Idli Dosa chutney hacks: ಮನೆಯಲ್ಲಿ ಎಷ್ಟೇ ಚೆನ್ನಾಗಿ ಟಿಫನ್ ಮಾಡಿದರೂ ಹೋಟೆಲ್ ಅಥವಾ ಟಿಫನ್ ಸೆಂಟರ್‌ಗಳಲ್ಲಿ ನೀಡುವ ಆ ತೆಳ್ಳನೆಯ ಚಟ್ನಿಯ ರುಚಿಯೇ ಬೇರೆ! ಇಡ್ಲಿ, ದೋಸೆಗಿಂತ ಹೆಚ್ಚಾಗಿ ಆ ಚಟ್ನಿಗಾಗಿಯೇ ಹೋಟೆಲ್‌ಗೆ ಹೋಗುವವರಿದ್ದಾರೆ. ಅಂತಹ ಹೋಟೆಲ್ ಶೈಲಿಯ ಚಟ್ನಿಯ ಅಸಲಿ ರಹಸ್ಯ ಮತ್ತು ಅದಕ್ಕೆ ಬಳಸುವ ಆ ಎರಡು 'ಸೀಕ್ರೆಟ್' ಪದಾರ್ಥಗಳು ಯಾವುವು? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.
ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆ, ವಡೆ ಅಥವಾ ಉಪ್ಮಾ ಏನೇ ಇರಲಿ, ಅವುಗಳ ರುಚಿ ಹೆಚ್ಚುವುದೇ ಅದರ ಜೊತೆಗಿರುವ ಚಟ್ನಿಯಿಂದ. ನಾವು ಮನೆಯಲ್ಲಿ ಎಷ್ಟೇ ಚೆನ್ನಾಗಿ ಚಟ್ನಿ ಮಾಡಿದರೂ, ಹೋಟೆಲ್‌ಗಳಲ್ಲಿ ಅಥವಾ ರಸ್ತೆ ಬದಿಯ ಟಿಫನ್ ಸೆಂಟರ್‌ಗಳಲ್ಲಿ ನೀಡುವ ಆ ತೆಳ್ಳನೆಯ ಚಟ್ನಿಯ ರುಚಿ ಬರುವುದಿಲ್ಲ. ಅನೇಕರು ಇಡ್ಲಿಗಿಂತ ಆ ಚಟ್ನಿಗಾಗಿಯೇ ಹೋಟೆಲ್‌ಗೆ ಹೋಗುತ್ತಾರೆ. ಹೋಟೆಲ್‌ನವರು ಚಟ್ನಿಗೆ ಬಳಸುವ ಆ ಎರಡು ಸೀಕ್ರೆಟ್ ಪದಾರ್ಥಗಳು ಮತ್ತು ರುಚಿಕರ ಚಟ್ನಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಶೇಂಗಾ: 1 ಕಪ್
ಹುರಿಗಡಲೆ: 1 ಕಪ್
ಹಸಿಮೆಣಸಿನಕಾಯಿ:7-8 (ಖಾರಕ್ಕೆ ತಕ್ಕಂತೆ)
ಶುಂಠಿ: 1 ಇಂಚು
ಪುದೀನಾ ಮತ್ತು ಕರಿಬೇವು: ಸ್ವಲ್ಪ
ಜೀರಿಗೆ: 1/4 ಟೀಸ್ಪೂನ್
ಹುಣಸೆಹಣ್ಣು: ಸ್ವಲ್ಪ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ಸೀಕ್ರೆಟ್ ಪದಾರ್ಥಗಳು: ಒಂದು ಸಣ್ಣ ತುಂಡು ಹಸಿ ಈರುಳ್ಳಿ ಮತ್ತು ಒಂದು ಸಣ್ಣ ತುಂಡು ಬೆಲ್ಲ.
ತಯಾರಿಸುವ ವಿಧಾನ
*ಮೊದಲು ಬಾಂಡ್ಲಿಯಲ್ಲಿ ಒಂದು ಕಪ್ ಶೇಂಗಾವನ್ನು ಸಣ್ಣ ಉರಿಯಲ್ಲಿ (Low to Medium Flame) ಚೆನ್ನಾಗಿ ಹುರಿಯಿರಿ. ಜೋರು ಉರಿಯಲ್ಲಿ ಹುರಿದರೆ ಶೇಂಗಾ ಮೇಲೆ ಮಾತ್ರ ಬೆಂದಿರುತ್ತದೆ, ಒಳಗೆ ಹಸಿಯಾಗಿದ್ದು ಚಟ್ನಿ ಹಸಿ ವಾಸನೆ ಬರುತ್ತದೆ. ಹುರಿದ ಶೇಂಗಾವನ್ನು ತಣ್ಣಗಾಗಲು ಬಿಡಿ.
