ರುಬ್ಬೋ ಜಂಜಾಟವಿಲ್ಲ, ಉದ್ದು ಬೇಡ; ತುಪ್ಪದಲ್ಲಿ ಅದ್ದಿ ತಿದ್ದಂತ ರುಚಿಯ ಇಡ್ಲಿ ರೆಸಿಪಿ
Breakfast Recipe: ಉದ್ದಿನಬೇಳೆ ಬಳಸದೆ, ರುಬ್ಬುವ ಜಂಜಾಟವಿಲ್ಲದೆ ರುಚಿಕರವಾದ ಇಡ್ಲಿ ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಮೃದುವಾದ, ತುಪ್ಪದಂತಹ ರುಚಿಯ ಇಡ್ಲಿಯನ್ನು ಸುಲಭವಾಗಿ ಮಾಡಬಹುದು.

ರುಬ್ಬುವ ಜಂಜಾಟವೇ ಇಲ್ಲ
ಬೆಳಗಿನ ತಿಂಡಿಗೆ ಇಡ್ಲಿ ಬೆಸ್ಟ್ ಅಂತಾನೇ ಹೇಳಬಹುದು. ನೀವು ಮಲ್ಲಿಗೆ, ರವೆ, ತಟ್ಟೆ ಇಡ್ಲಿಗಳನ್ನು ತಿಂದಿರಬಹುದು. ಇಂದು ನಾವು ನಿಮಗೆ ರುಚಿಯಾದ ತುಪ್ಪದಲ್ಲಿ ಅದ್ದಿ ತಿದ್ದಂತಹ ರುಚಿ ನೀಡುವ ಇಡ್ಲಿ ರೆಸಿಪಿ ಹೇಳುತ್ತಿದ್ದೇವೆ. ಈ ಇಡ್ಲಿ ಮಾಡಲು ಉದ್ದಿನಬೇಳೆ ಬೇಕಾಗಲ್ಲ. ಹಾಗೆಯೇ ರುಬ್ಬುವ ಜಂಜಾಟವೂ ಈ ಇಡ್ಲಿ ಮಾಡುವ ವಿಧಾನದಲ್ಲಿ ಇಲ್ಲ.
ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು
ನೈಲಾನ್ ಸಬ್ಬಕ್ಕಿ: ಒಂದು ಕಪ್, ಇಡ್ಲಿ ರವೆ: ಒಂದು ಕಪ್, ಮೊಸರು ಅರ್ಧ ಲೀಟರ್, ಚಿಟಿಕೆಯಷ್ಟು ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು
ಇಡ್ಲಿ ಮಾಡುವ ವಿಧಾನ
ಮಾರುಕಟ್ಟೆಯಲ್ಲಿ ಎರಡು ಬಗೆಯ ಸಬ್ಬಕ್ಕಿ ಸಿಗುತ್ತವೆ. ನೀವು ಇಡ್ಲಿಗಾಗಿ ನೈಲಾನ್ ಸಬ್ಬಕ್ಕಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು. ಈ ನೈಲಾನ್ ಸಬ್ಬಕ್ಕಿ ನೋಡಲು ಸಕ್ಕರೆಯಂತೆ ಕಾಣಿಸುತ್ತದೆ. ಹಾಗಾಗಿ ಆಯ್ಕೆ ಮಾಡಿಕೊಳ್ಳುವಾಗ ಗೊಂದಲಕ್ಕೊಳಗಾಗಬೇಡಿ. ಈಗ ಒಂದು ಬೌಲ್‌ಗೆ ಸಬ್ಬಕ್ಕಿಯನ್ನು ಹಾಕಿ ನೀರಿನಲ್ಲಿ ಎರಡು ಬಾರಿ ತೊಳೆದುಕೊಳ್ಳಿ. ಮತ್ತೊಂದು ಬೌಲ್‌ನಲ್ಲಿ ಇಡ್ಲಿರವೆಯನ್ನು ನೀರಿನಲ್ಲಿ ಒಮ್ಮೆ ತೊಳೆದುಕೊಳ್ಳಿ.
ರವೆ, ಸಬ್ಬಕ್ಕಿಗೆ ಮೊಸರು ಹಾಕಿ ಮಿಕ್ಸ್ ಮಾಡಿ
ಈಗ ಮತ್ತೊಂದು ಪಾತ್ರೆಗೆ ತೊಳೆದುಕೊಂಡಿರುವ ಸಬ್ಬಕ್ಕಿ ಮತ್ತು ರವೆಯನ್ನು ಸೇರಿಸಿಕೊಳ್ಳಿ. ಈಗ ಇದಕ್ಕೆ ಅರ್ಧ ಲೀಟರ್‌ನಷ್ಟು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಶ್ರಣ ಮಾಡಿಕೊಂಡ ಬಳಿಕ ಪಾತ್ರೆಗೆ ಮುಚ್ಚಳ ಮುಚ್ಚಿ ಕನಿಷ್ಠ 7 ರಿಂದ 8 ಗಂಟೆ ಕಾಲ ಎತ್ತಿಟ್ಟುಕೊಳ್ಳಿ.
ಬೇಕಿಂಗ್ ಸೋಡಾ ಸ್ಕಿಪ್ ಮಾಡಬಹುದು
ಎಂಟು ಗಂಟೆ ನಂತ್ರ ಮುಚ್ಚಳ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆಯಷ್ಟು ಬೇಕಿಂಗ್ ಸೋಡಾಶ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಮೊಸರು ಹುಳಿಯಾಗಿರೋ ಕಾರಣ ಹಿಟ್ಟು ಚೆನ್ನಾಗಿಯೇ ಹುದುಗಿರುತ್ತದೆ. ಹಾಗಾಗಿ ಬೇಕಿಂಗ್ ಸೋಡಾ ಸ್ಕಿಪ್ ಮಾಡಬಹುದು. ಈಗ ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು ಬೇಯಿಸಿದ್ರೆ ರುಚಿಯಾದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. (ಬೇಕಿದ್ರೆ ನಿಮ್ಮಿಷ್ಟದ ತರಕಾರಿ ಸೇರಿಸಿಕೊಳ್ಳಬಹುದು)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

