ಸಾಫ್ಟ್ ಅಲ್ಲ, ಮಾಡಿಕೊಳ್ಳಿ ರುಚಿಯಾದ ಕ್ರಿಸ್ಪಿ ಇಡ್ಲಿ; ಬೆಳಗ್ಗೆಯೂ ಸೈ, ಸಂಜೆಗೂ ಓಕೆ
ಬೆಳಗಿನ ಮೃದು ಇಡ್ಲಿಗಿಂತ ವಿಭಿನ್ನವಾದ, ಸಂಜೆಯ ತಿಂಡಿಗೆ ಹೇಳಿ ಮಾಡಿಸಿದ ಗರಿಗರಿ ಇಡ್ಲಿ ರೆಸಿಪಿ ಇಲ್ಲಿದೆ. ರವೆ, ಮೊಸರು ಮತ್ತು ತರಕಾರಿಗಳನ್ನು ಬಳಸಿ, ಸ್ಯಾಂಡ್‌ವಿಚ್ ಮೇಕರ್‌ನಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಇಡ್ಲಿ ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುತ್ತದೆ.

ತರಕಾರಿ ಮಿಶ್ರಿತ ಕ್ರಿಸ್ಪಿಯಾದ ಇಡ್ಲಿ
ಇಡ್ಲಿ ಅಂದ್ರೆ ಮಲ್ಲಿಗೆಯಂತೆ ಸಾಫ್ಟ್ ಆಗಿರಬೇಕೆಂದು ಬಹುತೇಕರು ಹೇಳುತ್ತಾರೆ. ಬೆಳಗ್ಗೆ ತಿಂಡಿಗೆ ಸಾಫ್ಟ್ ಇಡ್ಲಿ ಮಾಡಿಕೊಂಡಿದ್ರೆ, ಸಂಜೆಗೆ ಕ್ರಿಸ್ಪಿಯಾದ ಇಡ್ಲಿ ಮಾಡಿಕೊಳ್ಳಬಹುದು. ಈ ಇಡ್ಲಿ ಹೊರಗಿನಿಂದ ಕ್ರಿಸ್ಪಿ ಒಳಗಡೆಯಿಂದ ಮೃದುವಾಗಿರುತ್ತದೆ. ರುಚಿಯಾದ ಕ್ರಿಸ್ಪಿ ಇಡ್ಲಿ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.
ಕ್ರಿಸ್ಪಿ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು
ರವೆ: 1 ಕಪ್, ಮೊಸರು: 1/4 ಕಪ್, ಚಿಕ್ಕ ಈರುಳ್ಳಿ: 1, ಹಸಿಮೆಣಸಿನಕಾಯಿ: 2, ಟೊಮೆಟೋ: 1, ಕ್ಯಾರಟ್: 1, ಚಾಟ್ ಮಸಾಲಾ: 1/2 ಟೀ ಸ್ಪೂನ್, ಇನೋ: 1/2 ಟೀ ಸ್ಪೂನ್, ಕೋತಂಬರಿ ಸೊಪ್ಪು, ಎಣ್ಣೆ: 2 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು
ಕ್ರಿಸ್ಪಿ ಇಡ್ಲಿ ಮಾಡುವ ವಿಧಾನ
ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೋ, ಕ್ಯಾರಟ್ ಮತ್ತು ಕೋತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. (ಬೇಕಿದ್ರೆ ನಿಮ್ಮಿಷ್ಟದ ತರಕಾರಿಯನ್ನು ಸೇರಿಸಿಕೊಳ್ಳಬಹುದು. ಉದಾಹರಣೆಗೆ ಕ್ಯಾಪ್ಸಿಕಂ, ಇತರೆ ಮೆಂತ್ಯೆ, ಸಬ್ಬಕ್ಕಿ ಸೊಪ್ಪು)
ತರಕಾರಿ, ರವೆ ಮತ್ತು ಮೊಸರು
ಈಗ ಒಂದು ಬೌಲ್‌ಗೆ ಕತ್ತರಿಸಿಕೊಂಡಿರುವ ತರಕಾರಿ, ರವೆ ಮತ್ತು ಮೊಸರನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಎತ್ತಿಟ್ಟುಕೊಳ್ಳಿ. ತದನಂತರ ಇನೋ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. (ಈ ವೇಳೆ ಬೇಕಿದ್ರೆ ಸಾಸವೆ-ಜೀರಿಗೆಯ ಒಗ್ಗರಣೆ ಹಾಕಿಕೊಳ್ಳಬಹುದು)
ಸ್ಯಾಂಡ್‌ವಿಚ್ ಮೇಕರ್
ತದನಂತರ ಸ್ಯಾಂಡ್‌ವಿಚ್ ಮೇಕರ್ ತೆಗೆದುಕೊಂಡು ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಮಾಡಿಕೊಂಡಿರುವ ಮಿಶ್ರಣ ಹಾಕಿ, ಕಡಿಮೆ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿಕೊಂಡು ತೆಗೆದ್ರೆ ರುಚಿಯಾದ ಕ್ರಿಸ್ಪಿ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ತೆಂಗಿನಕಾಯಿ ಚಟ್ನಿ, ಟೊಮೆಟೋ ಸಾಸ್ ಜೊತೆಯಲ್ಲಿ ಕ್ರಿಸ್ಪಿ ಇಡ್ಲಿಗಳನ್ನು ಸವಿಯಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
