- Home
- Life
- Health
- ಹಲವು ದಿನಗಳು ಉಪವಾಸ ಮಾಡಿದ ವ್ಯಕ್ತಿಗೆ ಎಳನೀರು, ಜ್ಯೂಸ್ ಕುಡಿಸುವುದೇಕೆ?ನೇರ ಊಟ ಮಾಡಿದ್ರೆ ಏನಾಗುತ್ತೆ?
ಹಲವು ದಿನಗಳು ಉಪವಾಸ ಮಾಡಿದ ವ್ಯಕ್ತಿಗೆ ಎಳನೀರು, ಜ್ಯೂಸ್ ಕುಡಿಸುವುದೇಕೆ?ನೇರ ಊಟ ಮಾಡಿದ್ರೆ ಏನಾಗುತ್ತೆ?
sonam wangchuk hunger strike at jantar mantar ಹಲವು ದಿನಗಳು ಉಪವಾಸ ಮಾಡಿದ ವ್ಯಕ್ತಿಗೆ ಉಪವಾಸ ಮುರಿಯುವ ವೇಳೆ ಊಟದ ಬದಲು ಎಳನೀರು, ಜ್ಯೂಸ್ ಕುಡಿಸುವುದೇಕೆ? ನೇರ ಊಟ ಮಾಡಿದ್ರೆ ಏನಾಗುತ್ತೆ ಅದರ ಹಿಂದಿನ ವೈದ್ಯಕೀಯ ಕಾರಣಗಳು ಏನು ಅನ್ನೋದು ಇಲ್ಲಿ ತಿಳಿಯೋಣ.

ಉಪವಾಸ ಮುಗಿದ ತಕ್ಷಣ ಊಟ ಮಾಡಬಾರದು ಯಾಕೆ?
ಕಳೆದ 22 ದಿನಗಳಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆ ಸದ್ಯ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೂ ಅವರು ಮೂರು ಷರತ್ತುಗಳನ್ನು ಮಂಡಿಸಿದ್ದು, ಸರ್ಕಾರ ಅವುಗಳಲ್ಲಿ ಒಂದನ್ನಾದರೂ ಒಪ್ಪಿಕೊಂಡರೆ ಇಂದು ಉಪವಾಸ ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ. ಕಳೆದ ಶನಿವಾರ ಹೈಕೋರ್ಟ್ ಆದೇಶ ಹಿನ್ನೆಲೆ ದೆಹಲಿ ಪೊಲೀಸರು ಅವರನ್ನು ಜಂತರ್ ಮಂತರ್ ನಿಂದ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು.
ಎಳನೀರು ಕುಡಿಯುವ ಮೂಲಕ ಉಪವಾಸ ಮುರಿಯುವುದೇಕೆ?
ಈ ಘಟನೆಯಿಂದ ಒಂದು ಪ್ರಶ್ನೆ ಎದ್ದಿದೆ. ಹಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಿರತ ವ್ಯಕ್ತಿಗೆ ಉಪವಾಸ ಕೈಬಿಡುವ ದಿನ ಊಟ ಕೊಡುವ ಬದಲು ತೆಂಗಿನ ನೀರು ಅಥವಾ ಎಳನೀರು, ತುಪ್ಪ, ಜ್ಯೂಸ್ ಕುಡಿಸುವ ಮೂಲಕ ಉಪವಾಸ ಮುರಿಯುವುದೇಕೆ? ಹಲವು ದಿನಗಳ ಕಾಲ ಹಸಿವಿನಿಂದ ವ್ಯಕ್ತಿಗೆ ಹೊಟ್ಟೆ ತುಂಬಾ ಊಟ ಮಾಡಿದ್ರೆ ಏನಾಗುತ್ತೆ? ದೇಹದ ಒಳಗಿನ ರಹಸ್ಯ ತಿಳಿದುಕೊಳ್ಳೋಣ.
ಏನಿದು ರಿಫೀಡಿಂಗ್ ಸಿಂಡ್ರೋಮ್?
