ಬೇಕಿಂಗ್ ಸೋಡಾ, ಈನೋ ಇಲ್ದೆ ಒಂದೇ ಗಂಟೆಯಲ್ಲಿ ದೋಸೆ/ಇಡ್ಲಿ ಹಿಟ್ಟು ಹುಳಿ ಬರ್ಬೇಕೆಂದ್ರೆ ಹೀಗೆ ಮಾಡಿ
cooking tips : ಇಡ್ಲಿ ಹಾಗೂ ದೋಸೆ ಹಿಟ್ಟು ಸರಿಯಾಗಿ ಹುಳಿ ಬಂದಿಲ್ಲ ಅಂದ್ರೆ ರುಚಿಯಾದ ಇಡ್ಲಿ/ ದೋಸೆ ತಯಾರಿಸೋದು ಕಷ್ಟ. ಹಿಟ್ಟು ಸರಿಯಾಗಿ ಹುದುಗಬೇಕು ಅಂದ್ರೆ ಆರರಿಂದ ಏಳು ಗಂಟೆ ಕಾಯ್ಬೇಕು. ಆದ್ರೆ ಸರಳ ಟ್ರಿಕ್ಸ್ ಬಳಸಿ ನೀವು ಒಂದು ಗಂಟೆಯಲ್ಲೇ ಬ್ಯಾಟರ್ ತಯಾರಿಸ್ಬಹುದು.

ಇಡ್ಲಿ – ದೋಸೆ
ದಕ್ಷಿಣ ಭಾರತೀಯರ ಅಚ್ಚುಮೆಚ್ಚಿನ ಉಪಹಾರ ಅಂದ್ರೆ ಇಡ್ಲಿ, ದೋಸೆ. ಗರಿಯಾದ, ರುಚಿಯಾದ ದೋಸೆ ಹಾಗೂ ಮೃದುವಾದ ಇಡ್ಲಿ ಬೇಕು ಅಂದ್ರೆ ಅದಕ್ಕೆ ಹಿಂದಿನ ದಿನದಿಂದಲೇ ತಯಾರಿ ಮಾಡ್ಬೇಕು. ಅಕ್ಕಿ – ಉದ್ದನ್ನು ನೆನೆ ಹಾಕಿ, ರುಬ್ಬಿ ಅದನ್ನು ರಾತ್ರಿ ಪೂರ್ತಿ ಇಟ್ಟರೆ ಚೆನ್ನಾಗಿ ಹುಳಿ ಬರುತ್ತೆ. ಆದ್ರೆ ಕೆಲ ಟೈಂನಲ್ಲಿ ನಮಗೆ ಇಷ್ಟೊಂದು ಸಮಯ ಹಿಟ್ಟನ್ನು ಇಡೋಕೆ ಸಾಧ್ಯವಾಗೋದಿಲ್ಲ. ಒಂದು ಗಂಟೆಯಲ್ಲಿ ಹಿಟ್ಟು ಸಿದ್ದವಾಗ್ಬೇಕು ಎನ್ನುವ ಆತುರದಲ್ಲಿದ್ರೆ ಒಂದು ಟ್ರಿಕ್ ಬಳಸಿ ಹಿಟ್ಟ ರೆಡಿ ಮಾಡ್ಬಹುದು.
ಪ್ರೆಶರ್ ಕುಕ್ಕರ್ ಟ್ರಿಕ್
ಸಮಯ ಕಡಿಮೆ ಇದೆ ಅನ್ನೋರು ಹಿಟ್ಟಿಗೆ ಉಪ್ಪು ಸೇರಿಸಿ ಒಂದು ಪಾತ್ರೆಗೆ ಹಾಕಿ. ಪ್ರೆಶರ್ ಕುಕ್ಕರ್ ಅನ್ನು ಸ್ವಲ್ಪ ಬಿಸಿ ಮಾಡಿ, ಅದರೊಳಗೆ ಬ್ಯಾಟರ್ ಇರುವ ಪಾತ್ರೆಯನ್ನು ಇರಿಸಿ. ಸೀಟಿ ಹಾಕದೆ ಮುಚ್ಚಳ ಮುಚ್ಚಿ, ಕಡಿಮೆ ಉರಿಯಲ್ಲಿ ಸುಮಾರು 5 ನಿಮಿಷ ಬಿಸಿ ಮಾಡಿ. ಬಳಿಕ ಗ್ಯಾಸ್ ಆಫ್ ಮಾಡಿ, ಒಂದು ಗಂಟೆ ಕುಕ್ಕರ್ನಲ್ಲೇ ಹಾಗೆಯೇ ಬಿಡಿ. ಒಳಗಿನ ಬೆಚ್ಚಗಿನ ವಾತಾವರಣ ಬ್ಯಾಟರ್ ಬೇಗ ಹುದುಗಲು ಸಹಾಯ ಮಾಡುತ್ತದೆ.
