ಕೇವಲ ₹3000ಕ್ಕೆ ವಾರ್ಷಿಕ ಟೋಲ್ ಪಾಸ್: ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಗುಡ್ ನ್ಯೂಸ್!
ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಟೋಲ್ ಪಾಸ್ ಯೋಜನೆ ಜಾರಿಗೆ ತರುತ್ತಿದೆ. ₹3000 ಪಾವತಿಸಿ ಒಂದು ವರ್ಷ ಪ್ರಯಾಣಗಳಿಗೆ ಟೋಲ್ ಪಾವತಿಯಿಂದ ಮುಕ್ತಿ ಪಡೆಯಬಹುದು. ಪಾಸ್ ಪಡೆಯುವ ವಿವರ ಇಲ್ಲಿದೆ..

ದೆಹಲಿ/ಬೆಂಗಳೂರು (ಜೂ. 18): ಟೋಲ್ ಪ್ಲಾಜಾಗಳಲ್ಲಿ ಪ್ರತಿವೇಳೆ ಹಣ ಪಾವತಿಸುವವರಿಗೆ ಸಂತಸದ ಸುದ್ದಿ ಬಂದಿದೆ. ಕೇಂದ್ರ ಸರ್ಕಾರ ಕೇವಲ 3 ಸಾವಿರ ರೂ. ಬೆಲೆಯಲ್ಲಿ ಹೊಸ ಫಾಸ್ಟ್‌ಟ್ಯಾಗ್ ಆಧಾರಿತ 'ವಾರ್ಷಿಕ ಪಾಸ್' ಯೋಜನೆ ಜಾರಿಗೆ ತರುತ್ತಿದೆ. ಈ ಹೊಸ ನಿಯಮವನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ (MoRTH) ಘೋಷಿಸಿದ್ದು, ಆಗಸ್ಟ್ 15, 2025 ರಿಂದ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಎಂದರೇನು?
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಕಾರು, ಜೀಪ್, ವ್ಯಾನ್‌ನಂತಹ ಖಾಸಗಿ ವಾಹನಗಳಿಗೆ ಪ್ರಿಪೇಯ್ಡ್ ಸೌಲಭ್ಯವಾಗಿದೆ. ಇದರಲ್ಲಿ ಬಳಕೆದಾರರಿಗೆ ₹3,000ಕ್ಕೆ ಒಂದು ವರ್ಷ ಅಥವಾ 200 ಪ್ರವಾಸಗಳ ಮಿತಿ ಸಿಗುತ್ತದೆ. ಅಂದರೆ, ಒಮ್ಮೆ ಹಣ ಪಾವತಿಸಿದರೆ, ಒಂದು ವರ್ಷ ಟೋಲ್ ಚಿಂತೆ ಇಲ್ಲ. ವಿಶೇಷವಾಗಿ ತಮ್ಮ ಮನೆ ಅಥವಾ ಕೆಲಸದ ಸ್ಥಳದಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಟೋಲ್ ಗೇಟುಗಳನ್ನು ನಿಯಮಿತವಾಗಿ ಮೀರಿ ಸಾಗುವವರಿಗಿದು ಖುಷಿ ತರೋ ಸುದ್ದಿಯಾಗಿದೆ.
ಫಾಸ್ಟ್ಯಾಗ್ ವಾರ್ಷಿಕ ಪಾಸ್‌ನಿಂದ ನಿಮಗೆ ಏನು ಲಾಭ?
- ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ.
- ಪ್ರತಿ ಪ್ರವಾಸದಲ್ಲೂ ಹಣ ಕಡಿತಗೊಳ್ಳುವ ಚಿಂತೆ ಇಲ್ಲ.
- ಪ್ರತಿದಿನ ಅಥವಾ ಆಗಾಗ್ಗೆ ಟೋಲ್ ಮೂಲಕ ಹೋಗುವವರಿಗೆ ಇದು ಸೂಪರ್ ಸೇವರ್ ಪ್ಲಾನ್.
- ಪ್ರಯಾಣದ ಸಮಯದಲ್ಲಿ ಟೋಲ್‌ಗೆ ಸಂಬಂಧಿಸಿದ ಮಾನಸಿಕ ಒತ್ತಡವೂ ಇಲ್ಲ.
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಹೇಗೆ ಪಡೆಯುವುದು?
