ನಾಗರಪಂಚಮಿ ವಿಶೇಷ : ಅರಿಶಿಣ ಎಲೆ ಕಡುಬು ಮಾಡುವ ಸುಲಭ ವಿಧಾನ
ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ ಇದೇ ಜು. 29ರಂದು ಇದನ್ನು ನಾಡಿನೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ದಿನ ಕೆಲ ವಿಶೇಷ ತಿಂಡಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಮುಖ್ಯವಾದುದು ಅರಿಶಿಣ ಎಲೆ ಕಡುಬು ಮಾಡುವ ವಿಧಾನ ಇಲ್ಲಿದೆ.

ನಾಗರ ಪಂಚಮಿ ವಿಶೇಷ ತಿನಿಸು
ಇನ್ನೇನು ಆಷಾಢ ತಿಂಗಳು ಕಳೆದು ಶ್ರಾವಣ ಬರುತ್ತಿದ್ದಂತೆ ಒಂದೊಂದೇ ಹಬ್ಬಗಳು ಶುರುವಾಗುತ್ತವೆ. ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ ಇದನ್ನು ನಾಡಿನೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ದಿನ ಕೆಲ ವಿಶೇಷ ತಿಂಡಿಗಳನ್ನು ಮಾಡಲಾಗುತ್ತದೆ.
ಅರಿಶಿಣ ಎಲೆ ಕಡುಬು
ಈ ರೀತಿಯ ವಿಶೇಷ ತಿಂಡಿಗಳಲ್ಲಿ ಅರಿಶಿನ ಎಲೆಯಿಂದ ತಯಾರಿಸಲಾಗುವ ಅರಿಶಿಣ ಎಲೆ ಕಡುಬು ಕೂಡ ಒಂದು. ಕೆಲವರು ಇದನ್ನು ಅರಿಶಿಣ ಎಲೆ ಹಿಟ್ಟು, ಅರಿಶಿನ ಎಲೆ ಕಡುಬು ಪಾಥೋಳಿ ಎಂದೆಲ್ಲಾ ಕರೆಯುತ್ತಾರೆ.
ದಕ್ಷಿಣ ಕನ್ನಡ ಮಲೆನಾಡು ಕರಾವಳಿ ಭಾಗದ ವಿಶೇಷ ತಿನಿಸು
ಸಾಮಾನ್ಯವಾಗಿ ಇದನ್ನು ನಾಗರಪಂಚಮಿ ಹಬ್ಬದಂದು ದಕ್ಷಿಣ ಕನ್ನಡ ಕರಾವಳಿ ಕೊಡಗು ಭಾಗದಲ್ಲಿ ಮಾಡುತ್ತಾರೆ. ಹೀಗಿರುವಾಗ ನಾಗರಪಂಚಮಿ ಹಬ್ಬಕ್ಕೆ ಮಾಡುವ ಈ ತಿನಿಸನ್ನು ಸುಲಭವಾಗಿ ಮನೆಯಲ್ಲೇ ಮಾಡುವುದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು
ಬೇಕಾಗುವ ಸಾಮಗ್ರಿಗಳು
ದೋಸೆಗೆ ಬಳಸುವ ಎರಡೂವರೆ ಕಪ್ ಬೆಳ್ತಿಗೆ ಅಕ್ಕಿ(ಎರಡೂವರೆ ಗ್ಲಾಸ್)
ಬೆಲ್ಲ ಒಂದು ಕಪ್(ಒಂದು ಗ್ಲಾಸ್)
ಅರಿಶಿಣದ ಹಸಿರು ಎಲೆಗಳು -20
ತುರಿದ ತೆಂಗಿನ ಕಾಯಿ ಎರಡೂವರೆ ಕಪ್
ಏಲಕ್ಕಿ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಅಕ್ಕಿಯನ್ನು ನೆನೆಸಿಡಿ
ಮೊದಲಿಗೆ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ, ಬೆಳಗ್ಗೆ ಈ ಕಡುಬು ಮಾಡ್ತಿರಿ ಅಂತಾದ್ರೆ ರಾತ್ರಿಯೇ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಬಹುದು 3ರಿಂದ 4 ಗಂಟೆ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ.
