- Home
- Life
- Food
- ವಿಧವೆಯರ ಆಹಾರವಾಗಿತ್ತಂತೆ ಉಪ್ಪಿಟ್ಟು? ಈ ತಿಂಡಿ ಹುಟ್ಟಿಕೊಂಡಿದ್ದೇ ರೋಚಕ- ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ
ವಿಧವೆಯರ ಆಹಾರವಾಗಿತ್ತಂತೆ ಉಪ್ಪಿಟ್ಟು? ಈ ತಿಂಡಿ ಹುಟ್ಟಿಕೊಂಡಿದ್ದೇ ರೋಚಕ- ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ
ಒಂದು ಕಾಲದಲ್ಲಿ ವಿಧವೆಯರ ಆಹಾರವಾಗಿದ್ದ ಉಪ್ಪಿಟ್ಟು, ಇಂದು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿದೆ. ಉಪ್ಪು ಮತ್ತು ರವೆಯಿಂದ ತಯಾರಾಗುತ್ತಿದ್ದ ಈ ಸರಳ ಆಹಾರ, ಲಕ್ಷಮ್ಮ ಪಾಟಿ ಎಂಬ ಮಹಿಳೆಯಿಂದಾಗಿ ರುಚಿಕರ ತಿಂಡಿಯಾಗಿ ಬದಲಾಗಿ, ಉಪ್ಮಾ, ಖಾರಾ ಭಾತ್ ಎಂದು ಪ್ರಸಿದ್ಧಿಯಾಯಿತು.

ಉಪ್ಪಿಟ್ಟು ಎನ್ನುವ ಫೇಮಸ್ ತಿಂಡಿ
ಉಪ್ಪಿಟ್ಟು ಎನ್ನುವುದು ಇದೀಗ ಹಲವಾರು ಹೆಸರುಗಳಿಂದ ಹಲವು ಪ್ರದೇಶಗಳಲ್ಲಿ ಫೇಮಸ್ ಆಗಿದೆ. ಇದನ್ನು ಕಾಂಕ್ರೀಟ್ ಎಂದು ಹೇಳುವವರೂ ಹಲವರು ಇದ್ದಾರೆ. ಉಪ್ಪಿಟ್ಟು ತಿಂದೂ ತಿಂದೂ ಬೇಸರವಾಗಿ ಉಪ್ಪಿಟ್ಟು ಎಂದರೆ ಬೇಡಪ್ಪಾ ಬೇಡ ಎನ್ನುವವರು ಎಷ್ಟು ಮಂದಿ ಇದ್ದಾರೋ, ಅಷ್ಟೇ ಮಂದಿ ಈ ತಿಂಡಿಯನ್ನು ಪ್ರೀತಿಸುವವರೂ ಇದ್ದಾರೆ.
ಉಪ್ಪಿಟ್ಟು ಹುಟ್ಟಿಕೊಂಡದ್ದು ಹೇಗೆ?
ಹಾಗಿದ್ದರೆ ಉಪ್ಪಿಟ್ಟು ಹುಟ್ಟಿಕೊಂಡದ್ದು ಹೇಗೆ? ಇದರ ಇತಿಹಾಸವೇನು? ಇದಕ್ಕೆ ಈ ಹೆಸರು ಬರಲು ಕಾರಣವೇನು? ಇದರ ಹಿಂದಿದೆ ರೋಚಕ ಸ್ಟೋರಿ. ರೇಡಿಯೋಸಿಟಿ ಕನ್ನಡಕ್ಕೆ ಆರ್ಜೆ ಕಿರಣ್ ಹೆಬ್ಬಾಳೆ ಅವರು ಇದರ ರೋಚಕ ಸ್ಟೋರಿಯನ್ನು ಹೇಳಿದ್ದಾರೆ.
ವಿಧವೆಯರ ಆಹಾರ
ಅಂದಹಾಗೆ ಉಪ್ಪಿಟ್ಟು ವಿಧವೆಯರ ಆಹಾರವಾಗಿತ್ತಂತೆ! ಹಿಂದಿನ ಕಾಲದಲ್ಲಿ ಗಂಡ ಸತ್ತ ಬಳಿಕ ಹೆಣ್ಣಿನ ಮೇಲೆ ಅದ್ಯಾವ ಪರಿಯ ಶೋಷಣೆ ನಡೆಯುತ್ತಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಗಂಡನ ಚಿತೆಯಲ್ಲಿ ಹೆಣ್ಣು ಸಾಯುವಂಥ ಹೀನಾತಿಹೀನ ಪದ್ಧತಿಯೂ ಇದ್ದ ಕಾಲವದು. ವಿಧವೆಯರು ಎಂದರೆ ಅತ್ಯಂತ ಹೀನಾಯವಾಗಿ ನೋಡುವ ಸ್ಥಿತಿಯಲ್ಲಿ ಹುಟ್ಟಿಕೊಂಡಿದ್ದಂತೆ ಈ ಉಪ್ಪಿಟ್ಟು.
