ಕೆಲವರೇಕೆ ಸದಾ ಹ್ಯಾಪು ಮೊರೆ ಹಾಕಿಕೊಂಡಿರ್ತಾರೆ?, ಇದರ ಹಿಂದಿದೆ ಮಾನಸಿಕ ಕಾರಣಗಳು
Psychology of Emotions: ನಮ್ಮ ಸುತ್ತಮುತ್ತ ಇರುವ ಕೆಲವರ ಮುಖದಲ್ಲಿ ನಗುವಿಗಿಂತ ಹೆಚ್ಚಾಗಿ ದುಃಖವೇ ಕಾಣಿಸುತ್ತದೆ. ಅವರನ್ನು ನೋಡಿದಾಗ "ಇವರಿಗೇನಾಗಿದೆ"? "ಯಾಕೆ ಹೀಗಿದ್ದಾರೆ"? ಅನಿಸುತ್ತದೆ. ಆದರೆ ಆ ಅಳುಮುಂಜಿಯ ಮುಖದ ಹಿಂದೆ ನಿಜವಾಗಿಯೂ ಏನಿದೆ? ಮನೋವಿಜ್ಞಾನ ಏನು ಹೇಳುತ್ತದೆಂದು ಇಲ್ಲಿ ನೋಡೋಣ.

ಮನಸ್ಸಿನಲ್ಲಿ ನಡೆಯುವ ಭಾವನೆಗಳೇ ಮುಖದಲ್ಲಿ ವ್ಯಕ್ತ
ಕೆಲವರು ಯಾವಾಗಲೂ ಅಳುಮುಂಜಿ ಮುಖ ಮಾಡಿಕೊಂಡು ಒಂದು ರೀತಿಯ ದುಃಖ ಅಥವಾ ಭಾರವನ್ನು ಹೊತ್ತಂತೆ ಕಾಣುತ್ತಾರೆ. ಇವರನ್ನು ನೋಡಿದಾಗ, 'ಇಷ್ಟೊಂದು ನೆಗೆಟಿವ್ ಯಾಕೆ ಇವರು?' ಎಂಬ ಅನುಮಾನ ಬರುತ್ತದೆ. ಆದರೆ ಮನೋವಿಜ್ಞಾನದ ಪ್ರಕಾರ, ಇದು ಕೇವಲ ಅಭ್ಯಾಸ ಅಥವಾ ನಟನೆಯಲ್ಲ. ಇದರ ಹಿಂದೆ ಆಳವಾದ ಮಾನಸಿಕ ಕಾರಣಗಳಿವೆ. ವ್ಯಕ್ತಿಯ ಮನಸ್ಸಿನಲ್ಲಿ ನಡೆಯುವ ಭಾವನೆಗಳೇ ಮುಖದಲ್ಲಿ ವ್ಯಕ್ತವಾಗುತ್ತವೆ.
ನೋವನ್ನು ಒಳಗೆ ಬಚ್ಚಿಟ್ಟಾಗ
ಇಂತಹ ಮನಸ್ಥಿತಿ ರೂಪಗೊಳ್ಳಲು ಬಾಲ್ಯದ ಅನುಭವಗಳು ಮುಖ್ಯ. ಪ್ರೀತಿ, ಭದ್ರತೆ ಇಲ್ಲದ ಕುಟುಂಬದಲ್ಲಿ ಬೆಳೆದ ಮಕ್ಕಳು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದಿಲ್ಲ. ಆಗಾಗ ಬೈಗುಳ, ಟೀಕೆ, ನಿರ್ಲಕ್ಷ್ಯ ಎದುರಾದಾಗ ಅವರು ನೋವನ್ನು ಒಳಗೆ ಬಚ್ಚಿಡಲು ಕಲಿಯುತ್ತಾರೆ. ಈ ನೋವು ಶಾಶ್ವತ ದುಃಖವಾಗಿ ಅಳುಮುಂಜಿಯಂತೆ ಕಾಣಿಸುತ್ತದೆ.
'ನಾನು ಯಾರಿಗೂ ಬೇಡ' ಎಂಬ ಭಾವನೆ
ಇಂಥವರು ಸಾಮಾನ್ಯವಾಗಿ ಭವಿಷ್ಯದ ಬಗ್ಗೆ ಭಯ ಹೊಂದಿರುತ್ತಾರೆ. ಕೆಟ್ಟದ್ದೇ ಆಗುತ್ತದೆಂದು ಯೋಚಿಸುತ್ತಾರೆ. ಸಣ್ಣ ಸಮಸ್ಯೆಯೂ ದೊಡ್ಡ ಭಾರವೆನಿಸುತ್ತದೆ. ಇದರಿಂದ ಮುಖದಲ್ಲಿ ಆಯಾಸ, ದುಃಖ ಕಾಣಿಸುತ್ತದೆ. ಹಿಂದಿನ ನೋವು, ಅವಮಾನ, ನಿರಾಸೆಗಳು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತವೆ. 'ನಾನು ಯಾರಿಗೂ ಬೇಡ' ಎಂಬ ಭಾವನೆ ಇವರಲ್ಲಿ ಬಲವಾಗಿರುತ್ತದೆ.