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಹಲವು ದಿನಗಳವರೆಗೆ ಊಟ ನೀರಿಲ್ಲದ ಉಪವಾಸ ಇದ್ದಾಗ ಆತನ ಜೀರ್ಣಾಂಗ ವ್ಯವಸ್ಥೆ ನಿಧಾನವಾಗುತ್ತದೆ ಇಂಥ ಪರಿಸ್ಥಿತಿಯಲ್ಲಿ ಉಪವಾಸ ಮುರಿಯುವ ದಿನ ಎಳನೀರು ದ್ರವ ಆಹಾರದ ಬದಲು ಹೊಟ್ಟೆ ತುಂಬಾ ಭರ್ಜರಿ ಮೃಷ್ಟಾನ್ನ ತಿಂದುಬಿಟ್ಟರೆ ಕರುಳಿನ ಮೇಲೆ ಏಕಾಏಕಿ ಒತ್ತಡ ಹೆಚ್ಚಾಗುತ್ತೆ. ದೀರ್ಘ ಉಪವಾಸದ ನಂತರ ಫುಲ್ ಊಟ ಸೇವಿಸಿಬಿಟ್ಟರೆ ಹೊಟ್ಟೆ ಭಾರ, ಸೆಳೆತ ಉಂಟಾಗಿ ಅರಗಿಸಿಕೊಳ್ಳೋದು ಕಷ್ಟವಾಗಿ ವಾಂತಿ, ಗಂಭೀರ ಜೀರ್ಣಕಾರಿ ಸಮಸ್ಯೆಗಳು ಅಥವಾ ರಿಫೀಡಿಂಗ್ ಸಿಂಡ್ರೋಮ್ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಹಲವು ದಿನಗಳ ಕಾಲ ಉಪವಾಸವಿದ್ದ ದೇಹ ಸಾಮಾನ್ಯ ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಸಹಾಯ ಮಾಡಲು ಹಗುರವಾದ, ಸುಲಭವಾಗಿ ಜೀರ್ಣವಾಗುವ ದ್ರವಗಳೊಂದಿಗೆ ಪ್ರಾರಂಭಿಸುವುದು ಯಾವಾಗಲೂ ಉತ್ತಮ.
ದೀರ್ಘ ಉಪವಾಸದ ಬಳಿಕ ನೇರ ಊಟ ಮಾಡಿದರೆ ಅಪಾಯವೇ?
ಉಪವಾಸ ಸತ್ಯಾಗ್ರಹದಲ್ಲಿರುವ ವ್ಯಕ್ತಿ ದಿನ, ತಿಂಗಳಗಟ್ಟಲೆ ಅನ್ನ ನೀರು ಸೇವಿಸದಿರುವುದರಿಂದ ತೀವ್ರ ಹಸಿವಿನಿಂದಾಗಿ ದೇಹದಲ್ಲಿ ಗ್ಲೂಕೋಸ್ ಮಟ್ಟವು ವೇಗವಾಗಿ ಕಡಿಮೆಯಾಗುತ್ತದೆ, ಇದರಿಂದ ನಿಶ್ಯಕ್ತಿ, ತಲೆತಿರುಗುವಿಕೆ, ಅಸ್ವಸ್ಥತೆ ಉಂಟಾಗುತ್ತದೆ. ಹದಿನೆಂಟನೆ ದಿನದಂದು ಸೋನಾಮ್ ವಾಂಗ್ಚುಕ್ ಶೌಚಾಲಯಕ್ಕೂ ಹೋಗಲು ಅಸಾಧ್ಯವಾಯಿತು. ಒಂಭತ್ತು ಕೆಜಿ ತೂಕ ಕಳೆದುಕೊಂದರು, ಎದ್ದೇಳಾಗದಷ್ಟು ಶಕ್ತಿ ಕಳೆದುಕೊಂಡರು. ಇಂಥ ಪರಿಸ್ಥಿತಿಯಲ್ಲಿ ಉಪವಾಸ ಮುರಿಯುವಾಗ ಊಟದ ಬದಲು ತೆಂಗಿನ ನೀರು, ತಾಜಾ ಹಣ್ಣಿನ ರಸ ಒಳ್ಳೆಯದು. ಇದು ನೈಸರ್ಗಿಕ ಸಕ್ಕರೆಗಳಿಂದ ಸಮೃದ್ಧವಾಗಿರುವುದರಿಂದ ಇವುಗಳನ್ನು ಕುಡಿದಾಗ, ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಸಿಹಿಯು ನೇರವಾಗಿ ರಕ್ತಪ್ರವಾಹಕ್ಕೆ ಹೀರಲ್ಪಡುತ್ತದೆ, ಸೆಕೆಂಡುಗಳಲ್ಲಿ ದೇಹವನ್ನು ಚೈತನ್ಯಗೊಳಿಸುತ್ತದೆ. ಇದು ಮೆದುಳು ಮತ್ತು ಹೃದಯ ಕೋಶಗಳಿಗೆ ಬಹಳ ದಿನಗಳಿಂದ ಅಗತ್ಯವಿರುವ ತಕ್ಷಣದ ಶಕ್ತಿಯನ್ನು ಒದಗಿಸುತ್ತದೆ.
ದೇಹದಲ್ಲಿ ಖನಿಜ ಸಮತೋಲ
ಉಪವಾಸ ನಿರತರಾಗಿದ್ದಾಗ ದೇಹವು ನೀರು ಮತ್ತು ಅಗತ್ಯ ಖನಿಜಗಳನ್ನು ಕಳೆದುಕೊಳ್ಳುತ್ತದೆ. ನಿರ್ಜಲೀಕರಣಕ್ಕೆ ಕಾರಣವಾಗುತ್ತೆ. ತೆಂಗಿನಕಾಯಿ ನೀರು ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವುದರಿಂದ ಇದನ್ನು ಪ್ರಕೃತಿಯ ಅತ್ಯುತ್ತಮ ಲವಣಯುಕ್ತವೆಂದು ಪರಿಗಣಿಸಲಾಗುತ್ತದೆ. ದೀರ್ಘಕಾಲದ ಉಪವಾಸವು ಸ್ನಾಯು ಸೆಳೆತ ಹೃದಯ ಬಡಿತದಲ್ಲಿ ಏರುಪೇರು ಉಂಟಾಗಬಹುದು. ತೆಂಗಿನಕಾಯಿ ನೀರು ಅಥವಾ ನಿಂಬೆ-ಜೇನುತುಪ್ಪದ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಖನಿಜ ಮಟ್ಟವನ್ನು ಮತ್ತೆ ಸುಧಾರಿಸುವ ಮೂಲಕ ಸ್ನಾಯುಗಳು, ನರಗಳು ಮತ್ತೆ ಸರಿಯಾಗಿ ಕೆಲಸ ಅನುವು ಮಾಡಿಕೊಡುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಶಕ್ತಿ
ೀರ್ಘಕಾಲದ ಉಪವಾಸದ ನಂತರ ಊಟದ ಬದಲು ದ್ರವ ಆಹಾರಗಳು ಸೇವಿಸುವುದರಿಂದ ಮೊದಲ 24 ರಿಂದ 48 ಗಂಟೆಗಳ ಕಾಲ ಕರುಳನ್ನು ಕೇವಲ ಹಗುರವಾದ ದ್ರವ ಪದಾರ್ಥ ತೆಂಗಿನ ನೀರು, ಸೂಪ್ ನೀಡಲಾಗುತ್ತೆ. ಹೊಟ್ಟೆಯು ದ್ರವಗಳನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾದ ನಂತರ ಕ್ರಮೇಣ ಗಂಜಿ, ಆಮೇಲೆ ಅಂತಿಮವಾಗಿ ಸಾಮಾನ್ಯ ಆಹಾರ ಸೇವಿಸಲಾಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