ಬೇರೆ ಆಕರ್ಷಣೆ ಬೇಡ
ಗಂಡ ಸತ್ತ ಬಳಿಕ ಹೆಣ್ಣಿಗೆ ಬೇರೆ ಗಂಡಿನ ಕಡೆ ಆಕರ್ಷಣೆಯಾಗಬಾರದು ಎನ್ನುವ ಕಾರಣಕ್ಕೆ ಆಕೆಯನ್ನು ಒಂದು ಕಡೆ ದೂರವೇ ಇಡುತ್ತಿದ್ದರು. ಉಪ್ಪು,ಹುಳಿ,ಖಾರ ತಿಂದರೆ ಆಕೆಗೆ ದೈಹಿಕ ವಾಂಛೆ ಶುರುವಾಗಬಹುದು ಎನ್ನುವ ಕಾರಣಕ್ಕೆ ಬಿಸಿನೀರಿನಲ್ಲಿ ರವೆಯನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಕೊಡುತ್ತಿದ್ದರಂತೆ. ಉಪ್ಪಿನಿಂದ ಮಾಡಿದ ಈ ಹಿಟ್ಟಿನ ರೂಪದ ಆಹಾರವೇ ಉಪ್ಪಿಟ್ಟು ಆಗಿದೆ ಎನ್ನುವುದು ಅವರ ಮಾತು.
ಮಗನಿಗಾಗಿ ರೆಡಿಯಾಯ್ತು
ಲಕ್ಷಮ್ಮ ಪಾಟಿ ಎನ್ನುವ ಮಹಿಳೆ ನೌಕರಿಗೆ ಹೋಗಿ ವಾಪಸ್ ಬರುವ ತಮ್ಮ ಮಗನಿಗಾಗಿ ಇದೇ ಆಹಾರಕ್ಕೆ ಸ್ವಲ್ಪ ಉಪ್ಪು, ಹುಳಿ, ಖಾರ, ತೆಂಗಿಯ ತುರಿ ಎಲ್ಲವನ್ನೂ ಹಾಕಿ ಕೊಟ್ಟಾಗ ಅದಕ್ಕೆ ಒಂದು ರುಚಿ ಬರುತ್ತದೆ. ಅವರು ಕಚೇರಿಯಲ್ಲಿ ಎಲ್ಲರಿಗೂ ಹಂಚಿದಾಗ ಅದು ಟೇಸ್ಟಿ ಎನ್ನಿಸುತ್ತದೆ. ಅಲ್ಲಿಂದ ಕಚೇರಿಯಲ್ಲಿ ಇರುವವರೆಲ್ಲಾ ತಮ್ಮ ಅಮ್ಮಂದಿರಿಂದ ಇದೇ ತಿಂಡಿ ಮಾಡಿ ತರುತ್ತಾರೆ.
ಉಪ್ಪಿಟ್ಟು ಫೇಮಸ್
ಅಲ್ಲಿಂದ ಉಪ್ಪಿಟ್ಟು ಫೇಮಸ್ ಆಗಿದೆ ಎಂದು ಇದರ ಹಿಂದಿನ ರೋಚಕ ಸ್ಟೋರಿಯಲ್ಲಿ ತೆರೆದಿಟ್ಟಿದ್ದಾರೆ ಆರ್ಜೆ ಕಿರಣ್ ಹೆಬ್ಬಾಳೆ. ಬಳಿಕ ಈ ಆಹಾರ ವಿವಿಧ ಪ್ರದೇಶಗಳಲ್ಲಿ ಉಪ್ಮಾ, ಉಪ್ಪಿಂಡಿ, ಖಾರಾ ಭಾತ್ ಇತ್ಯಾದಿಗಳಿಂದ ಫೇಮಸ್ ಆಗಿದೆ. ಕರ್ನಾಟಕ, ತಮಿಳುನಾಡು ಮತ್ತು ತೆಲುಗು ರಾಜ್ಯಗಳಲ್ಲಿ ಇದು ಬಹಳ ಜನಪ್ರಿಯ ಆಹಾರವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