ನುಣ್ಣಗೆ ರುಬ್ಬಿ
ಹೀಗೆ ನೀರಲ್ಲಿ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ತುಸು ಉಪ್ಪು(ರುಚಿಗೆ ತಕ್ಕಷ್ಟು) ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಜಾಸ್ತಿ ನೀರು ಹಾಕಿ ಹಿಟ್ಟು ನೀರಾಗುವಂತೆ ಮಾಡಬೇಡಿ, ನುಣ್ಣಗೆ ರುಬ್ಬಲು ಎಷ್ಟು ಬೇಕೋ ಅಷ್ಟು ನೀರು ಹಾಕಿ.
ಜಾಸ್ತಿ ನೀರು ಹಾಕಬೇಡಿ
ಏಕೆಂದರೆ ಹಿಟ್ಟು ತುಸು ಗಟ್ಟಿಯಾಗಿದ್ರೆ ಒಳ್ಳೆದು, ಇಲ್ಲದಿದ್ದರೆ ಎಲೆಗೆ ಮೆತ್ತುವ ವೇಳೆ ಅದು ಹರಿದು ಹೋಗಿ ಬಿಡುತ್ತದೆ. ಹೀಗಾಗಿ ಹಿಟ್ಟು ಅರಿಶಿಣದ ಎಲೆಯ ಮೇಲೆ ಹಿಡಿದುಕೊಳ್ಳುವುವಷ್ಟು ದಪ್ಪ ಇರಬೇಕು.
ಹೂರಣಕ್ಕಾಗಿ ಬೆಲ್ಲವನ್ನು ಕರಗಿಸಿ
ಹಿಟ್ಟು ಕಡೆದಿಟ್ಟುಕೊಂಡ ನಂತರ (ಮಿಕ್ಸಿ ಮಾಡಿದ ನಂತರ) ಈಗ ಹಿಟ್ಟಿನ ಒಳಗೆ ಇಡುವಂತಹ ಹೂರಣವನ್ನು ಸಿದ್ಧಪಡಿಸಿಕೊಳ್ಳಬೇಕು. ಇದಕ್ಕಾಗಿ ಮೊದಲಿಗೆ ಬೆಲ್ಲವನ್ನು ಕರಗಿಸಿ ಇಟ್ಟುಕೊಳ್ಳಿ, ಬೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿ ಅರ್ಧ ಗ್ಲಾಸ್ ನೀರು ಹಾಕಿ ಅದನ್ನು ಗ್ಯಾಸ್‌ನ ಮೇಲೆ ಇಟ್ಟು ಕರಗಿಸಿ.
ಕರಗಿದ ಬೆಲ್ಲಕ್ಕೆ ತುರಿದ ತೆಂಗಿನ ಕಾಯಿ ಸೇರಿಸಿ
ಬೆಲ್ಲವನ್ನು ಪಾಕ ಮಾಡುವ ಅಗತ್ಯವಿಲ್ಲ, ಜಸ್ಟ್ ಅದು ಕರಗಿದರೆ ಸಾಕು. (ಕೆಲವರು ಬೆಲ್ಲವನ್ನು ಕರಗಿಸುವ ಬದಲು ಚಾಕುವಿನಲ್ಲಿ ತುರಿದು ಕೂಡ ಹಾಕ್ತಾರೆ ಹಾಗೂ ಮಾಡಬಹುದು). ಈಗ ಕರಗಿದ ಬೆಲ್ಲಕ್ಕೆ ಕಾಯಿತುರಿಯನ್ನು ಮಿಶ್ರಣ ಮಾಡಿ. ಅದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ 2 ನಿಮಿಷ ಚೆನ್ನಾಗಿ ತಿರುಗಿಸಿ ಸ್ಟೌ ಮೇಲಿಂದ ಇಳಿಸಿ.