ದುಃಖವನ್ನು ಮುಚ್ಚಿಡಲು ಸಾಧ್ಯವಾಗಲ್ಲ
ಕೆಲವರು ಸಹಜವಾಗಿಯೇ ತುಂಬಾ ಸೂಕ್ಷ್ಮ ಮನಸ್ಸಿನವರು. ಇತರರ ಮಾತು, ನೋಟ, ನಡವಳಿಕೆಗಳು ಇವರ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಬೇರೆಯವರು ಗಮನಿಸದ ವಿಷಯಗಳೂ ಇವರಿಗೆ ನೋವು ಕೊಡುತ್ತವೆ. ಭಾವನೆಗಳಿಗೆ ಹೆಚ್ಚು ಸ್ಪಂದಿಸುವ ಇವರು ತಮ್ಮ ದುಃಖವನ್ನು ಮುಚ್ಚಿಡಲು ಸಾಧ್ಯವಾಗದೆ ಅದು ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಮೌನ ಹೋರಾಟದಿಂದ ದಣಿಯುತ್ತೆ ಮನಸ್ಸು
ಎಲ್ಲರ ಮುಂದೆ 'ಅಳಬಾರದು' ಎಂಬ ಭಾವನೆ ಬಲವಾಗಿರುವುದರಿಂದ ಅನೇಕರು ತಮ್ಮ ನೋವನ್ನು ವ್ಯಕ್ತಪಡಿಸುವುದಿಲ್ಲ. ನೋವನ್ನು ಹೇಳಿಕೊಳ್ಳುವುದು ದೌರ್ಬಲ್ಯವೆಂದು ಭಾವಿಸಿ ಒಳಗೆ ಕುಗ್ಗುತ್ತಾರೆ. ಈ ಮೌನ ಹೋರಾಟವು ಮನಸ್ಸನ್ನು ದಣಿಸುತ್ತದೆ. ಆ ದಣಿವೇ ಮುಖದಲ್ಲಿ ದುಃಖ ಮತ್ತು ನಿರಾಶೆಯಾಗಿ ಕಾಣಿಸುತ್ತದೆ.
ತನ್ನನ್ನು ತಾನು ರಕ್ಷಿಸಿಕೊಳ್ಳುವ ಒಂದು ವಿಧಾನ
ಮನೋವಿಜ್ಞಾನಿಗಳ ಪ್ರಕಾರ, ಕೆಲವರು ಉದ್ದೇಶಪೂರ್ವಕವಾಗಿ ದುಃಖದಿಂದ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ ಕಂಡರೆ ಇತರರು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ, ಪ್ರಶ್ನೆ ಕೇಳುವುದಿಲ್ಲ, ಜವಾಬ್ದಾರಿ ನೀಡುವುದಿಲ್ಲ. ಇದು ತನ್ನನ್ನು ತಾನು ರಕ್ಷಿಸಿಕೊಳ್ಳುವ ಒಂದು ವಿಧಾನ. ಆದರೆ ಇದರಿಂದ ಒಂಟಿತನ ಹೆಚ್ಚಿ, ಸಂಬಂಧಗಳು ದೂರವಾಗುತ್ತವೆ.
ಅಗತ್ಯವಿದ್ದರೆ ಮನೋವಿಜ್ಞಾನಿಗಳ ಸಹಾಯ ಪಡೆಯಿರಿ
ಈ ಮನಸ್ಥಿತಿಯಿಂದ ಹೊರಬರಲು, ಮೊದಲು ತಮ್ಮ ಭಾವನೆಗಳನ್ನು ಒಪ್ಪಿಕೊಳ್ಳುವುದು ಮುಖ್ಯ. ನಂಬಿಕಸ್ಥರೊಂದಿಗೆ ಮಾತನಾಡುವುದರಿಂದ ಮನಸ್ಸು ಹಗುರವಾಗುತ್ತದೆ. ಅಗತ್ಯವಿದ್ದರೆ ಮನೋವಿಜ್ಞಾನಿಗಳ ಸಹಾಯ ಪಡೆಯುವುದು ಉತ್ತಮ. ಉತ್ತಮ ನಿದ್ರೆ, ದೈಹಿಕ ಚಟುವಟಿಕೆ, ಇಷ್ಟದ ಕೆಲಸ ಮಾಡುವುದು ಭಾವನಾತ್ಮಕ ಸಮತೋಲನವನ್ನು ಸುಧಾರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

