ ಉಗ್ರರನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು ಎಂದು ಜೈಶಂಕರ್ ಹೇಳಿದರು.
ಪಾಕಿಸ್ತಾನದೊಂದಿಗಿನ ಯಾವುದೇ ಸಂವಾದ ಕೇವಲ ಭಯೋತ್ಪಾದನೆ ಕುರಿತಾಗಿರುತ್ತದೆ. ಇದು ಪ್ರಧಾನಮಂತ್ರಿ ಅವರ ನಿಲುವು ಮತ್ತು ರಾಷ್ಟ್ರೀಯ ಮಟ್ಟದ ಒಗ್ಗಟ್ಟಿನ ಮಾತಾಗಿದೆ ಎಂಬುದನ್ನು ಪುನರುಚ್ಛರಿಸಿದರು. ಜಮ್ಮು-ಕಾಶ್ಮೀರ ಕುರಿತು ಚರ್ಚೆಗೆ ಸಂಬಂಧಿಸಿದಂತೆ ಜೈಶಂಕರ್ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಖಾಲಿ ಮಾಡುವುದು ಮಾತ್ರ ಚರ್ಚೆಯ ವಿಷಯ. ಇತರ ಯಾವ ವಿಚಾರಗಳೂ ಚರ್ಚೆಗೆ ಬರುವುದೇ ಇಲ್ಲ ಎಂದರು. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕ ಮೃತಪಟ್ಟ ನಂತರ, ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮಾತುಕತೆಗೆ ಒಲವು ತೋರಿದರೂ ಭಾರತ ತನ್ನ ನಿಲುವನ್ನು ಬದಲಾಯಿಸಿಲ್ಲ.
ಮೇ 10 ರಂದು ಭಾರತ ಮತ್ತು ಪಾಕಿಸ್ತಾನಗಳು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ದೇಶದಾದ್ಯಂತ ವಿರೋಧ ಪಕ್ಷಗಳು ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದರು. ಪಾಕಿಸ್ತಾನ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಲು ಕೇಂದ್ರವು ಅವಕಾಶ ನೀಡುವ ಬಗ್ಗೆ ಕಳವಳ ವ್ಯಕ್ತಪಡಿಸಿದವು. ಕಾಶ್ಮೀರ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಬಾರದೆಂಬ ಭಾರತದ ನೀತಿ ಹಾಗೆಯೇ ಉಳಿದಿದೆ. ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧಗಳು ಮತ್ತು ವ್ಯವಹಾರಗಳು ಕಟ್ಟುನಿಟ್ಟಾಗಿ ದ್ವಿಪಕ್ಷೀಯವಾಗಿರುತ್ತವೆ. ಅದು ವರ್ಷಗಳ ರಾಷ್ಟ್ರೀಯ ಒಮ್ಮತವಾಗಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಯಿಲ್ಲ.
ಕಾಶ್ಮೀರದ ಕುರಿತು ಚರ್ಚಿಸಲು ಉಳಿದಿರುವ ಏಕೈಕ ವಿಷಯವೆಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ತೆರವುಗೊಳಿಸುವುದು ನಾವು ಆ ಚರ್ಚೆಗೆ ಮುಕ್ತರಾಗಿದ್ದೇವೆ. ಭಯೋತ್ಪಾದನೆಯ ಬಗ್ಗೆ ಏನು ಮಾಡಬೇಕೆಂದು ನಾವು ಅವರೊಂದಿಗೆ ಚರ್ಚಿಸಲು ಸಿದ್ಧರಿದ್ದೇವೆ. ಅವರಿಗೆ ಸಲಹೆಗಳನ್ನು ನೀಡಲು ಕೂಡ ಸಿದ್ಧರಿದ್ದೇವೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸುವ ಮೂಲಕ ಭಾರತ ತನ್ನ ಗುರಿಗಳನ್ನು ಸಾಧಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಕುರಿತಾಗಿ ಮಾತನಾಡಿದ ಜೈಶಂಕರ್, "ವ್ಯಾಪಾರ ಮಾತುಕತೆಗಳು ಮುಂದುವರಿಯುತ್ತಿವೆ. ಇವು ಸಂಕೀರ್ಣವಾಗಿವೆ ಮತ್ತು ಅಂತಿಮ ನಿರ್ಣಯಕ್ಕೆ ಬರುವವರೆಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದರು. ಯಾವುದೇ ವ್ಯಾಪಾರ ಒಪ್ಪಂದವು ಪರಸ್ಪರ ಲಾಭದಾಯಕವಾಗಿರಬೇಕು. ಎರಡೂ ದೇಶಗಳ ಹಿತಾಸಕ್ತಿಗೆ ಅನುಕೂಲವಾಗಬೇಕು ಎಂಬುದನ್ನು ಒತ್ತಿಹೇಳಿದರು. ವಿದೇಶಾಂಗ ನೀತಿಯಲ್ಲಿ ಭಾರತ ಇಂದು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ತೋರಿಸುತ್ತಿದ್ದು, ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳೊಂದಿಗೆ ಸಂಬಂಧಗಳಿಲ್ಲದೆ ವ್ಯಾಪಾರದ ಬಗ್ಗೆ ಸಮಗ್ರ ನಿಲುವು ಹೊಂದಿದೆ. ಪಾಕಿಸ್ತಾನದೊಂದಿಗೆ ಸಂವಾದಕ್ಕೆ ಹೊರಟರೆ, ಅದು ಕೇವಲ ಭಯೋತ್ಪಾದನೆ ನಿಲ್ಲಿಸುವ ಕುರಿತಾದ ಚರ್ಚೆ ಆಗಿರಬೇಕು ಎಂಬುದನ್ನು ಜೈಶಂಕರ್ ಅವರು ಬಹಳ ಸ್ಪಷ್ಟವಾಗಿ ಹೇಳಿದಂತಾಗಿದೆ.