ಹಸಿ ನೂಡಲ್ಸ್ ತಿಂದು 13 ವರ್ಷದ ಬಾಲಕ ಸಾವು, ಇದು ತುಂಬಾ ಡೇಂಜರ್ ಅಂತೆ!
ಈ ಘಟನೆಯ ನಂತರ ಹಸಿ ನೂಡಲ್ಸ್ ತಿನ್ನುವುದು ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂಬ ಪ್ರಶ್ನೆ ಉದ್ಭವಿಸಿದೆ.

ಹಸಿಯಾಗಿ ತಿನ್ನುವುದು ಎಷ್ಟು ಡೇಂಜರ್?
ಬಿಸಿನೀರಿನಲ್ಲಿ ಸೇರಿಸಿ ಬೇಯಿಸುವ ಇನ್ಸ್ಟೆಂಟ್ ನೂಡಲ್ಸ್ ಬಗ್ಗೆ ಈಗ ತಾನೇ ಹುಟ್ಟಿದ ಮಗುವಿಗೂ ಗೊತ್ತಿರುತ್ತದೆ ಬಿಡಿ. ಅಷ್ಟು ಫೇಮಸ್ ಅದು. ಪ್ರಯಾಣದ ಸಮಯದಲ್ಲಿ ಜನರು ಹೆಚ್ಚಾಗಿ ಇಂತಹ ನೂಡಲ್ಸ್ ಬಳಸುತ್ತಾರೆ. ಮಕ್ಕಳಿಗಂತೂ ಫೇವರಿಟ್. ಆದರೆ ಈ ನೂಡಲ್ಸ್ ಅನ್ನು ಹಸಿಯಾಗಿ ತಿನ್ನುವುದು ಎಷ್ಟು ಡೇಂಜರ್ ಎಂದು ನಿಮಗೆ ತಿಳಿದಿದೆಯೇ?.
ಆರೋಗ್ಯಕ್ಕೆ ಮಾರಕ
ಇತ್ತೀಚೆಗೆ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈಜಿಪ್ಟ್‌ನ ಕೈರೋದಲ್ಲಿ 13 ವರ್ಷದ ಬಾಲಕನೊಬ್ಬ ಬ್ರೇಕ್‌ಫಾಸ್ಟ್‌ಗೆಂದು 3 ಪ್ಯಾಕೆಟ್ ಇನ್ಸ್ಟೆಂಟ್ ನೂಡಲ್ಸ್ ತಿಂದ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾನೆ. ನಂತರ ಹಸಿ ನೂಡಲ್ಸ್ ತಿನ್ನುವುದು ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂಬ ಪ್ರಶ್ನೆ ಉದ್ಭವಿಸಿದೆ.
ಏನಾಯಿತು?
ವರದಿಯ ಪ್ರಕಾರ, ಬಾಲಕನು ಹೆಚ್ಚಿನ ಪ್ರಮಾಣದಲ್ಲಿ ಹಸಿ ನೂಡಲ್ಸ್ ತಿಂದಿದ್ದರಿಂದ ಜೀರ್ಣಕ್ರಿಯೆಯ ತೊಂದರೆಗಳು ಉಂಟಾಗಿದ್ದವು. ಒಣ ನೂಡಲ್ಸ್ ತಿನ್ನುವುದರಿಂದ ನಿರ್ಜಲೀಕರಣದ ಸಮಸ್ಯೆ ಹೆಚ್ಚಾಯಿತು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಹೊಂದಿರುವ ನೂಡಲ್ಸ್ ತಿನ್ನುವುದರಿಂದ ಹೃದಯದ ಮೇಲೆ ನೇರ ಪರಿಣಾಮ ಬೀರಿತು. ಬಾಲಕನಿಗೆ ತೀವ್ರವಾದ ಹೊಟ್ಟೆ ನೋವು ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು, ನಂತರ ಅವನು ಸಾವನ್ನಪ್ಪಿದನು.
ಹಸಿ ನೂಡಲ್ಸ್ ತಿನ್ನುವುದರಿಂದ ಆಗುವ ಅನಾನುಕೂಲಗಳೇನು?
ಇನ್ಸ್ಟೆಂಟ್ ನೂಡಲ್ಸ್ ನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದ್ದು, ಇದು ನೇರವಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಸೋಡಿಯಂ ಅಂಶವಿರುವ ನೂಡಲ್ಸ್ ತಿನ್ನುವುದರಿಂದ ರಕ್ತದೊತ್ತಡ ಹಠಾತ್ತನೆ ಹೆಚ್ಚಾಗುತ್ತದೆ, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಒಬ್ಬರು 2000 ಮಿಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು, ಆದರೆ ಹಸಿ ನೂಡಲ್ಸ್ ನಲ್ಲಿ 1829 ಮಿಗ್ರಾಂ ಸೋಡಿಯಂ ಇರುತ್ತದೆ, ಇದು ಸಾಕಷ್ಟು ಹೆಚ್ಚು.
ಹಸಿ ನೂಡಲ್ಸ್‌ನಿಂದ ನಿರ್ಜಲೀಕರಣ
ಇನ್ಸ್ಟೆಂಟ್ ನೂಡಲ್ಸ್ ನಲ್ಲಿ ಫೈಬರ್ ಕೂಡ ಕಡಿಮೆ ಇರುವುದರಿಂದ ಟೈಪ್ 2 ಮಧುಮೇಹ, ಗುದನಾಳದ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಹಸಿ ನೂಡಲ್ಸ್ ಜೀರ್ಣಿಸಿಕೊಳ್ಳಲು ಕಷ್ಟ, ಇದು ಕರುಳಿನ ಅಡಚಣೆಗೂ ಕಾರಣವಾಗಬಹುದು. ಜೀರ್ಣಕ್ರಿಯೆಯಿಂದ ನೀರನ್ನು ಎಳೆಯುವ ಮೂಲಕ ಹಸಿ ನೂಡಲ್ಸ್ ನಿರ್ಜಲೀಕರಣಕ್ಕೆ ಕಾರಣವಾಗಬಹುದು.
MSG ಸೇವನೆಯಿಂದ ಉಂಟಾಗುವ ತೊಂದರೆಗಳು
ಇನ್ಸ್ಟೆಂಟ್ ನೂಡಲ್ಸ್ MSG ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ಸಾಮಾನ್ಯವಾಗಿ ಅನೇಕ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಕಂಡುಬರುತ್ತದೆ. ಈ ಸಂಯುಕ್ತವು ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುವ MSG ಅನ್ನು FDA ಸೇವನೆಗೆ ಅನುಮೋದಿಸಿದೆ. ಆದರೂ ಇದರ ಅತಿಯಾದ ಸೇವನೆಯು ದೇಹದ ಮೇಲೆ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. MSG ಸೇವಿಸಿದ ನಂತರ ತಲೆನೋವು, ವಾಕರಿಕೆ, ಅಧಿಕ ರಕ್ತದೊತ್ತಡ, ದೌರ್ಬಲ್ಯ, ಸ್ನಾಯುಗಳ ಬಿಗಿತ, ಎದೆ ನೋವು, ತ್ವರಿತ ಹೃದಯ ಬಡಿತ ಮತ್ತು ಚರ್ಮದ ಕೆಂಪು ಬಣ್ಣದಂತಹ ಲಕ್ಷಣಗಳು ಕಂಡುಬರುತ್ತವೆ ಎಂದು ಕೆಲವು ವರದಿಗಳು ಸೂಚಿಸುತ್ತವೆ.

