ಭಾರತ-ಪಾಕ್‌ ಕದನ ವಿರಾಮ ಘೋಷಣೆ ಆಗಿದ್ದರೂ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ದಂಡನಾತ್ಮಕ ಕ್ರಮಗಳು ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ.  

ನವದೆಹಲಿ (ಮೇ.11): ಭಾರತ-ಪಾಕ್‌ ಕದನ ವಿರಾಮ ಘೋಷಣೆ ಆಗಿದ್ದರೂ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ದಂಡನಾತ್ಮಕ ಕ್ರಮಗಳು ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ. ಏಪ್ರಿಲ್ 23 ರಂದು ಪಾಕಿಸ್ತಾನದ ವಿರುದ್ಧ ಭಾರತ ಘೋಷಿಸಿದ ಕ್ರಮಗಳು ಪರಿಣಾಮಕಾರಿಯಾಗಿರುತ್ತವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪಾಕಿಸ್ತಾನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಭಯೋತ್ಪಾದನೆಯ ಬಗ್ಗೆ ಭಾರತದ ದೃಢ ನಿರ್ಧಾರ ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನಕ್ಕೆ ಈಗ 85 ಸಾವಿರ ಕೋಟಿ ರು. ಐಎಂಎಫ್‌ ಮೊದಲ ಕಂತಿನ ಸಾಲ ನೀಡಿದೆ. ಇನ್ನೂ 2 ಕಂತುಗಳಲ್ಲಿ ಉಳಿದ ಸುಮಾರು 1.70 ಲಕ್ಷ ಕೋಟಿ ರು. ಸಾಲವನ್ನು ಪಾಕ್‌ಗೆ ಐಎಂಎಫ್‌ ನೀಡಬೇಕಿದೆ. ಪಾಕ್‌ ಈಗಲೂ ಉಗ್ರವಾದ ನಿಲ್ಲಿಸದೇ ಹೋದರೆ ಈ ಉಳಿದ ಕಂತನ್ನು ಪಾಕ್‌ಗೆ ಕೊಡಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಷರತ್ತು ವಿಧಿಸಿದ್ದಾರೆ. ಟ್ರಂಪ್‌ ಷರತ್ತನ್ನು ಪಾಕ್‌ ಪೂರೈಸಿದ ಮೇಲಷ್ಟೇ ಭಾರತ ಕೂಡ ಸಿಂಧು ನದಿ ಒಪ್ಪಂದ ಸೇರಿ ಉಳಿದ ನಿರ್ಬಂಧ ತೆರವುಗೊಳಿಸಲಿದೆ ಎಂದು ಭಾರತ ಸರ್ಕಾರ ಷರತ್ತು ಹಾಕಿದ ಎಂದು ಅವು ಹೇಳಿವೆ.

ಮುಖ್ಯಸ್ಥರ ಜೊತೆಗೆ ಮೋದಿ ಚರ್ಚೆ: ಪಾಕ್ ಜೊತೆಗಿನ ಸಂಘರ್ಷ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಶುಕ್ರವಾರ ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾದರು. ಇದೇ ವೇಳೆ ಸೇನಾ ಪಡೆಯ ಮಾಜಿ ಮುಖ್ಯಸ್ಥರು ಮತ್ತು ಸೈನಿಕರ ಜೊತೆಗೆ ಸಂವಾದ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರು ನೌಕಾ ಸೇನೆ, ವಾಯು ಸೇನೆ ಮತ್ತು ಸಶಸ್ತ್ರ ಸೇನೆಯ ಮುಖ್ಯಸ್ಥರನ್ನು ಭೇಟಿಯಾಗಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಅವಲೋಕಿಸಿದರು. ಆ ಬಳಿಕ ಪ್ರಧಾನಿ ಸಶಸ್ತ್ರ ಪಡೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮಾಜಿ ಮುಖ್ಯಸ್ಥರು, ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧರ ಜೊತೆಗೆ ಸಂವಾದ ನಡೆಸಿದರು.

ಭಾರತ ಮೇಲೆ ದಾಳಿಗೆ ಬಳಸುತ್ತಿದ್ದ ಪಾಕಿಸ್ತಾನದ 8 ವಾಯು ನೆಲೆಗಳೇ ಧ್ವಂಸ

ದಿಲ್ಲಿ, ಕಾಶ್ಮೀರದಲ್ಲಿ ಆನ್‌ಲೈನ್‌ ಕ್ಲಾಸ್‌, ಲಡಾಖ್‌ನಲ್ಲಿ ಶಾಲೆಗಳು ಬಂದ್‌: ಭಾರತ ಹಾಗೂ ಪಾಕಿಸ್ತಾನ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ ದೆಹಲಿ, ಲಡಾಖ್‌ ಮತ್ತು ಜಮ್ಮು-ಕಾಶ್ಮೀರದಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಉಭಯ ದೇಶಗಳ ಪ್ರಕ್ಷುಬ್ಧತೆಯ ಹಿನ್ನೆಲೆ ಲೇಹ್‌ ಜಿಲ್ಲೆಯ ಎಲ್ಲ ಶಾಲೆಗಳು ಮೇ 9, 10ರಂದು ಬಂದ್‌ ಆಗಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದೆಹಲಿಯಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗಿದ್ದು ಮಕ್ಕಳಿಗೆ ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಮ್ಮು - ಕಾಶ್ಮೀರದಲ್ಲಿಯೂ ಸಹ ಮೇ 7ರಿಂದಲೂ ಶಾಲೆಗಳನ್ನು ಬಂದ್‌ ಮಾಡಲಾಗಿದ್ದು ಮಕ್ಕಳಿಗಾಗಿ ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ.