ವಾಯುಮಾಲಿನ್ಯ ಶ್ವಾಸಕೋಶದ ಶತ್ರು ಮಾತ್ರವಲ್ಲ, ಈ ರೋಗಗಳಿಗೂ ಕಾರಣವಾಗುತ್ತೆ
ವಾಯು ಮಾಲಿನ್ಯದಿಂದ ಇಡೀ ದೇಶವೇ ನಲುಗುತ್ತಿದೆ. ನಗರಗಳಲ್ಲಿನ ವಿಷಕಾರಿ ಗಾಳಿಯು ಅನೇಕ ರೀತಿಯ ರೋಗಗಳಿಗೆ ಕಾರಣವಾಗುತ್ತಿದೆ. ವಾಯುಮಾಲಿನ್ಯವು ಸಾಮಾನ್ಯವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಅನೇಕ ರೋಗಗಳಿಗೆ ಕಾರಣವಾಗುತ್ತದೆ, ಅಷ್ಟೇ ಅಲ್ಲ ಇದನ್ನು ಹೊರತುಪಡಿಸಿ ಇದು ನಮ್ಮ ಮೆದುಳು, ಹೃದಯ, ಕಣ್ಣುಗಳು, ಚರ್ಮ ಮತ್ತು ಅನೇಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.
ವಾಯುಮಾಲಿನ್ಯವು (Air pollution)ಪರಿಸರಕ್ಕೆ ಪ್ರಮುಖ ಅಪಾಯದ ಅಂಶವಾಗಿ ಉಳಿದಿದೆ. ಇದು ಇತ್ತೀಚಿನ ದಶಕಗಳಲ್ಲಿ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದೆ. ಶ್ವಾಸಕೋಶದಿಂದ ಇತರ ಅಂಗಗಳವರೆಗೆ ಮಾನವನ ಆರೋಗ್ಯದ ಮೇಲೆ ಹೆಚ್ಚಿನ ವಿಷಕಾರಿ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ವಾಯುಮಾಲಿನ್ಯದಿಂದ ಉಂಟಾಗುವ ರೋಗಗಳಿಂದಾಗಿ ಪ್ರತಿ ವರ್ಷ ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಯುಮಾಲಿನ್ಯವು ಶ್ವಾಸಕೋಶದ ವೈಫಲ್ಯವನ್ನು ಮಾತ್ರವಲ್ಲದೆ, ಪಾರ್ಶ್ವವಾಯು, ಹೃದ್ರೋಗ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಉಸಿರಾಟದ ಕಾಯಿಲೆಗಳನ್ನು ಸಹ ಉಂಟುಮಾಡುತ್ತಿದೆ. ಇದರಿಂದ ಇನ್ನೇನು ಪರಿಣಾಮಗಳಿವೆ ನೋಡೋಣ.
ವಿಷಕಾರಿ ಗಾಳಿಯು ಅನೇಕ ರೋಗಗಳಿಗೆ ಕಾರಣವಾಗುತ್ತಿದೆ
ವಾಯುಮಾಲಿನ್ಯವು ಶ್ವಾಸಕೋಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಈ ಹಾನಿಯು ಶ್ವಾಸಕೋಶಗಳಿಗೆ ಸೀಮಿತವಾಗಿಲ್ಲ. ಮಾಲಿನ್ಯವು ನಮ್ಮ ಹೃದಯ(Heart), ಮೆದುಳು, ಕಣ್ಣುಗಳು ಮತ್ತು ಚರ್ಮದ ಆರೋಗ್ಯದ ಜೊತೆಗೆ ಸಂಧಿವಾತದಂತಹ ಆಟೋಇಮ್ಯೂನ್ ರೋಗಗಳಿಗೆ ಕಾರಣವಾಗಬಹುದು.
ಈ ರೋಗಗಳು ವಾಯುಮಾಲಿನ್ಯದಿಂದ ಉಂಟಾಗುತ್ತವೆ
ಸಂಧಿವಾತ ಸಮಸ್ಯೆ
ವಾಯುಮಾಲಿನ್ಯ ಮತ್ತು ಆಟೋಇಮ್ಯೂನ್(Auto immune) ರೋಗಗಳ ನಡುವೆ ಸಂಬಂಧವಿದೆ ಎಂದು ಸಂಶೋಧನೆ ಕಂಡುಕೊಂಡಿದೆ. ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಸಂಧಿವಾತದ ರೋಗಿಗಳಲ್ಲಿ ಉರಿಯೂತದ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಮಾಲಿನ್ಯವು ಹೃದಯದ ಶತ್ರುವಾಗಿದೆ
ವಾಯುಮಾಲಿನ್ಯವು ನಿಮ್ಮ ಹೃದಯದ ಮೇಲೂ ಪರಿಣಾಮ ಬೀರುತ್ತೆ. ಕಲುಷಿತ ಗಾಳಿಯನ್ನು ಉಸಿರಾಡುವ ಮೂಲಕ, ವಾಯುಮಾಲಿನ್ಯದ ಕಣಗಳು ಶ್ವಾಸಕೋಶ(Lungs) ಮತ್ತು ಹೃದಯವನ್ನು ತಲುಪುವ ರಕ್ತಪ್ರವಾಹದ ಆಳಕ್ಕೆ ಹೋಗಬಹುದು. ಇದು ದೀರ್ಘಾವಧಿಯಲ್ಲಿ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ಮೆದುಳಿನ(Brain) ಮೇಲೂ ಪರಿಣಾಮ ಬೀರುತ್ತದೆ
ಗಾಳಿಯಲ್ಲಿರುವ ಮಾಲಿನ್ಯದಿಂದಾಗಿ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ವಾಯುಮಾಲಿನ್ಯವು ವಯಸ್ಸಾದವರ ಮೆದುಳಿನ ಮೇಲೆ, ವಿಶೇಷವಾಗಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅನೇಕ ಜನರು ಮಾತನಾಡಲು ತಮ್ಮ ಬಾಯಿಯಿಂದ ಪದವನ್ನು ಹೊರತೆಗೆಯಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಇಷ್ಟೇ ಅಲ್ಲ, ಸುಲಭವಾದ ಗಣಿತದ ಪ್ರಶ್ನೆಗಳನ್ನು ಪರಿಹರಿಸಲು ಸಹ ಅವರಿಗೆ ಕಷ್ಟವಾಗುತ್ತೆ.
ಚರ್ಮದ(Skin) ಮೇಲೆ ಮಾಲಿನ್ಯದ ಪರಿಣಾಮಗಳು
ಕಲುಷಿತ ಗಾಳಿಯು ಚರ್ಮದ ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ಅದನ್ನು ಒಣಗುವಂತೆ ಮಾಡುತ್ತದೆ, ಇದು ಚರ್ಮದ ಕಿರಿಕಿರಿ, ಕೆಂಪಾಗುವಿಕೆ ಮತ್ತು ಎಸ್ಜಿಮಾದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಲುಷಿತ ಗಾಳಿಯಲ್ಲಿರುವ ಕಣಗಳಿಂದಾಗಿ ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಗರ್ಭಾವಸ್ಥೆಯಲ್ಲಿ(Pregancy) ಮಾಲಿನ್ಯದ ಪರಿಣಾಮಗಳು
ಗರ್ಭಾವಸ್ಥೆಯಲ್ಲಿ ವಾಯುಮಾಲಿನ್ಯವು ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಲ್ಲಿ ಅಕಾಲಿಕ ಜನನ ಮತ್ತು ಕಡಿಮೆ ಜನನ ತೂಕ ಮತ್ತು ನಿಶ್ಚಲ ಜನನದ ಅಪಾಯವೂ ಹೆಚ್ಚಾಗುತ್ತದೆ. ಆದುದರಿಂದ ವಾಯು ಮಾಲಿನ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.
ಕಣ್ಣುಗಳಿಗೆ(Eyes) ಸಂಬಂಧಿಸಿದ ಸಮಸ್ಯೆಗಳು
ಮಾಲಿನ್ಯದ ಮಟ್ಟವು ಹೆಚ್ಚಾದಂತೆ, ಅನೇಕ ಜನರು ಕಣ್ಣಿನ ಸಮಸ್ಯೆ ಎದುರಿಸುತ್ತಾರೆ. ಅದರಲ್ಲೂ ಕಣ್ಣುಗಳ ಕಿರಿಕಿರಿ, ಕೆಂಪಾಗುವಿಕೆ, ಶುಷ್ಕತೆ ಅಥವಾ ಕಣ್ಣುಗಳಲ್ಲಿ ನೀರಿನ ಸಮಸ್ಯೆ ಮೊದಲಾದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ನಿಮಗೂ ಈ ರೀತಿಯಾದರೆ, ವೈದ್ಯರನ್ನು ಸಂಪರ್ಕಿಸಿ.