ಸರಿಯಾದ ಪಾತ್ರೆ ಬಳಸುವುದು ಮುಖ್ಯ
ಬ್ಯಾಟರ್ ಹುದುಗಲು ಪಾತ್ರೆಯ ಆಯ್ಕೆಯೂ ಮುಖ್ಯ. ಪ್ಲಾಸ್ಟಿಕ್ ಪಾತ್ರೆಗಳ ಬದಲಿಗೆ ಸ್ಟೇನ್ಲೆಸ್ ಸ್ಟೀಲ್ ಅಥವಾ ಜೇಡಿಮಣ್ಣಿನ ಪಾತ್ರೆ ಬಳಸಿದರೆ ಉತ್ತಮ. ಇವು ಹುದುಗುವಿಕೆಗೆ ಅನುಕೂಲಕರವಾದ ವಾತಾವರಣವನ್ನು ಕಾಪಾಡುತ್ತವೆ.
ಈ ಪದಾರ್ಥಗಳನ್ನು ಸೇರಿಸಿ ನೋಡಿ
ಬ್ಯಾಟರ್ ಬೇಗ ಹುದುಗಬೇಕೆಂದರೆ ಈ ಪದಾರ್ಥಗಳು ಕೂಡ ನಿಮಗೆ ಸಹಾಯ ಮಾಡುತ್ತವೆ. ಸ್ವಲ್ಪ ಕಲ್ಲು ಉಪ್ಪು, ಅರ್ಧ ಟೀ ಚಮಚ ಮೊಸರು, ಕಾಲು ಟೀ ಚಮಚ ಸಕ್ಕರೆ, ಕಾಲು ಟೀ ಚಮಚ ನಿಂಬೆ ರಸ ಇವೆಲ್ಲವನ್ನು ಬ್ಯಾಟರ್ಗೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಪಾತ್ರೆಯನ್ನು ಮುಚ್ಚಿ, ಗ್ಯಾಸ್ ಸ್ಟೌವ್ ಸಮೀಪದ ಬೆಚ್ಚಗಿನ ಸ್ಥಳದಲ್ಲಿ ಇಡಿ. ಇದರಿಂದ ಹುದುಗುವ ಪ್ರಕ್ರಿಯೆ ವೇಗವಾಗುತ್ತದೆ.
ಬೆಚ್ಚಗಿನ ಜಾಗದಲ್ಲಿ ಇಡಿ
ಚಳಿಗಾಲ ಅಥವಾ ಮಳೆಗಾಲದಲ್ಲಿ ಬ್ಯಾಟರ್ ಹುದುಗಲು ಹೆಚ್ಚು ಸಮಯ ಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಓವನ್ ಲೈಟ್ ಆನ್ ಮಾಡಿ ಅದರೊಳಗೆ ಅಥವಾ ಮನೆಯ ಬೆಚ್ಚಗಿನ ಮೂಲೆಯಲ್ಲಿ ಪಾತ್ರೆಯನ್ನು ಇಡುವುದರಿಂದ ಉತ್ತಮ ಫಲಿತಾಂಶ ಸಿಗಬಹುದು.
ನೆನೆಪಿರಲಿ
ಈ ವಿಧಾನಗಳು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸುವುದು ಸೂಕ್ತ. ನೈಸರ್ಗಿಕವಾಗಿ 4–7 ಗಂಟೆಗಳ ಕಾಲ ಹುದುಗಿದ ಬ್ಯಾಟರ್ನಿಂದ ಮಾಡಿದ ಇಡ್ಲಿ ಮತ್ತು ದೋಸೆ ರುಚಿ ಹೆಚ್ಚು. ಹಾಗೆಯೇ ಹೆಚ್ಚು ಮೃದುವಾಗಿರುತ್ತದೆ. ಜೀರ್ಣಕ್ರಿಯೆಯ ದೃಷ್ಟಿಯಿಂದ ಹೆಚ್ಚು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
