ಪಾಕ್ ರಾಜತಾಂತ್ರಿಕನಿಗೆ ಶಾಕ್ ಕೊಟ್ಟ ಭಾರತ; ಕೊಟ್ಟಿದ್ದು ಒಂದೇ ದಿನ ಅವಕಾಶ
ಭಾರತ ಸರ್ಕಾರವು ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರನ್ನು ದೇಶ ಬಿಡಲು ಆದೇಶಿಸಿದೆ. ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ, ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಪ್ರಾಯ ರೂಪಿಸಲು ಭಾರತ ಸರ್ವಪಕ್ಷಗಳ ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಬೂದಿ ಮುಚ್ಚಿದ ಕೆಂಡದಂತಿರುವ ಹೊತ್ತಿನಲ್ಲಿ, ಭಾರತದಲ್ಲಿರುವ ಪಾಕ್ ದೂತಾವಾಸದ ಅಧಿಕಾರಿಯೊಬ್ಬರಿಗೆ ದೇಶ ತೊರೆಯುವಂತೆ ಸರ್ಕಾರ ಆದೇಶಿಸಿದೆ ಹಾಗೂ ಅದಕ್ಕೆ 1 ದಿನ ಕಾಲಾವಕಾಶ ನೀಡಿದೆ.
ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ, ಭಾರತ ಬಿಡುವಂತೆ ಆದೇಶಿಸಲಾಗಿದ್ದು, ಭಾರತದಲ್ಲಿರುವ ಯಾವೊಬ್ಬ ಪಾಕ್ ರಾಜತಾಂತ್ರಿಕನೂ ತನ್ನ ಅಧಿಕಾರದ ದುರ್ಬಳಕೆ ಮಾಡದಂತೆ ಎಚ್ಚರವಹಿಸಲು ಸೂಚಿಸಲಾಗಿದೆ. 8 ದಿನ ಹಿಂದಷ್ಟೇ ಪಾಕ್ ದೂತಾವಾಸದ ಅಧಿಕಾರಿಯೊಬ್ಬರಿಗೆ ದೇಶ ತೊರೆಯುವಂತೆ ಸೂಚಿಸಲಾಗಿತ್ತು.
ಏಳು ನಿಯೋಗಗಳ ಪೈಕಿ 2 ತಂಡಗಳು ಪ್ರವಾಸ
ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಇದೀಗ, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಉಗ್ರಪೋಷಕ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡುವ ರಾಜತಾಂತ್ರಿಕ ದಾಳಿಗೆ ಭಾರತ ಇದೀಗ ಅಧಿಕೃತ ಚಾಲನೆ ನೀಡಿದೆ. ವಿಶ್ವಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರ ರಚಿಸಿರುವ ಸರ್ವಪಕ್ಷಗಳ ಸಂಸದರ ಏಳು ನಿಯೋಗಗಳ ಪೈಕಿ 2 ತಂಡಗಳು ಪ್ರವಾಸ ಆರಂಭಿಸಿವೆ.
ಜೆಡಿಯು ಮುಖಂಡ ಸಂಜಯ್ ಕುಮಾರ್ ಝಾ ನೇತೃತ್ವದ ಮೊದಲ ತಂಡ ಬುಧವಾರ ಜಪಾನ್‌ಗೆ ತೆರಳಿದೆ. ಜಪಾನ್ ಭೇಟಿ ಬಳಿಕ ಈ ನಿಯೋಗವು ಮೇ 24ರಂದು ದಕ್ಷಿಣ ಕೊರಿಯಾ, ಮೇ 27 ಸಿಂಗಾಪುರ, ಮೇ 28 ಇಂಡೋನೇಷ್ಯಾ, ಮೇ 31ರಂದು ಮಲೇಷ್ಯಾಗೆ ತೆರಳಲಿದೆ.
ಈ ರೀತಿ 2ನೇ ತಂಡ ಶಿವಸೇನೆ ಸಂಸದ ಶ್ರೀಕಾಂತ್ ಶಿಂದೆ ನೇತೃತ್ವದ ಇನ್ನೊಂದು ನಿಯೋಗವು ಸಂಜೆ ವೇಳೆಗೆ ಯುಎಇಗೆ ಪ್ರಯಾಣ ಆರಂಭಿಸಲಿದೆ. ಆ ಬಳಿಕ ಲೈಬೀರಿಯಾ, ಕಾಂಗೋ ಮತ್ತು ಸಿಯಾರಾ ಲಿಯೋನ್‌ಗೂ ಈ ತಂಡ ಭೇಟಿ ನೀಡಲಿದೆ.