ಈ ಪಾಸ್ ಪಡೆಯಲು, ಸರ್ಕಾರವು ಶೀಘ್ರದಲ್ಲೇ NHAI ವೆಬ್‌ಸೈಟ್ ಮತ್ತು ಹೈವೇ ಟ್ರಾವೆಲ್ ಆ್ಯಪ್‌ನಲ್ಲಿ ಆಯ್ಕೆಯನ್ನು ಪ್ರಾರಂಭಿಸುತ್ತದೆ. ಅಲ್ಲಿ ಲಾಗಿನ್ ಮಾಡಿ, ವಾಹನದ ವಿವರಗಳನ್ನು ಭರ್ತಿ ಮಾಡಿ ಮತ್ತು ₹3,000 ಪಾವತಿಸುವ ಮೂಲಕ ಮನೆಯಲ್ಲಿಯೇ ಇ-ಪಾಸ್ ಪಡೆಯಬಹುದು.
ಫಾಸ್ಟ್ಯಾಗ್ ವಾರ್ಷಿಕ ಪಾಸ್ ಎಲ್ಲಿ ಮಾನ್ಯವಾಗಿರುತ್ತದೆ?
ಈ ಪಾಸ್ ದೇಶಾದ್ಯಂತದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಮಾನ್ಯವಾಗಿರುತ್ತದೆ. ನೀವು ದೆಹಲಿಯಿಂದ ಜೈಪುರಕ್ಕೆ ಹೋಗುತ್ತಿರಲಿ ಅಥವಾ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿರಲಿ, ಪ್ರತಿ ರಾಷ್ಟ್ರೀಯ ಟೋಲ್‌ನಲ್ಲಿಯೂ ಇದು ಕಾರ್ಯನಿರ್ವಹಿಸುತ್ತದೆ. ಆದರೆ ರಾಜ್ಯ ಹೆದ್ದಾರಿಗಳು ಮತ್ತು ಖಾಸಗಿ ಟೋಲ್‌ಗಳಲ್ಲಿ ಈ ಪಾಸ್ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಿ.
ಇದು ಖಾಸಗಿ ವಾಹನಕ್ಕೆ ಮಾತ್ರ ಅನ್ವಯ; ವಾಣಿಜ್ಯ ಸೇವೆ ವಾಹನಕ್ಕಿಲ್ಲ ಸೌಲಭ್ಯ:
ಹೊಸ ಯೋಜನೆಯ ಪ್ರಕಾರ, ₹3,000 ಪಾವತಿಸಿ ವಾರ್ಷಿಕ ಪಾಸ್ ಪಡೆಯಬಹುದು. ಈ ಪಾಸ್ ಒಂದು ವರ್ಷ ಅಥವಾ 200 ಬಾರಿ ಪ್ರಯಾಣದವರೆಗೆ ಮಾನ್ಯವಾಗಿರುತ್ತದೆ. ಇದರ ಮೂಲಕ ನೀವು ತಾವು ಇರುವಂತಹ ಊರಿನಿಂದ 60 ಕಿಮೀ ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿ ಅನೇಕ ಬಾರಿ ಪಾವತಿ ಮಾಡುವ ಅಗತ್ಯವಿಲ್ಲ.
ಈ ಸೌಲಭ್ಯವನ್ನು ಖಾಸಗಿ ಉಪಯೋಗದ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ನೀಡಲಾಗಿದೆ. ವಾಣಿಜ್ಯ ವಾಹನಗಳಿಗೆ ನೀಡುವುದಿಲ್ಲ. ಇದು ವಾಣಿಜ್ಯೇತರ ವಾಹನಗಳಿಗಾಗಿ ಮಾತ್ರ. ಈ ಪಾಸ್ ಅನ್ನು ಶೀಘ್ರದಲ್ಲೇ NHAI ಹಾಗೂ MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ, ಜೊತೆಗೆ 'ರಾಜ್‌ಮಾರ್ಗ್ ಯಾತ್ರಾ' (Rajmarg Yatra) ಅಪ್ಲಿಕೇಶನ್‌ನಲ್ಲಿ ಪಡೆಯಬಹುದಾಗಿದೆ. ಡಿಜಿಟಲ್ ಫಾರ್ಮಾಟ್‌ನಲ್ಲಿಯೇ ಈ ಪಾಸ್ ಲಭ್ಯವಾಗಲಿದೆ.
ಫಾಸ್ಟ್ಯಾಗ್ ವಾರ್ಷಿಕ ಪಾಸ್: ಸರ್ಕಾರದ ಉದ್ದೇಶವೇನು?
ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು. ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವುದು. ನಗದು ವ್ಯವಹಾರಗಳಿಂದ ಉಂಟಾಗುವ ಜಗಳಗಳನ್ನು ತಪ್ಪಿಸುವುದು. 60 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಪರಿಹಾರ. ಹೆದ್ದಾರಿ ಪ್ರಯಾಣವನ್ನು ವೇಗವಾಗಿ, ಸುಲಭವಾಗಿ ಮತ್ತು ಆರ್ಥಿಕವಾಗಿ ಮಾಡುವುದು.