*ಅದೇ ಬಾಂಡ್ಲಿಗೆ ಒಂದು ಚಮಚ ಎಣ್ಣೆ ಹಾಕಿ. ಹಸಿಮೆಣಸಿನಕಾಯಿ, ಶುಂಠಿ ಚೂರುಗಳನ್ನು ಹುರಿಯಿರಿ. ನಂತರ ಅದಕ್ಕೆ ತಾಜಾ ಪುದೀನಾ, ಸ್ವಲ್ಪ ಕರಿಬೇವು ಮತ್ತು ಜೀರಿಗೆ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಹುರಿಗಡಲೆ ಮತ್ತು ಸ್ವಲ್ಪ ಹುಣಸೆಹಣ್ಣು ಸೇರಿಸಿ ಅರ್ಧ ನಿಮಿಷ ಬಾಡಿಸಿ ಸ್ಟೌವ್ ಆಫ್ ಮಾಡಿ.
*ಹುರಿದ ಶೇಂಗಾ ಸಿಪ್ಪೆ ತೆಗೆದ ನಂತರ ಅಡಿಯಲ್ಲಿ ಉಳಿಯುವ ಸಣ್ಣ ಪುಡಿ ಅಥವಾ ನೂಕನ್ನು ಸಂಪೂರ್ಣವಾಗಿ ತೆಗೆಯಿರಿ. ಇಲ್ಲದಿದ್ದರೆ ಚಟ್ನಿ ಸ್ವಲ್ಪ ಕಹಿ ಬರುವ ಸಾಧ್ಯತೆ ಇರುತ್ತದೆ.
*ಈಗ ಮಿಕ್ಸಿ ಜಾರ್‌ಗೆ ಶೇಂಗಾ, ಹುರಿದ ಮೆಣಸಿನಕಾಯಿ ಮಿಶ್ರಣ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
*ಇಲ್ಲಿ ಒಂದು ಸಣ್ಣ ತುಂಡು ಹಸಿ ಈರುಳ್ಳಿ ಮತ್ತು ಒಂದು ಸಣ್ಣ ತುಂಡು ಬೆಲ್ಲವನ್ನು ಸೇರಿಸಿ. ಬೆಲ್ಲ ಚಟ್ನಿಯನ್ನು ಸಿಹಿ ಮಾಡುವುದಿಲ್ಲ, ಬದಲಾಗಿ ಎಲ್ಲಾ ರುಚಿಗಳನ್ನು ಸಮತೋಲನಗೊಳಿಸುತ್ತದೆ. ಹೋಟೆಲ್‌ಗಳಲ್ಲಿ ಇದನ್ನು ಖಂಡಿತ ಬಳಸುತ್ತಾರೆ.
*ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕಾಂಡ ಸಮೇತ ಹಾಕಿ, ಬೇಕಾದಷ್ಟು ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಚಟ್ನಿ ಹೋಟೆಲ್ ಸ್ಟೈಲ್‌ನಲ್ಲಿ ಬರಬೇಕೆಂದರೆ ಸ್ವಲ್ಪ ತೆಳ್ಳಗೆ ಇರುವಂತೆ ನೀರು ಸೇರಿಸಿ.
ಒಗ್ಗರಣೆ
ಸಣ್ಣ ಪ್ಯಾನ್‌ನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಮೆಂತ್ಯ, ಕಡ್ಲೆಬೇಳೆ, ಜೀರಿಗೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಒಣಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಒಗ್ಗರಣೆಯನ್ನು ಚಟ್ನಿಯ ಮೇಲೆ ಸುರಿಯಿರಿ.
ಈಗ ನಿಮ್ಮ ಮುಂದೆ ಹೋಟೆಲ್ ಶೈಲಿಯ ಘಮಘಮಿಸುವ ತೆಳ್ಳನೆಯ ಚಟ್ನಿ ಸಿದ್ಧ!
ಗಮನಿಸಿ..
ರುಬ್ಬುವಾಗ ತಣ್ಣೀರು ಬಳಸಿ : ಮಿಕ್ಸಿ ಜಾರ್ ವೇಗವಾಗಿ ಸುತ್ತುವಾಗ ಶಾಖ (Heat) ಉತ್ಪತ್ತಿಯಾಗುತ್ತದೆ. ಇದರಿಂದ ಚಟ್ನಿಯ ಬಣ್ಣ ಮಸುಕಾಗಬಹುದು. ರುಬ್ಬುವಾಗ ಐಸ್ ವಾಟರ್ ಅಥವಾ ತಣ್ಣೀರು ಬಳಸಿದರೆ ಚಟ್ನಿ ದೀರ್ಘಕಾಲದವರೆಗೆ ಹಸಿರಾಗಿ ಮತ್ತು ತಾಜಾವಾಗಿ ಕಾಣುತ್ತದೆ.
ಒಗ್ಗರಣೆಗೆ ತೆಂಗಿನ ಎಣ್ಣೆ: ಹೋಟೆಲ್‌ನ ಚಟ್ನಿ ಘಮಘಮಿಸಲು ಕಾರಣ ಅವರು ನೀಡುವ ಒಗ್ಗರಣೆ. ಸಾಧ್ಯವಾದರೆ ಒಗ್ಗರಣೆಗೆ ತೆಂಗಿನ ಎಣ್ಣೆ (Coconut Oil) ಬಳಸಿ ನೋಡಿ, ಅದರ ರುಚಿಯೇ ಅದ್ಭುತವಾಗಿರುತ್ತದೆ.