ಸ್ಟೌ ಮೇಲೆ ಇಡ್ಲಿ ಪಾತ್ರೆಯಲ್ಲಿ ನೀರು ಬಿಸಿಯಾಗಲು ಇಡಿ
ಈಗ ಇಡ್ಲಿ ಪಾತ್ರೆಯೊಂದರಲ್ಲಿ ಸ್ವಲ್ಪ ನೀರು ಇಟ್ಟು ಸ್ಟೌ ಮೇಲೆ ಬಿಸಿ ಆಗೋದಕ್ಕೆ ಬಿಡಿ, ಆ ನೀರು ಬಿಸಿಯಾಗಿ ಹಬೆ ಬರುವುದಕ್ಕೆ ಬಿಡಿ. ಈ ಸಮಯದಲ್ಲಿ ನೀವು ಅರಿಶಿಣ ಎಲೆಯನ್ನು ಚೆನ್ನಾಗಿ ತೊಳೆದು ನೀರು ಒರೆಸಿ ನಂತರ ಒಂದೊಂದೇ ಅರಿಶಿಣದ ಎಲೆಗೆ ನೀವು ಮೊದಲೇ ಮಾಡಿಟ್ಟ ಹಿಟ್ಟನ್ನು ಕೈಯಲ್ಲಿ ಮೆತ್ತನೆಯಾಗಿ ಸವರಿ,
ಈಗ ಅರಿಶಿಣದ ಎಲೆಗೆ ಹಿಟ್ಟನ್ನು ಮೆತ್ತಿ
ಈ ಹಿಟ್ಟು ಎಲೆಯಿಂದ ಹರಿದು ಹೊರಗೆ ಹೋಗುವಷ್ಟು ತೆಳ್ಳಗೆ ಇರಬಾರದು. ಈಗ ಹಿಟ್ಟು ಸವರಿದ ಎಲೆಯ ಮೇಲೆ ಮೊದಲೇ ಸಿದ್ಧಪಡಿಸಿದ ತೆಂಗಿನಕಾಯಿ ಬೆಲ್ಲದ ಹೂರಣವನ್ನು ಹಿಟ್ಟಿನ ಮೇಲೆ ಹರವಿ ನಂತರ ಸರಿ ಮಧ್ಯಕ್ಕೆ ಎಲೆಯನ್ನು ಮಡಚಿ ನಂತರ ಸೈಡ್‌ನಲ್ಲೂ ಎಲೆ ತೆರೆದುಕೊಳ್ಳದಂತೆ ಕೈಯಲ್ಲಿ ಮೆತ್ತಗೆ ಒತ್ತಿ
ಇಡ್ಲಿ ಪಾತ್ರಯೊಳಗೆ ಬೇಯಲು ಇಡಿ
ಬಳಿಕ ಒಲೆ ಮೇಲೆ ಇರುವ ಇಡ್ಲಿ ಪಾತ್ರೆಯಲ್ಲಿ ಅಟ್ಟಣಿಗೆ ಇಟ್ಟು ಒಂದೊಂದೇ ಹಿಟ್ಟನ್ನು ಇದೇ ರೀತಿ ಮಾಡಿ ಇಡುತ್ತಾ ಹೋಗಿ. ಎಲ್ಲಾ ಎಲೆಗಳಿಗೂ ಹೀಗೆ ಹಿಟ್ಟು ಮೆತ್ತಿ ಹೂರಣ ತುಂಬಿದ ನಂತರ ಪಾತ್ರೆಯೊಳಗೆ ಇಟ್ಟ ಮೇಲೆ ಇಡ್ಲಿ ಪಾತ್ರೆಯ ಮುಚ್ಚಳವನ್ನು ಮುಚ್ಚಿ
ಅರಿಶಿಣ ಎಲೆ ಹಿಟ್ಟು ರೆಡಿ
ಇದನ್ನು ಅರ್ಧ ಗಂಟೆ ಬೇಯಿಸುವುದಕ್ಕೆ ಬಿಡಿ. ಅರ್ಧ ಗಂಟೆಯ ನಂತರ ಗ್ಯಾಸ್ ಆಫ್ ಮಾಡಿ ಈಗ ಮುಚ್ಚಳ ತೆಗಿರಿ ಅರಿಶಿಣ ಎಲೆ ಕಡುಬು ಅಥವಾ ಅರಿಶಿನ ಎಲೆ ಹಿಟ್ಟು ಈಗ ರೆಡಿ, ಅದನ್ನು ತುಪ್ಪದ ಜೊತೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ.